ಬೆಂಗಳೂರಿಗೆ ಶರಾವತಿ ನದಿ ನೀರು ಒಯ್ಯುವ ನಿರ್ಧಾರದ ಪುನರ್ ಪರಿಶೀಲನೆ ಅಗತ್ಯ : ಸಂಸದ ಬಿ.ವೈ.ರಾಘವೇಂದ್ರ

| Published : Sep 11 2024, 01:16 AM IST / Updated: Sep 11 2024, 10:47 AM IST

BY Raghavendra
ಬೆಂಗಳೂರಿಗೆ ಶರಾವತಿ ನದಿ ನೀರು ಒಯ್ಯುವ ನಿರ್ಧಾರದ ಪುನರ್ ಪರಿಶೀಲನೆ ಅಗತ್ಯ : ಸಂಸದ ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

 ಸಾಗರ :  ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಿಧಾನ ವಾಗಲು ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವೇ ಕಾರಣ. ಸುಮಾರು 38 ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಈ ತನಕ ಪರಿಣಾಮಕಾರಿ ಪ್ರಯತ್ನ ನಡೆಸಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಸಾಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ನವದೆಹಲಿಗೆ ಬಂದಾಗ ಕೇಂದ್ರ ಸಚಿವರ ಸಮ್ಮುಖದಲ್ಲಿ ಮನವಿ ಸಹ ಮಾಡಲಾಗಿದೆ. ಆದರೆ ಭೂ ಸ್ವಾಧೀನ ಪ್ರಕ್ರಿಯೆಗೆ ಚುರುಕು ಸಿಕ್ಕಿಲ್ಲ. ತಮ್ಮ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ಖಂಡನೀಯ. ಅರಣ್ಯ ಇಲಾಖೆ ತನ್ನ ತಪ್ಪು ಮುಚ್ಚಿಕೊಳ್ಳಲು ಸುಪ್ರೀಂಕೋರ್ಟ್‌ನತ್ತ ಕೈ ತೋರಿಸಿ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ರೈತರ ಮೇಲಿನ ಗದಾಪ್ರಹಾರ ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ನಿರ್ಧಾರದ ಪುನರ್ ಪರಿಶೀಲನೆ ಅಗತ್ಯ. ಸ್ಥಳೀಯ ಶಾಸಕರು ಸಹ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಪರಿಸರವಾದಿಗಳು, ಸಂಘ ಸಂಸ್ಥೆಗಳು, ಬುದ್ಧಿಜೀವಿಗಳ ಜೊತೆ ಮಾತುಕತೆ ನಡೆಸಬೇಕು. ಸರ್ಕಾರ ಏಕಾಏಕಿ ಯೋಜನೆಯ ಸಾಧಕ ಬಾಧಕದ ಬಗ್ಗೆ ಯೋಚಿಸದೆ ಟೆಂಡರ್ ಕರೆಯುವ ಪ್ರಕ್ರಿಯೆ ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತನ್ನ ಯೋಜನೆಗಳಿಗೆ ಹಣ ಹೊಂದಿಸಲು ಟೋಲ್ ಮೂಲಕ ಹಣ ವಸೂಲಿಗೆ ಇಳಿದಿದೆ. ಕಾನೂನಿನ ಪ್ರಕಾರ 60 ಕಿ.ಮೀ.ಗೆ ಟೋಲ್ ಇರಬೇಕು. ಆದರೆ ರಾಜ್ಯ ಸರ್ಕಾರ 30 ಕಿ.ಮೀ.ಗೆ ಎರಡು ಟೋಲ್ ನಿರ್ಮಿಸಿ ಜನರಿಂದ ಹಣ ವಸೂಲಿಗೆ ಇಳಿದಿರುವ ಕ್ರಮ ಅವೈಜ್ಞಾನಿಕವಾಗಿದ್ದು, ಜನರ ಶೋಷಣೆ ಇದಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.