ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಶರಾವತಿ ನದಿಗೆ ಲಿಂಗನಮಕ್ಕಿ ಹಾಗೂ ಗೇರುಸೊಪ್ಪದಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆಗಾಗಿ ಭಾರಿ ಪ್ರತಿಭಟನೆಯ ನಡುವೆಯೇ ಜಲಾಶಯ ನಿರ್ಮಿಸಲಾಗಿದೆ. ಈಗ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮೂಲಕ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆ ಶರಾವತಿ ಕೊಳ್ಳದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಯೋಜನೆಯಿಂದ ಏನಾಗಲಿದೆ? ಲಾಭ ಹಾನಿಯ ಲೆಕ್ಕಾಚಾರ ಹಾಗೂ ವಾಸ್ತವಿಕ ಚಿತ್ರಣವನ್ನು ತೆರೆದಿಡುವ ಸರಣಿ ವರದಿಯನ್ನು ಕನ್ನಡಪ್ರಭ ಪ್ರಕಟಿಸಲಿದೆ.ರಾಜ್ಯ ಸರ್ಕಾರ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಮೂಲಕ ಶರಾವತಿ ಕಣಿವೆಯಲ್ಲಿ 2000 ಮೆಗಾವ್ಯಾಟ್ ಸಾಮರ್ಥ್ಯದ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ.
ಯೋಜನೆ ಜಾರಿ ಸಾಧ್ಯಾಸಾಧ್ಯತೆಗಳ ಬಗ್ಗೆ ಕೇಂದ್ರ ಸರ್ಕಾರದ 13 ವಿವಿಧ ಇಲಾಖೆಗಳು, ನಿರ್ದೇಶನಾಲಯಗಳು ಪರಿಶೀಲಿಸಿ ಅನುಮತಿಸಿದ ನಂತರವೇ ಕೆಪಿಸಿ ಈ ಯೋಜನೆ ಜಾರಿಗೆ ಉದ್ದೇಶಿಸಿದೆ.ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಈ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದನೆಯ ಈ ಯೋಜನೆಯನ್ನು ಕೆಪಿಸಿಎಲ್ ಅತಿ ಕಡಿಮೆ ಪರಿಸರ ಹಾನಿಯೊಂದಿಗೆ ಯೋಜನೆಯನ್ನು ಸಿದ್ಧಪಡಿಸಿದೆ.
ಈ ಯೋಜನೆ ಜಾರಿ ವೇಳೆ ಈಗಾಗಲೇ ನಿರ್ಮಾಣವಾಗಿರುವ ಗೇರುಸೊಪ್ಪ ಮತ್ತು ತಲಕಳಲೆ ಅಣೆಕಟ್ಟೆಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಅಣೆಕಟ್ಟೆ ನಿರ್ಮಾಣದಂತಹ ಕಾಮಗಾರಿ ಈ ಯೋಜನೆಯಲ್ಲಿ ಇಲ್ಲ. ಇನ್ನು ಭೂಮಿಯ ಆಳದಲ್ಲಿ ಟನಲ್ (ಸುರಂಗ) ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಸುರಂಗ ನಿರ್ಮಾಣದ ಭೂಮಿಯ ಮೇಲ್ಮನಲ್ಲಿ ಇರುವ ಮರ-ಗಿಡ-ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಪ್ರಸ್ತುತ ಇರುವ ರಸ್ತೆಯನ್ನೇ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಪ್ರಸ್ತುತ 3.5 ಮೀಟರ್ ಇರುವ ಈ ರಸ್ತೆಯನ್ನು ಅಗತ್ಯ ವಸ್ತುಗಳ ರವಾನೆಗೆ ಅನುವಾಗುವಂತೆ 5.5 ಮೀಟರ್ ವಿಸ್ತರಿಸಲು ಯೋಜಿಸಲಾಗಿದೆ ಎಂದು ಕೆಪಿಸಿಎಲ್ ಅಧಿಕಾರಿಗಳ ಅಂಬೋಣ.ಭೂಮಿಯ ಒಳಗೆ ಪಂಪ್ ಹೌಸ್ ಸೇರಲು ಸುರಂಗ ಪ್ರವೇಶಿಸುವ ಸ್ಥಳದಲ್ಲಿ ಮಾತ್ರ ಅಲ್ಪ ಪ್ರಮಾಣದ ಅರಣ್ಯ ಪ್ರದೇಶ ಬಳಕೆ ಮಾಡಿಕೊಳ್ಳಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಸುರಂಗದ ಪ್ರವೇಶ ದ್ವಾರದ ಸುತ್ತಮುತ್ತ ಅರಣ್ಯ ಪುನರ್ ನಿರ್ಮಾಣವಾಗಲಿದೆ. ಈ ಸಂಬಂಧ ಈಗಾಗಲೇ ರಾಜ್ಯ ಅರಣ್ಯ ಇಲಾಖೆ, ಕೇಂದ್ರ ಅರಣ್ಯ ಇಲಾಖೆ ಹಲವು ಭಾರಿ ಸ್ಥಳ ಪರಿಶೀಲನೆ ನಡೆಸಿ ಕನಿಷ್ಠ ಗಿಡ-ಮರಗಳ ಕಡಿತದೊಂದಿಗೆ ಯೋಜನೆ ಜಾರಿ ಮಾಡಲು ಕ್ರಮವಹಿಸಿವೆ.
ಶರಾವತಿ ಪಿಎಸ್ಪಿ ಯೋಜನೆ ಜಾರಿ ಪ್ರದೇಶದಲ್ಲಿ ಅಪರೂಪದ ಸಿಂಗಳೀಕಗಳು ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆಯು ತಿಳಿಸಿದೆ. ಸಿಂಗಳೀಕಗಳ ಸಂಚಾರಕ್ಕೆ ಸಹ ತೊಡಕಾಗದಂತೆ ಟ್ರೀ ಕ್ಯಾನೋಪಿ (ಮೇಲ್ಸೇತುವೆ) ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಪಂಪ್ಡ್ ಸ್ಟೋರೇಜ್ ಯೋಜನೆ ಆಗಿರುವ ಪರಿಣಾಮ ಅತಿ ಕಡಿಮೆ ಮತ್ತು ನೀರಿನ ದೀರ್ಘಾವಧಿ ಬಳಕೆಯೇ ಈ ಯೋಜನೆಯ ವಿಶೇಷತೆ. ಲಿಂಗನಮಕ್ಕಿ ಜಲಾಶಯದಲ್ಲಿ ವಾರ್ಷಿಕ ಸರಾಸರಿ 140 ರಿಂದ 220 ಟಿಎಂಸಿ ನೀರು ಸಂಗ್ರಹವಾಗುತ್ತದೆ.ಈ ನೀರನ್ನು ಬಳಕೆ ಮಾಡಿಕೊಂಡು ಈಗಾಗಲೇ ಜಲ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಈ ನೀರಿನ ಬಳಕೆಯಿಂದ ಜಲ ವಿದ್ಯುತ್ ಉತ್ಪಾದನೆ ನಂತರ ಕೃಷಿ, ಕುಡಿಯಲು, ಮೀನುಗಾರಿಗೆ ಸೇರಿದಂತೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಮತ್ತು ರೈತರು ಬಳಕೆ ಮಾಡಿಕೊಂಡ ನಂತರ ಆ ನೀರು ಸಮುದ್ರ ಸೇರುತ್ತಿದೆ. ಶರಾವತಿ ಈ ಯೋಜನೆ ಜಾರಿ ನಂತರವೂ ಈಗಿನ ಶರಾವತಿ ನೀರಿನ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ನೀರಿನ ಪ್ರಮಾಣದಲ್ಲಿ ಕೊರತೆ ಆಗುವುದಿಲ್ಲ.
ಈ ಯೋಜನೆಯಡಿ ಮುಂದಿನ 50-60 ವರ್ಷಗಳ ಅವಧಿಗೆ ಒಮ್ಮೆ ಮಾತ್ರ ಕೇವಲ 0.37 ಟಿಎಂಸಿ ನೀರನ್ನು ಬಳಕೆ ಮಾಡಲಾಗುವುದು. ಹೀಗಾಗಿ ಎಲ್ಲೆಡೆ ಈಗಿನಂತೆಯೇ ನೀರು ಹರಿಯಲಿದೆ ಮತ್ತು ಸಮುದ್ರಕ್ಕೂ ನೀರು ಸೇರಲಿದೆ.ಹಗಲು ವೇಳೆ ನವೀಕರಿಸಬಹುದಾದ ಇಂಧನ ಹೇರಳವಾಗಿ ಲಭ್ಯವಾಗಲಿದ್ದು, ಈ ಸಮಯದಲ್ಲಿ ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ನೀರು ಪಂಪ್ ಮಾಡಲಾಗುವುದು. ಹೆಚ್ಚು ಬೇಡಿಕೆ ಅವಧಿಯಲ್ಲಿ ಅಥವಾ ರಾತ್ರಿ ವೇಳೆ ವಿದ್ಯುತ್ ಉತ್ಪಾದಿಸಿ ಗ್ರಾಹಕರಿಗೆ ಪೂರೈಸಲಾಗುವುದು. ಈ ಯೋಜನೆಗೆ ನೀರಿನ ಬ್ಯಾಟರಿ ಎಂದು ಕರೆಯಬಹುದು.
ಯೋಜನೆಗೆ 100.645 ಹೆಕ್ಟೇರ್ ಪ್ರದೇಶ (248.7 ಎಕರೆ ಪ್ರದೇಶ)ವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ, 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ಅರಣ್ಯ ಪ್ರದೇಶ ಬಳಕೆ ವೇಳೆ ಕೈಗೊಳ್ಳಲಾಗುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೆಪಿಸಿ ಕೈಗೊಳ್ಳಲಿದೆ.ಶರಾವತಿ ಯೋಜನೆಯ ಚೀಫ್ ಎಂಜಿನಿಯರ್ (ಆಡಳಿತ ಮತ್ತು ನಿರ್ವಹಣೆ) ರಮೇಶ್, ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯ್ ಮತ್ತಿತರರು ಯೋಜನೆಯ ಕುರಿತು ಸಂಪೂರ್ಣ ವಿವರ ನೀಡಿದ್ದಾರೆ.