ಕನ್ನಡಪ್ರಭ ವಾರ್ತೆ ಭಟ್ಕಳ
ಜಿಲ್ಲೆಯಲ್ಲಿ ಅರಣ್ಯ, ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸುವ ನಿಟ್ಟಿನಲ್ಲಿ ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿ ಮಾಡಲು ಹೊರಟಿರುವುದು ತೀವ್ರ ಖಂಡನೀಯ. ಈ ಯೋಜನೆ ನಿಲ್ಲುವ ತನಕ ನಮ್ಮ ಹೋರಾಟ ನಿಲ್ಲದು ಎಂದು ಪರಿಸರವಾದಿ ಹಾಗೂ ಪಶ್ಚಿಮಘಟ್ಟಗಳ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.ಸುಬ್ರಹ್ಮಣ್ಯದ ಕುಮಾರಧಾರಾ ಉಳಿಸಿ ಹೋರಾಟದಲ್ಲಿ ಭಾಗವಹಿಸಲು ಶಿರಸಿಯಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಭಟ್ಕಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಉಂಟಾಗುತ್ತಿದೆ, ಈಗಾಗಲೇ ಅನೇಕ ಯೋಜನೆಗಳಿಗೆ ಭೂಮಿ ಕಳೆದುಕೊಂಡಿದ್ದೇವೆ, ಅಭಯಾರಣ್ಯ ಇದೆ. ಇಂತಹ ಸಂದರ್ಭದಲ್ಲಿ ಮಾರಕ ಯೋಜನೆ ಅನುಷ್ಠಾನಕ್ಕೆ ತರಲು ಹೊರಟಿರುವುದು ಸರಿಯಲ್ಲ. ಇದೊಂದು ಪರಿಸರ ವಿರೋಧಿ ಯೋಜನೆಯಾಗಿದೆ. ಪಶ್ಚಿಮಘಟ್ಟ ಉಳಿಸಿ ಹೋರಾಟ ಬಹಳ ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಈಗಾಗಲೇ ಜಿಲ್ಲೆಯಲ್ಲಿನ ಮಾರಕ ಯೋಜನೆಗಳ ವಿರುದ್ಧ ೨೦ನೇ ಶತಮಾನದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಅನೇಕ ಹೋರಾಟದಲ್ಲಿ ನಾವು ಜಯ ಗಳಿಸಿದ್ದೇವೆ. ಈಗ ೨೧ನೇ ಶತಮಾನದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದ್ದು ಈ ಯೋಜನೆ ನಿಲ್ಲುವ ತನಕ ನಮ್ಮ ಹೋರಾಟ ನಿಲ್ಲದು. ಇದು ಶರಾವತಿ ಅಭಯಾರಣ್ಯವನ್ನೇ ನುಂಗಿ ಹಾಕುವಂತಹ ಬೃಹತ್ ಜಲ ವಿದ್ಯುತ್ ಯೋನೆಯಾಗಿದ್ದು ನಮ್ಮ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಇಲ್ಲಿ ಭೂ ಕುಸಿತ, ಅರಣ್ಯ ನಾಶ, ಅಭಯಾರಣ್ಯದ ಕಾಯಿದೆ ಉಲ್ಲಂಘನೆ ಎಲ್ಲವನ್ನು ಈ ಯೋಜನೆ ಒಳಗೊಂಡಿದೆ ಎಂದರು.
ಇಡೀ ಪಶ್ಚಿಮ ಘಟ್ಟದ ಶಾಸಕರು, ಸಂಸದರು ಎಲ್ಲಾ ಜನಪ್ರತಿನಿಧಿಗಳು ಸೇರಿ ಒಕ್ಕೂರಲಿನಿಂದ ಯೋಜನೆಯನ್ನು ವಿರೋಧಿಸಬೇಕಾಗಿದೆ. ಬೇರೆ ಬೇರೆ ಪ್ರದೇಶದ ಜನಪ್ರತಿನಿಧಿಗಳು ಸೇರಿ ತಮ್ಮ ಭಾಗದ ಕುರಿತು ಸಭೆ ಸೇರಿ ವಿರೋಧಿಸುವಂತೆ, ನಮ್ಮ ಪಶ್ಚಿಮಘಟ್ಟದ ಜನಪ್ರತಿನಿಧಿಗಳು ಸಭೆ ಸೇರಿ ವಿರೋಧಿಸಬೇಕಾಗಿದೆ. ನಮ್ಮ ಜನಪ್ರತಿನಿಧಿಗಳು, ವಿಜ್ಞಾನಿಗಳು, ಉತ್ತಮ ಬೆಂಬಲ ಕೊಟ್ಟಿದ್ದಾರೆ. ಆದರೆ ಬೆಂಗಳೂರಿನಲ್ಲಿ ಈ ಬಗ್ಗೆ ಒಂದು ಸಭೆಯನ್ನು ಆಯೋಜಿಸಿ ಬಹಳ ದೊಡ್ಡದಾದ ಧ್ವನಿ ಎತ್ತಬೇಕಾಗಿದೆ ಎಂದೂ ಹೇಳಿದರು.ಪೂರ್ಣವಾಗಿ ಯೋಜನೆ ನಿಲ್ಲುವ ತನಕವೂ ನಮ್ಮ ಜನಾಂದೋಲನ ನಿಲ್ಲುವುದಿಲ್ಲ. ನಮ್ಮ ಹೋರಾಟ ಎಲ್ಲಾ ರೀತಿಗಳಲ್ಲಿಯೂ ನಡೆಯುತ್ತಿದೆ. ಈಗಾಗಲೇ ಸ್ವರ್ಣವಲ್ಲಿ ಸ್ವಾಮೀಜಿ ಜನಾಂದೋಲನದಲ್ಲಿ ತೊಡಗಿಸಿಕೊಂಡು ಮಹಾತ್ಮಾ ಗಾಂಧೀಜಿ ಮಾದರಿಯಲ್ಲಿ ಹೋರಾಟ ಮಾಡಿದ್ದಾರೆ. ಇಲ್ಲಿನ ರೈತರು, ಮೀನುಗಾರರು, ತೋಟಿಗರು ಎಲ್ಲರೂ ಕೂಡಾ ಕಷ್ಟದಲ್ಲಿದ್ದಾರೆ. ಇಲ್ಲಿ ಸಾವಯವ ಕೃಷಿ, ಜೇನು ಕೃಷಿ ಬೇಕು, ಜಿಲ್ಲೆಯಲ್ಲಿ ಬೇರೆ ಬೇರೆ ಯೋಜನೆಗಳಿಂದ ನಿರಾಶ್ರಿತರಾದವರಿಗೆ ಪುನರ್‌ವಸತಿ ಬೇಕು, ಭಟ್ಕಳದ ಎಂಡೋಸಲ್ಫಾನ್ ಪೀಡಿತರಿಗೆ ಪುನರ್‌ವಸತಿ ಬೇಕಾಗಿದೆ ಎಂದ ಅವರು, ಇವುಗಳನ್ನೆಲ್ಲ ಬಿಟ್ಟು ಮಾರಕ ಯೋಜನೆಯನ್ನು ಮಾಡಲು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಎಂದೂ ಬಿಡುವುದಿಲ್ಲ ಎಂದು ಹೇಳಿದರು.