ಸಾರಾಂಶ
ಸಿದ್ದಾಪುರ ತಾಲೂಕಿನ ಭವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಅ. ೩ರಿಂದ ಅ. ೧೨ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು ಹೇಳಿದರು.
ಸಿದ್ದಾಪುರ: ತಾಲೂಕಿನ ಭವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಅ. ೩ರಿಂದ ಅ. ೧೨ರ ವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಹಿತಿ ನೀಡಿ, ಒಂಬತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಉತ್ಸವವನ್ನು ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇವೆ. ಪ್ರತಿದಿನ ಬೆಳಗ್ಗೆ ಸಂಕಲ್ಪ, ಪೂಜೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಸಪ್ತಶತಿ ಪಾರಾಯಣ ನಡೆಯಲಿದ್ದು, ಸಂಜೆ ವಿಶೇಷ ಅಲಂಕಾರಗಳೊಂದಿಗೆ ಮಹಾಪೂಜೆ ನಡೆಯುತ್ತದೆ. ಅ. ೧೨ರಂದು ವಿಜಯದಶಮಿ ದಿನದಂದು ಬನ್ನಿ ಪೂಜೆ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆಯೊಂದಿಗೆ ಶರನ್ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.ಸುಷಿರ ಸಂಗೀತ ಪರಿವಾರದ ಸಂಯೋಜಕ ನಾರಾಯಣ ಹೆಗಡೆ ಕಲ್ಲಾರೆಮನೆ ಮಾತನಾಡಿ, ಶರನ್ನವರಾತ್ರಿ ಉತ್ಸವದ ಅಂಗವಾಗಿ ಸುಷಿರ ಸಂಗೀತ ಪರಿವಾರ ಕಲ್ಲಾರೆಮನೆ ಅವರ ಸಂಯೋಜನೆಯಲ್ಲಿ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ಆರರಿಂದ ಎಂಟು ಗಂಟೆ ವರೆಗೆ ನಡೆಯಲಿದ್ದು, ಅ. ೩ರಂದು ಭಜನೆ, ೪ರಂದು ಲಘು ಶಾಸ್ತ್ರಿಯ ಮತ್ತು ಭಕ್ತಿ ಸಂಗೀತ, ಅ. ೫ರಂದು ತಾಳಮದ್ದಲೆ, ಅ. ೬ರಂದು ಭಜನೆ ಮತ್ತು ಭರತನಾಟ್ಯ, ಅ. ೭ರಂದು ಲಘು ಶಾಸ್ತ್ರಿಯ ಮತ್ತು ಭಕ್ತಿ ಸಂಗೀತ, ಅ. ೮ರಂದು ಭರತನಾಟ್ಯ ಮತ್ತು ಭಕ್ತಿ ಸಂಗೀತ, ಅ. ೯, ೧೦ ಮತ್ತು ೧೧ರಂದು ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯ ಜಯರಾಮ ಭಟ್ ಗುಂಜಗೋಡು, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಒಡ್ಡೋಲಗ ಹಿತ್ಲಕೈ ಮುಖ್ಯಸ್ಥ ಗಣಪತಿ ಹೆಗಡೆ ಇದ್ದರು.