ಸಾರಾಂಶ
ಚುನಾವಣೆಯಲ್ಲಿ ಗಳಿಸಿದ ಹಿನ್ನೆಲೆ ನಗರಸಭೆ ಆವರಣದಲ್ಲಿ ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಡೊಳ್ಳು ವಾದ್ಯದೊಂದಿಗೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಿರಸಿ: ಪ್ರತಿಷ್ಠಿತ ಶಿರಸಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎರಡನೇ ಅವಧಿಯಲ್ಲಿಯೂ ಬಿಜೆಪಿ ಚುಕ್ಕಾಣಿ ಹಿಡಿದಿದ್ದು, ಅಧ್ಯಕ್ಷರಾಗಿ ಬಿಜೆಪಿಯ ಶರ್ಮಿಳಾ ಮಾದನಗೇರಿ ಹಾಗೂ ಉಪಾಧ್ಯಕ್ಷರಾಗಿ ರಮಾಕಾಂತ ಭಟ್ ಆಯ್ಕೆಯಾಗಿದ್ದಾರೆ.ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.
ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆ. ೨೨ರಂದು ಮಧ್ಯಾಹ್ನ ನಗರಸಭೆಯ ಅಟಲ್‌ಜೀ ಸಭಾಭವನದಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಶರ್ಮಿಳಾ ಮಾದನಗೇರಿ, ಕಾಂಗ್ರೆಸ್‌ನಿಂದ ವನಿತಾ ಶೆಟ್ಟಿ ಉಮೇದುವಾರಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ರಮಾಕಾಂತ ಭಟ್ಟ ಹಾಗೂ ಕಾಂಗ್ರೆಸ್‌ನಿಂದ ದಯಾನಂದ ನಾಯಕ ನಾಮಪತ್ರ ಸಲ್ಲಿಸಿದ್ದರು. ನಗರಸಭೆ 31 ಸದಸ್ಯರ ಬಲವಿದೆ. ನಂತರ ಜರುಗಿದ ಚುನಾವಣೆಯಲ್ಲಿ ಶರ್ಮಿಳಾ ಮಾದನಗೇರಿ ೧೯ ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ರಮಾಕಾಂತ ಭಟ್ ೧೯ ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.ವಾರ್ಡ್ ನಂ. ೯ರ ಕಾಂಗ್ರೆಸ್ಸಿನ ವನಿತಾ ಶೆಟ್ಟಿ ೧೨ ಹಾಗೂ ವಾರ್ಡ್ ನಂ. ೨೪ರ ದಯಾನಂದ ನಾಯಕ ೧೨ ಮತಗಳನ್ನು ಪಡೆದು ಪರಾಜಿತಗೊಂಡರು. ಚುನಾವಣಾ ಅಧಿಕಾರಿಯಾಗಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಜವಾಬ್ದಾರಿ ನಿರ್ವಹಿಸಿದರು.
ಸಂಭ್ರಮಾಚರಣೆ: ಚುನಾವಣೆಯಲ್ಲಿ ಗಳಿಸಿದ ಹಿನ್ನೆಲೆ ನಗರಸಭೆ ಆವರಣದಲ್ಲಿ ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ಡೊಳ್ಳು ವಾದ್ಯದೊಂದಿಗೆ ಹೆಜ್ಜೆ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಉಪೇಂದ್ರ ಪೈ, ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ನಗರಸಭೆ ಸದಸ್ಯರು ಹಾಗೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಇದ್ದರು.