ಕಾರಟಗಿ ಪಟ್ಟಣದ ಹುಲಿಗೆಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಭಾನುವಾರ ಘಟಸ್ಥಾಪನೆ ಮಾಡುವ ಮೂಲಕ ನಾಡಹಬ್ಬ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಗೊಂಡವು.
ಕಾರಟಗಿ: ಪಟ್ಟಣದ ಹುಲಿಗೆಮ್ಮ ದೇವಿ ದೇವಸ್ಥಾನ ಸೇರಿದಂತೆ ವಿವಿಧ ದೇವಿ ದೇವಸ್ಥಾನಗಳಲ್ಲಿ ಭಾನುವಾರ ಘಟಸ್ಥಾಪನೆ ಮಾಡುವ ಮೂಲಕ ನಾಡಹಬ್ಬ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಗೊಂಡವು.
ಸಾಲೋಣಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ, ಜೆಪಿ ನಗರದ ಶ್ರೀ ದೇವಿ ದೇವಸ್ಥಾನದಲ್ಲಿ ಬೆಳಗ್ಗೆ ನಿಗದಿತ ಮುಹೂರ್ತದಲ್ಲಿ ಘಟಸ್ಥಾಪನೆ, ಧ್ವಜಾರೋಹಣ ಮತ್ತು ಕಳಸಾರೋಹಣ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ಪ್ರಾರಂಭಗೊಂಡವು.ಸಾಲೋಣಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ೨೨ನೇ ವರ್ಷದ ಶರನ್ನವರಾತ್ರಿ ಉತ್ಸವಗಳು ಬೆಳಗ್ಗೆ ನಿಗದಿತ ಮುಹೂರ್ತ ೬.೧೫ಕ್ಕೆ ಸುಪ್ರಭಾತ, ಪಂಚಾಮೃತ, ಅಭಿಷೇಕ, ಅಲಂಕಾರ ಪೂಜೆಗಳು ನಡೆದವು. ಉತ್ಸವದ ನಿಮಿತ್ತ ಪ್ರತಿದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಅಭಿಷೇಕಗಳನ್ನು ನಡೆಸಲಾಗುತ್ತಿದೆ. ಜತೆಗೆ ಹುಲಿಗೆಮ್ಮ ದೇವಿ ಅಲಂಕಾರ ಮಾಡಲಾಗುವುದು ಎಂದು ಅರ್ಚಕ ಸಂತೋಷ ಆಚಾರ್ ತಿಳಿಸಿದರು.
ಜೆಪಿನಗರ: ಪಟ್ಟಣದ ಜೆಪಿ ನಗರದ ಶ್ರೀದೇವಿ ದೇವಸ್ಥಾನದಲ್ಲಿ ೨೫ನೇ ವರ್ಷದ ಶರನ್ನವರಾತ್ರಿ ಉತ್ಸವಗಳು ಪ್ರಾರಂಭಗೊಂಡವು. ಬೆಳಗ್ಗೆ ದೇವಸ್ಥಾನ ಆವರಣದಲ್ಲಿ ಭಾಗಧ್ವಜ ಏರಿಸುವ ಜತೆಗೆ ಕಳಸಾರೋಹಣ ಮತ್ತು ಘಟಸ್ಥಾಪನೆ ನಡೆಯಿತು. ದೇವಸ್ಥಾನದಲ್ಲಿ ಬೆಳಗ್ಗೆ ದೇವಸ್ಥಾನ ಸಮಿತಿ ಸದಸ್ಯರ ಸಮ್ಮುಖದಲ್ಲಿ ಪೂಜೆಗಳು ಪ್ರಾರಂಭಗೊಂಡವು. ಪ್ರತಿದಿನ ಸಂಜೆ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಪುರಾಣ ಪ್ರವಚನ ನಡೆಯಲಿದೆ. ವಿಜಯದಶಮಿ ಮರುದಿನ ಅ. ೨೨ರಂದು ಶ್ರೀದೇವಿ ರಥೋತ್ಸವದಲ್ಲಿ ಕೇವಲ ಮಹಿಳೆಯರು ರಥ ಎಳೆಯುವರು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.ವಾಸವಿನಗರ: ಇಲ್ಲಿನ ವಾಸವಿ ನಗರದಲ್ಲಿನ ವಾಸವಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವಗಳು ಪ್ರಾರಂಭವಾದವು. ಪ್ರಾಥಮಿಕ ಹಂತದ ಪೂಜೆಗಳನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದ ಅರ್ಚಕರು, ವಾಸವಿ ಅಮ್ಮನವರಿಗೆ ಮೊದಲ ದಿನ ಅರಿಶಿಣ ಕುಂಕುಮ ಅಲಂಕಾರ ಮಾಡಿದರು. ನವರಾತ್ರಿ ಉತ್ಸವ ನಿಮಿತ್ತ ದೇವಸ್ಥಾನದಲ್ಲಿ ಆರ್ಯವೈಶ್ಯ ಸೇವಾ ಸಂಘದಿಂದ ನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದೇವಿಕ್ಯಾಂಪ್: ಪಟ್ಟಣದ ಹೊರವಲಯದ ವಾರ್ಡ್ ೨೩ರ ವ್ಯಾಪ್ತಿಗೆ ಬರುವ ದೇವಿಕ್ಯಾಂಪಿನ ರತ್ನಗಿರಿ ಪರ್ವತದ ಶ್ರೀ ದೇವಿ ಬೀರೇಶ್ವರ ದೇವಸ್ಥಾನದಲ್ಲಿ ೩೭ನೇ ವರ್ಷದ ನವರಾತ್ರಿ ಉತ್ಸವ ಅತ್ಯಂತ ಸಡಗರ -ಶ್ರದ್ಧಾಭಕ್ತಿಯಿಂದ ಪ್ರಾರಂಭವಾದವು. ಉತ್ಸವ ನಿಮಿತ್ತ ಇಡೀ ಕ್ಯಾಂಪ್ ದೇವಿ ಅಮ್ಮನವರ ಸೇವೆ ಸಲ್ಲಿಸಲು ಹಗಲಿರಳು ಶ್ರಮಿಸುತ್ತಿದೆ. ಒಟ್ಟು ೧೧ ದಿನಗಳ ಕಾಲ ದೇವಿಗುಡ್ಡದಲ್ಲಿ ವಿವಿಧ ಧಾರ್ಮಿಕ ಪೂಜೆ, ಪುರಾಣ, ಪ್ರವಚನ ಚಂಡೀಪಾರಾಯಣ, ವಿಹಿತಹೋಮಗಳು ನಡೆಯುತ್ತವೆ. ಭಾನುವಾರ ಬೆಳಗ್ಗೆ ೫ ಗಂಟೆಗೆ ಗಣಪತಿ ಪೂಜೆಯೊಂದಿಗೆ ಶರನ್ನವರಾತ್ರಿ ಉತ್ಸವಗಳ ಚಾಲನೆಗೊಂಡವು. ಆನಂತರ ದೇವಿಅಮ್ಮನವರ ಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ನಡೆಯಿತು. ಮೊದಲ ದಿನ ರಜತಾಲಂಕೃತ ಶ್ರೀ ದೇವಿದೇವಮ್ಮನವರ ಅಲಂಕಾರ ಭಕ್ತರ ಕಣ್ಮನ ಸೆಳೆಯಿತು. ಪ್ರಧಾನ ಅರ್ಚಕ ಪವನಾಚಾರ್ಯ ಮತ್ತು ವಿದ್ಯಾನಂದಸ್ವಾಮಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜೆಗಳು ನಡೆಯುತ್ತಿವೆ.