ಕನ್ನಡಪ್ರಭ ವಾರ್ತೆ ರಾಮದುರ್ಗ ಕಬ್ಬಿನ ಇಳುವರಿಯಲ್ಲಿ ಶೇ.8-9ರಷ್ಟು ಇಳುವರಿ ಮತ್ತು ಸಕ್ಕರೆ ದರ ₹ 40 ಇದ್ದಾಗ ಪ್ರತಿ ಟನ್ ಕಬ್ಬಿಗೆ ₹ 3 ಸಾವಿರ ದರ ನೀಡಿರುವ ಇಐಡಿ ಪ್ಯಾರಿ ಕಂಪನಿಯು, ಈಗ 12-13 ಇಳುವರಿ ಹಾಗೂ ಸಕ್ಕರೆ ದರ ₹ 70ರಷ್ಟಿದೆ. ಈ ಬಾರಿ ಪ್ರತಿ ಟನ್‌ ಕಬ್ಬಿಗೆ ₹ 5,500 ದರ ನಿಗದಿ ಮಾಡಬೇಕು ಎಂದು ಷೇರುದಾರರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಕಬ್ಬಿನ ಇಳುವರಿಯಲ್ಲಿ ಶೇ.8-9ರಷ್ಟು ಇಳುವರಿ ಮತ್ತು ಸಕ್ಕರೆ ದರ ₹ 40 ಇದ್ದಾಗ ಪ್ರತಿ ಟನ್ ಕಬ್ಬಿಗೆ ₹ 3 ಸಾವಿರ ದರ ನೀಡಿರುವ ಇಐಡಿ ಪ್ಯಾರಿ ಕಂಪನಿಯು, ಈಗ 12-13 ಇಳುವರಿ ಹಾಗೂ ಸಕ್ಕರೆ ದರ ₹ 70ರಷ್ಟಿದೆ. ಈ ಬಾರಿ ಪ್ರತಿ ಟನ್‌ ಕಬ್ಬಿಗೆ ₹ 5,500 ದರ ನಿಗದಿ ಮಾಡಬೇಕು ಎಂದು ಷೇರುದಾರರು ಒತ್ತಾಯಿಸಿದರು.

ತಾಲೂಕಿನ ಖಾನಪೇಟೆಯ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬುಧವಾರ ಅಧ್ಯಕ್ಷ ಮಹಾದೇವಪ್ಪ ಯಾದವಾಡ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳು ಮಾತನಾಡಿ, ಸಕ್ಕರೆ ಜೊತೆ ಇತರೆ ಉತ್ಪನ್ನಗಳಾದ ಎಥೆನಾಲ್, ಕೋಜನರೇಶನ್ ಸೇರಿದಂತೆ ಹಲವು ಉತ್ಪನ್ನಗಳಿಂದ ಕಂಪನಿಗೆ ಹೆಚ್ಚು ಆದಾಯ ಬರುತ್ತಿದೆ. ಈ ಬಾರಿ ₹5,500 ದರ ನಿಗದಿ ಮಾಡಬೇಕು. ಪ್ಯಾರಿ ಕಂಪನಿಯ ಅಧಿಕಾರಿಗಳು ಸಭೆಯ ನಿರ್ಣಯಗಳನ್ನು ಮುಖ್ಯಕಚೇರಿಗೆ ತಿಳಿಸಲಾಗವುದು. ಕಬ್ಬು ನುರಿಸುವ ಪ್ರಾರಂಭಕ್ಕೆ ಮೊದಲು ದರ ನಿಗದಿ ಮಾಡಲಾಗುವುದು ಎಂದು ತಿಳಿಸಿದರು. ಲೀಜ್ ಪಡೆದಿರುವ ಇಐಡಿ ಪ್ಯಾರಿ ಕಂಪನಿಯು ಶ್ರೀ ಧನಲಕ್ದ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸೂಚಿಸುವ ಯಾವುದೇ ಮಾರ್ಗಸೂಚಿಗಳನ್ನು ಆರಂಭದಲ್ಲಿ ಪಾಲನೆ ಮಾಡಿದಂತೆ ಮಾಡಿ ನಂತರ ಅನುಸರಿಸುತ್ತಿಲ್ಲ. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ರೈತರೊಂದಿಗೆ ಅನುಸರಿಸಿಕೊಂಡು ಹೋಗಲು ತಿಳಿವಳಿಕೆ ನೀಡಬೇಕು. ರೈತರಿಂದ ಹೆಚ್ಚಿನ ಲಗಾಣಿ ವಸೂಲಿ ಮಾಡುತ್ತಿದ್ದಾರೆ. ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳನ್ನು ರಸ್ತೆ ಮೇಲೆಯೇ ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು. ಲೀಜ್ ಆಧಾರದಲ್ಲಿ ಕಾರ್ಖಾನೆ ನೀಡಿರುವ ಹಿನ್ನೆಲೆಯಲ್ಲಿ ಹಣ ಸಂಗ್ರಹಣೆಯ ಅಗತ್ಯವಿಲ್ಲದ ಕಾರಣ ಹೊಸದಾಗಿ ಷೇರುಗಳನ್ನು ಪಡೆಯುವುದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕಿ ಶಾಹೀನ್ ಅಖ್ತಾರ ತಿಳಿಸಿದರು.

ಹಿರಿಯರ ತ್ಯಾಗದ ಫಲವಾಗಿ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಸಾಲರಹಿತ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿದೆ. ಮುಂದಿನ ದಿನಗಳಲ್ಲಿ ಈಗಿರುವ 5 ಸಾವಿರ ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯವನ್ನು 7,500 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗುವುದು ಎಂದು ನಿರ್ದೇಶಕ ಮಲ್ಲಣ್ಣ ಯಾದವಾಡ ವಿವರಿಸಿದರು.

ತೊರಗಲ್ ಗಚ್ಚಿನ ಹಿರೇಮಠದ ಪೀಠಾಧಿಪತಿ ಚನ್ನಮಲ್ಲ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಉಪಾಧ್ಯಕ್ಷ ಬಿ.ಎಸ್.ಬೆಳವಣಿಕಿ ಸ್ವಾಗತಿಸಿದರು. ನಿರ್ದೇಶಕ ಬಸವರಾಜ ಹಿರೇರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಗೊರಾಬಾಳ ಅಢಾವೆ ಪತ್ರಿಕೆ ಮಂಡಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ, ಪ್ಯಾರಿ ಶುಗರ‍್ಸ ಸಿಬ್ಬಂದಿ, ಷೇರುದಾರರು ಪಾಲ್ಗೊಂಡಿದ್ದರು.