ಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ: ಸುವರ್ಣ ಹಿರೇಗೌಡರ

| Published : Feb 08 2024, 01:31 AM IST

ಸಾರಾಂಶ

ಶೋಷಣೆ ಮುಕ್ತ ಸಮಾಜದ ಕನಸು ಕಂಡ ಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಶೋಷಣೆ ಮುಕ್ತ ಸಮಾಜದ ಕನಸು ಕಂಡ ಶರಣರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯ. ಮಹಿಳಾ ಸ್ವಾತಂತ್ರ್ಯದ ಕ್ರಾಂತಿಕಾರಕ ಬದಲಾವಣೆಗೂ ಮುನ್ನುಡಿಯಾಗಿವೆ ಎಂದು ಅಕ್ಕಿಆಲೂರು ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಸುವರ್ಣ ಹಿರೇಗೌಡರ ತಿಳಿಸಿದರು.

ಇಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ ಫಕ್ಕೀರಪ್ಪ ಮಹಾರಾಜಪೇಟ ದತ್ತಿ ಉಪನ್ಯಾಸ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜಮುಖಿ ಚಿಂತನೆಯ ಕೊರತೆ ಈಗ ಕಾಣುತ್ತಿದೆ. ಎಲ್ಲರೂ ಒಂದಾಗಿ ಬದುಕುವ ಜೀವನ ವಿಧಾನವನ್ನು ವಚನಕಾರರು ಬೋಧಿಸಿದರು. ಶರಣರ ನಡೆ ಆರ್ಥಿಕ, ಸಾಮಾಜಿಕ, ಹಿತ ಕಾಯಲು ಮುಂದಾಗಿತ್ತು. ಇಂದು ಸಂಸ್ಕಾರದ ಕೊರತೆಯಿಂದ ಸಾಮಾಜಿಕ ವೈಕಲ್ಯಗಳು ವಿಜೃಂಭಿಸುತ್ತಿವೆ. ಶಿಕ್ಷಣ ಸಂಸ್ಕಾರಯುತವಾಗಿರಬೇಕು. ಸಾವಿತ್ರಿಬಾಯಿ ಫುಲೆಯಂತಹ ಹೋರಾಟಗಾರರ ಪರಿಶ್ರಮದ ಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಾಯಿತು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಅನಿತಾ ಕಿತ್ತೂರ, ಶರಣ ಸಾಹಿತ್ಯ ಸರ್ವ ಜನಾಂಗದ ಶಾಂತಿಯ ತೋಟ. ಇಂದು ತಾರತಮ್ಯವಿಲ್ಲದೆ ಎಲ್ಲರೂ ಸಾಮಾಜಿಕ ನ್ಯಾಯದೊಂದಿಗೆ ಬದುಕುವ ಸತ್ಯ ಸಂದೇಶಗಳನ್ನು ಒಪ್ಪಿ ನಡೆಯಬೇಕಾಗಿದೆ. ಶರಣರ ವಿಚಾರಧಾರೆಗಳು ಎಲ್ಲರ ಮನೆ ಮನ ಮುಟ್ಟಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ರವಿಬಾಬು ಪೂಜಾರ, ಸ್ತ್ರೀ ಪುರುಷರೆಂಬ ಭೇದ ಭಾವ ಬೇಡ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆಗೆ ಗೌರವ ಮಾನ್ಯತೆಗಳು ಸಿಗುತ್ತವೆ. ಶರಣರು ಸಮಾಜಕ್ಕಾಗಿ ಎಂಥದೇ ಕಷ್ಟ ಬಂದರೂ ಹಿಂದೆ ಸರಿಯದೇ ತಮ್ಮ ನಿಲುವಿಗೆ ಬದ್ಧರಾಗಿದ್ದರು ಎಂದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರೇಖಾ ಶೆಟ್ಟರ ಆಶಯ ನುಡಿ ನುಡಿದರು. ಗೌರವಾರ್ಧಕ್ಷೆ ಅಕ್ಕಮ್ಮ ಶೆಟ್ಟರ, ಶಸಾಪ ಜಿಲ್ಲಾಧ್ಯಕ್ಷ ಪ್ರೊ. ಮಾರುತಿ ಶಿಡ್ಲಾಪೂರ, ತಾಲೂಕು ಅಧ್ಯಕ್ಷ ಎಸ್.ಸಿ. ಕಲ್ಲನಗೌಡರ, ಕಾರ್ಯದರ್ಶಿಗಳಾದ ಎಸ್.ವಿ. ಹೊಸಮನಿ, ಪ್ರವೀಣ ಬ್ಯಾತನಾಳ, ಸುಮಂತ ತುಪ್ಪದ, ಎಂ.ಎಸ್. ಅಮರದ, ಮಲ್ಲಿಕಾರ್ಜುನ ಶಿಡ್ಲಾಪೂರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಜಾತಾ ನಂದೀಶೆಟ್ಟರ, ಶಿಕ್ಷಕಿ ರೂಪಾ ಗೌಳಿ, ಸವಿತಾ ಉದಾಸಿ, ಕಮಲಾಕ್ಷಿ ಕೊಂಡೋಜಿ, ವೀಣಾ ಗುಡಿ, ಶ್ರೀದೇವಿ ಕೋಟಿ, ವಿಜಯಲಕ್ಷ್ಮೀ ಹಳ್ಳೀಕೇರಿ, ಸಮಂಗಲಾ ಕಟ್ಟಿಮಠ, ಜ್ಯೋತಿ ಬಲ್ಲದ, ಅಕ್ಕಮ್ಮ ಕುಂಬಾರಿ, ಶಿಲ್ಪಾ ಹಿರೇಮಠ, ಶಾಂತಕ್ಕ ಹೊಳಲದ ವಚನ ಹಾಡಿದರು.