ರಕ್ತವಲ್ಲ ಭಕ್ತಿ ಚೆಲ್ಲಿ ಕ್ರಾಂತಿ ಮಾಡಿದ ಶರಣರು

| Published : Feb 02 2025, 11:47 PM IST

ಸಾರಾಂಶ

ಮಡಿವಾಳ ಮಾಚಿದೇವರು ವಚನಗಳ ಮೂಲಕ ಸಮಾಜದ ಕೊಳಕು ತೊಳೆದು ಹಾಕಿದವರು.

ಬಳ್ಳಾರಿ: ಮಡಿವಾಳ ಮಾಚಿದೇವರು ವಚನಗಳ ಮೂಲಕ ಸಮಾಜದ ಕೊಳಕು ತೊಳೆದು ಹಾಕಿದವರು. ಶರಣರು ರಕ್ತ ಚೆಲ್ಲಿ ಕ್ರಾಂತಿ ಮಾಡಿದವರಲ್ಲ, ಭಕ್ತಿ ಚೆಲ್ಲಿ ಕ್ರಾಂತಿ ಮಾಡಿದರು. ಆ ಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು ಎಂದು ಬೆಳಗಾವಿ ಜಿಲ್ಲೆಯ ಝಂಜರವಾಡನ ಮಾಚಿದೇವ ಯೋಗ ಮಂದಿರ ಟ್ರಸ್ಟ್ ನ ಬಸರಾಜೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಶನಿವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಮಾಚಿದೇವರು ಸಮಾಜದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು. ಸರ್ವರಿಗೂ ಸಮಪಾಲು- ಸಮಬಾಳು ಒದಗಿಸಲು ಶರಣರ ಅಗ್ರ ಗಣ್ಯ ಬಳಗದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದವರು ಎಂದರು.

ಕ್ರಿ.ಶ. 1120ರಲ್ಲಿ ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ತಂದೆ ಪರುವತಯ್ಯ ತಾಯಿ ಸುಜ್ನಾನವ್ವ ದಂಪತಿಯ ಮಗನಾಗಿ ಮಡಿವಾಳ ಮಾಚಿದೇವರು ಜನಿಸಿದರು. ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ‘ಮಡಿ’ ಮಾಡಿ ಮುಟ್ಟಿಸುವ ಕಾಯಕ ಇವರದ್ದಾಗಿತ್ತು ಎಂದು ವಿವರಿಸಿದರು.

12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದರು. ಮಡಿವಾಳ ಸಮುದಾಯದ ಜನರಲ್ಲಿ ವಿಶಾಲ ಮನೋಧರ್ಮ ಇದೆ. ಎಂದು ಹೇಳಿದರು.

ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. 12ನೇ ಶತಮಾನದ ಕಾಲದಲ್ಲಿ ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ವಚನಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಮಡಿವಾಳರ ಸಂಘ ಅಧ್ಯಕ್ಷ ಎನ್.ಧನಂಜಯ ಹಮಲ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಎಂ.ನಾಗಭೂಷಣ ಬಾಪುರ ತಂಡದಿಂದ ವಚನ ಗಾಯನ ಪ್ರಸ್ತುತ ಪಡಿಸಿದರು.

ಸಂಭ್ರಮದ ಮೆರವಣಿಗೆ:

ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನೊಳಗೊಂಡು ಸಂಭ್ರಮದಿಂದ ನಡೆಯಿತು.

ಮೆರವಣಿಗೆಗೆ ನಗರದ ಡಾ.ರಾಜಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದಲ್ಲಿ ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಚಾಲನೆ ನೀಡಿದರು.

ಮೆರವಣಿಗೆಯು ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರುಬೀದಿ, ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.