ಶರನ್ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

| Published : Oct 01 2024, 01:34 AM IST

ಸಾರಾಂಶ

ನಗರದ ಶ್ರೀ ಶಾರದಾ ಶಂಕರಮಠದಲ್ಲಿ ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಅತ್ಯಂತ ವೈಭವದಿಂದ ಆಚರಣೆ: ಅ.3 ರಂದು ಮಹಾಸಂಕಲ್ಪ ಗಣಪತಿ ಪೂಜೆ, ಘಟಸ್ಥಾಪನೆ

ಕನ್ನಡಪ್ರಭ ವಾರ್ತೆ ಗಂಗಾವತಿ

ನಗರದ ಶ್ರೀ ಶಾರದಾ ಶಂಕರಮಠದಲ್ಲಿ ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಮಹೋತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ ಎಂದು ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.

ಇಲ್ಲಿನ ಶಂಕರ ಮಠದ ಕಾರ್ಯಾಲಯದಲ್ಲಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸ್ವರ್ಣ ಮಹೋತ್ಸವದ ಅಂಗವಾಗಿ ಶರನ್ನನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಅ.2 ಭಾದ್ರಪದ ಕೃಷ್ಣ ಪಕ್ಷ ಅಮಾವಾಸ್ಯೆಯ ದಿನದಿಂದ ಶ್ರೀ ಶಾರದಾಂಬೆ ದೇವಿಗೆ ಮಹಾಭಿಷೇಕ ಜಗತ್‍ಪ್ರಸೂತಿ ಅಲಂಕಾರದಿಂದ ಆರಂಭಗೊಳ್ಳುವ ನವರಾತ್ರಿ ಮಹೋತ್ಸವ ಅ.3 ರಂದು ಮಹಾಸಂಕಲ್ಪ ಗಣಪತಿ ಪೂಜೆ, ಘಟಸ್ಥಾಪನೆ, ಅಮ್ಮನವರಿಗೆ ಮಹಾಭಿಷೇಕ, ತ್ರಿಶತಿ ಕುಂಕುಮಾರ್ಚನೆ ಸೇರಿದಂತೆ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ದಿನಂಪ್ರತಿ ಜರಗಲಿದ್ದು, ಈ ಬಾರಿ ಒಂದು ಕೋಟಿ ಅಧಿಕ ಲಲಿತ ಸಹಸ್ರನಾಮಾವಳಿ ಪಾರಾಯಣ ಹಾಗೂ ಕುಂಕುಮಾರ್ಚನೆ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಯಾವುದೇ ಭೇದಭಾವವಿಲ್ಲದೆ ಸರ್ವ ಜನಾಂಗದವರು ವಿಶೇಷವಾಗಿ ಮಹಿಳೆಯರು ಪಾಲ್ಗೊಳ್ಳುವುದರ ಮೂಲಕ ಶ್ರೀ ಶಾರದಾ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹೇಳಿದರು.

ಅ.4 ರಿಂದ 10 ರವರೆಗೆ ಬೆಳಗ್ಗೆ ಶ್ರೀ ಶಾರದಾ ದೇವಿಗೆ ತ್ರಿಶತಿ ಸಹಸ್ರನಾಮರ್ಚನೆ ಜರುಗಲಿದ್ದು, ಪ್ರತಿದಿನ ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಹಾಗೂ ಸೌಂದರ್ಯ ಲಹರಿ ಪಾರಾಯಣ ಮಂಡಳಿಗಳ ಹಾಗೂ ಸಮಸ್ತ ಭಜನಾ ಮಂಡಳಿಗಳ ಸಹಯೋಗದೊಂದಿಗೆ ಭಜನೆ ಸೇವೆ ಅಷ್ಟಾವಧಾನ ಸೇವೆ ಜರುಗಲಿದೆ. ಅ. 11ರಂದು ಪ್ರತಿನಿತ್ಯದಂತೆ ಪೂಜೆ, ನವಚಂಡಿ ಹವನ, ಪೂರ್ಣಾಹುತಿ ಜರುಗಲಿದ್ದು, ದಶಮಿಯ ದಿನದಂದು ವಿಜಯದಶಮಿಯ ವಿಜಯೋತ್ಸವ ದಶಮಿ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ಈ ಸಂದರ್ಭ ರಾಘವೇಂದ್ರ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶ್ರೀನಿವಾಸ ಕರಮುಡಿಕರ್, ವೇಣುಗೋಪಾಲ್, ಶೇಷಗಿರಿ ಗಡಾದ್ ಸೇರಿದಂತೆ ಇತರರಿದ್ದರು.