ಆಶ್ವೀಜ ಶುದ್ಧ ಪಾಡ್ಯ ನಿಮಿತ್ತ ಭಾನುವಾರ ರಾಜ್ಯಾದ್ಯಂತ ಶರನ್ನವರಾತ್ರಿ ಉತ್ಸವ ಆರಂಭಗೊಂಡಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಶ್ವೀಜ ಶುದ್ಧ ಪಾಡ್ಯ ನಿಮಿತ್ತ ಭಾನುವಾರ ರಾಜ್ಯಾದ್ಯಂತ ಶರನ್ನವರಾತ್ರಿ ಉತ್ಸವ ಆರಂಭಗೊಂಡಿತು.ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಶಾರದಾ ಪೀಠದ ಅಧಿದೇವತೆ ಶಾರದಾಂಬೆಗೆ ಭಾನುವಾರ ಹಂಸವಾಹಿನಿಯ ಅಲಂಕಾರ ಮಾಡಲಾಗಿತ್ತು. ಹಂಸವಾಹಿನಿ ಅಲಂಕಾರದಲ್ಲಿ ಸೃಷ್ಠಿಕರ್ತ ಬ್ರಹ್ಮನ ಶಕ್ತಿ ಪಡೆದ ಬ್ರಾಹ್ಮಿಯಾಗಿ ಬ್ರಹ್ಮನ ವಾಹನ ಹಂಸವನ್ನೇರಿ ವಿಜೃಂಭಿಸಿಸುವ ಶಾರದೆಯ ಅಲಂಕಾರ ಭಕ್ತರ ಮನಸೂರೆಗೊಳ್ಳುವಂತಿತ್ತು.
ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ 2026ಕ್ಕೆ ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಬೆಳಗ್ಗೆ ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ನಡೆದು ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ದೇವಿಯರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಮಂಗಳೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದೆ.ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಕರಗ ಉತ್ಸವಕ್ಕೆ ನಗರದ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಭಾನುವಾರ ನಗರದ ಶಕ್ತಿದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ದೊರೆಯಿತು. ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ, ದಂಡಿನ ಮರಿಯಮ್ಮ ಹಾಗೂ ಕೋಟೆ ಮಾರಿಯಮ್ಮಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಚಾಲನೆ ನೀಡಿದರು.
ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿಯೂ ಭಾನುವಾರ ಶರನ್ನವರಾತ್ರಿ ಉತ್ಸವ ಭಕ್ತಿ ಮತ್ತು ಸಡಗರದಿಂದ ಆರಂಭವಾಗಿದೆ. ಮೊದಲ ದಿನ ಪುಣ್ಯಾಹ ಕ್ರೀಯೆ, ಘಟಸ್ಥಾಪನೆ (ನವಾಕ್ಷರಿ ಕಲಶ) ಮತ್ತು ಕಲ್ಪೋಕ್ತ ಪೂಜೆಗಳು ನಡೆದಿದ್ದು, ಪ್ರತಿದಿನ ವಿಶೇಷ ನವದುರ್ಗಾ ಅಲಂಕಾರ ಹಾಗೂ ಪೂಜೆಗಳು ನಡೆಯುತ್ತವೆ.ದಾವಣಗೆರೆಯಲ್ಲಿ ಭಾನುವಾರ ಬೆಳಗ್ಗೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್‌ನಿಂದ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಿದ್ದ ನವರಾತ್ರಿ ಹಾಗೂ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ। ಪ್ರಭಾ ಮಲ್ಲಿಕಾರ್ಜುನ್, ಶಾಸಕ ಸಮರ್ಥ ಶಾಮನೂರು ಸೇರಿದಂತೆ ಅವರ ಕುಟುಂಬದವರು ತಾಯಿ ದುರ್ಗಾ ಮಾತೆಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ದೀಪ ಬೆಳಗುವ ಮೂಲಕ ನವರಾತ್ರಿ, ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಇದೇ ವೇಳೆ, ತುಮಕೂರು ದಸರಾ, ಶಿವಮೊಗ್ಗ ದಸರಾ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ, ಸವದತ್ತಿ ಎಲ್ಲಮ್ಮ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ, ಶಿರಸಿ ಮಾರಿಕಾಂಬಾ, ಕಟೀಲು, ಬಪ್ಪನಾಡು, ಉಚ್ಚಿಲ ಸೇರಿ ರಾಜ್ಯದ ಇತರೆಡೆಯೂ ನವರಾತ್ರಿ ಉತ್ಸವಗಳು ಭಾನುವಾರ ಆರಂಭಗೊಂಡವು.