ರಾಜಧಾನಿಗೆ ಶರಾವತಿ ನೀರು: ಪ್ರತಿರೋಧ ಜೋರು

| Published : Oct 01 2024, 01:19 AM IST

ಸಾರಾಂಶ

ಹೊಸನಗರ ಪಟ್ಟಣದ ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ “ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟದವರ ಶರಾವರಿ ನದಿ ಕಣಿವೆ ಉಳಿಸಿ’’ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಸನಗರ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಅವೈಜ್ಞಾನಿಕ ಯೋಜನೆಯನ್ನು ವಿರೋಧಿಸಿ ಭಾನುವಾರ ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ‘ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟ’ದವರ ‘ಶರಾವರಿ ನದಿ ಕಣಿವೆ ಉಳಿಸಿ’ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಸರ್ಕಾರದ ಅವೈಜ್ಞಾನಿಕ ಯೋಜನೆಯನ್ನು ಈ ಕೂಡಲೇ ರದ್ದುಗೊಳಿಸಬೇಕು. ಯಾವುದೇ ಕಾರಣದಿಂದಲೂ ನಮ್ಮೂರಿನ ನೀರನ್ನು ಬೇರೆ ಕಡೆ ಹರಿಸಲು ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹೋರಾಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇನ್ನು, ಈ ಯೋಜನೆಯಿಂದಾಗಿ ಪರಿಸರ ಪ್ರಕೃತಿಯ ಮೇಲೆ ಮತ್ತು ಜೀವಸಂಕುಲಗಳ ದುಷ್ಪರಿಣಾಮ ಉಂಟಾಗುವುದು. ಆ ಕಾರಣದಿಂದಾಗಿ ಈಗಿರುವಂತೆ ಶಿವಮೊಗ್ಗ ಕಾರವಾರ ಜಿಲ್ಲೆಯ ರೈತರ ಜೀವನದಿಯಾಗಿರುವ ಶರಾವತಿಯ ನೀರನ್ನು ಹೊರಗೆ ಹರಿಸುವ ಸರ್ಕಾರದ ನಿರ್ಧಾರವನ್ನು ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುಬೇಕಾಗುವುದೆಂದು ಎಚ್ಚರಿಕೆ ನೀಡಿದರು.

ಕೇವಲ 135 ಕಿ.ಮೀ. ಹರಿಯುವ ಇಷ್ಟು ಚಿಕ್ಕ ನದಿಯ ಮೇಲೆ ಆಗಿರುವ ದೌರ್ಜನ್ಯ ಪ್ರಪಂಚದ ಬೇರೆ ಯಾವುದೇ ನದಿಯ ಮೇಲೂ ಆಗಿಲ್ಲ. ಇದು ನದಿ ತಿರುವು ಅಲ್ಲ. ಶರಾವತಿ ಅಪಹರಣ, ಇದೊಂದು ಹಾಸ್ಯಾಸ್ಪದ ಯೋಜನೆ ಆಗಿದೆ. ಹಿಂದೆ ಹಿರೇಭಾಸ್ಕರ ಅಣೆಕಟ್ಟು ನಿರ್ಮಿಸಿದ್ದರಿಂದ ಹೊನ್ನಾವರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ನದಿ ನೀರು ಸಮುದ್ರ ಸೇರುವವರೆಗೂ ಜೀವನಾಧಾರವಾಗಿರುವ ಹಲವು ಹಳ್ಳಿಗಳಿಗೆ ಸಂಕಷ್ಟ ಎದುರಾಗಿದೆ. ನದಿ ನೀರು ಸಮುದ್ರ ಸೇರುವುದು ಕಡಿಮೆಯಾದಲ್ಲಿ 15 ಕಿ.ಮೀ.ವರೆಗೆ ಉಪ್ಪು ನೀರು ನುಗ್ಗುತ್ತದೆ. ಅಲ್ಲಿನ ಜೀವವೈವಿಧ್ಯವೇ ಹಾಳಾಗುತ್ತಿದೆ. ಹಲವು ತಜ್ಞರು ಶರಾವತಿ ನೀರು ತಿರುವು ಅವೈಜ್ಞಾನಿಕ ಎಂದು ಹೇಳಿದ್ದರೂ, ಮತ್ತದೇ ಕಾರ್ಯಕ್ರಮವನ್ನು ಸರ್ಕಾರ ರೂಪಿಸುತ್ತಿದೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಸಾಕಷ್ಟು ಜನ ತಜ್ಞರು, ಹೋರಾಟಗಾರರು ಮಾತನಾಡಿ, ಶರಾವತಿ ವಿದ್ಯುತ್ ಯೋಜನೆಗಾಗಿ ಮನೆಮಠವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತಹ ಕುಟುಂಬಗಳಿಗೆ ಈವರೆಗೂ ಸರ್ಕಾರ ಸರಿಯಾಗಿ ಭೂಮಿಯ ಹಕ್ಕು ನೀಡುವಲ್ಲಿ ವಿಫಲವಾಗಿವೆ. ಈಗ ಪುನಃ ಬೆಂಗಳೂರಿಗೆ ಕುಡಿಯವ ನೀರಿನ ಯೋಜನೆಗಾಗಿ ಶರಾವತಿ ನೀರನ್ನು ಹರಿಸುವ ಯೋಜನೆಯಿಂದಾಗಿ ಮಲೆನಾಡಿನ ಪರಿಸರ ಪ್ರಕೃತಿಯ ವಿನಾಶ ಹಾಗೂ ಜೀವಸಂಕುಲದ ನಾಶ ಮಾಡುವ ಸರ್ಕಾರದ ಈ ನಿರ್ಧಾರವನ್ನು ಕೂಡಲೇ ಬದಲಾಯಿಸಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿ, ಸಚಿವರಿಗೆ ಮನವರಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ, ಹೋರಾಟದ ರೂಪುರೇಷೆ ಬಗ್ಗೆ ಹೋರಾಟ ಗಾರರ ಸಲಹೆ ಸೂಚನೆಗಳನ್ನು ಸಭೆಯಲ್ಲಿ ಪಡೆಯಲಾಯಿತು.

ಸಭೆಯಲ್ಲಿ ಪರಿಸರ ವೇದಿಕೆಯ ಅಖಿಲೇಶ್ ಚಿಪ್ಪಳ್ಳಿ, ಹೊನ್ನಾಲುಮಡಿಕೆ ಹೆಚ್.ಎಲ್.ರವಿ, ಇಂದೂಧರಗೌಡ, ನಾಗರಾಜ, ತೀ.ನಾ. ಶ್ರೀನಿವಾಸ, ಮಹಾದೇವಸ್ವಾಮಿ, ಸುಬ್ರಹ್ಮಣ್ಯ, ಪ್ರತಿಭಾ, ಆರ್.ಆರ್.ಪಂಡಿತ್, ರಾಘವೇಂದ್ರ ಸಾಗರ, ನ್ಯಾಯವಾದಿ ಕೆ.ವಿ.ಪ್ರವಿಣ್, ಹಕ್ರೆ ಮಲ್ಲಿಕಾರ್ಜುನ, ಯು.ಹೆಚ್.ರಾಮಪ್ಪ, ವಿನಾಯಕನಾಯ್ಕ್ ಮಾವಿನಕುಳಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವೀಂದ್ರ, ಕವಿತಾ, ಶಾರದಾ, ಪೂರ್ಣಿಮಾ, ದಿನೇಶ ಶಿರುವಾಳ, ಮಂಜುನಾಥ ಬ್ಯಾಣದ, ಶ್ರಾವ್ಯ ಶಿವಮೊಗ್ಗ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಅನಿತಾ, ಟಿ.ಆರ್.ಕೃಷ್ಣಪ್ಪ, ಕೆ.ಪಿ.ಟಿ.ಸಿ.ಎಲ್. ನಿವೃತ್ತ ನೌಕರ ಶರ್ಮಾ ಇನ್ನಿತರ ಹಲವರು ಮಾತನಾಡಿ, ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾವುದೇ ಹೋರಾಟ ನಡೆಸಲು ನಾವುಗಳು ಸದಾ ಸಿದ್ದರಿಂದು ಶರಾವತಿ ನೀರನ್ನು ಹೊರ ಹರಿಸುವ ಸರ್ಕಾರದ ಯೋಜನೆ ರದ್ದಾಗುವವರೆಗೂ ನಮ್ಮ ಹೋರಾಟ ಇದೆ ಅದರೊಂದಿಗೆ ಶರಾವತಿ ಮತ್ತು ಮಡೆನೂರು, ಹಿರೇಭಾಸ್ಕರ ಸೇರಿದಂತೆ ಹೊನ್ನಾವರ ಬಳಿಯಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಯೋಜನೆಯಿಂದಾಗಿ ಮನೆ-ಮಠವನ್ನು ಕಳೆದುಕೊಂಡಿರುವವರಿಗೆ ಸರ್ಕಾರ ಸ್ಪಂದಿಸಿ ಬದುಕು ಕಟ್ಟಿಕೊಳ್ಳುವಂತಹ ಯೋಜನೆ ರೂಪಿಸುವ ಬದಲು ಮತ್ತೆ ನಿರಾಶ್ರಿತರನ್ನು ಮುಳಗಿಸುವ ಯೋಜನೆ ರೂಪಿಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಮಠದ ಅಭಿನವ ಚನ್ನಬಸವ ಮಹಾಸ್ವಾಮೀಜಿ, ಕೆ.ಎಸ್.ಪ್ರಶಾಂತ, ಹಿರಿಯ ಸಾಹಿತಿ ಅಬ್ರಾಯ್ಯ ಮಠ, ಬಿ.ಜಿ.ನಾಗರಾಜ್, ಜಯಶೀಲಪ್ಪಗೌಡ ಹರತಾಳು, ಜಬ್ಬಗೋಡು ಹಾಲಪ್ಪಗೌಡ, ರುದ್ರಪ್ಪಗೌಡ, ಜಯಪ್ಪಗೌಡ, ಸುಗಂಧರಾಜ್ ಕಲ್ಮಕ್ಕಿ, ಸಮನ್ವಯ ಕಾಶಿ, ಇನ್ನಿತರ ಹಲವರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ಹೋರಾಟದ ರೂಪರೇಷೆ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.