ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಕಲಾವಿದರು ಅತ್ಯಂತ ಕಠಿಣವಾದ ಪರಿಶ್ರಮ ಪಡಲೇಬೇಕು. ಸಂಭಾಷಣೆ, ಅಭಿನಯ, ಅಂಗಿಕ ಸಂಜ್ಞೆ, ರಸ ನಿರೂಪಣೆಗಳು, ಕಲಾಭಿನಯ ಅವ್ಯಾಹತವಾಗಿ ಪ್ರವಾಹದಂತೆ ಹರಿದು ಬಂದಾಗ ಮಾತ್ರ ನೋಡುಗರನ್ನು ಹಿಡಿದಿಡಲು ಸಾಧ್ಯ.

ಹುಬ್ಬಳ್ಳಿ:

ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ಶನಿವಾರ ಸಂಜೆ ಪ್ರದರ್ಶನಗೊಂಡ ಶರ್ಮಿಷ್ಠೆಯ ಹೆಣ್ತನದ ಧ್ವನಿಯನ್ನು ಏಕವ್ಯಕ್ತಿ ನಾಟಕ ದಾಖಲಿಸುವಲ್ಲಿ ಯಶಸ್ವಿಯಾಯಿತು. ಪೌರಾಣಿಕ ಪಾತ್ರಗಳಲ್ಲಿನ ಹೆಣ್ಮಕ್ಕಳ ಮೂಕವೇದನೆ, ಅಷ್ಟೇ ಗಟ್ಟಿತನ, ನೆಲಮೂಲದ ಸತ್ವ ಪ್ರತಿಬಿಂಬಿಸಿತು.

4 ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿ, ಕಿರಿತೆರೆ, ಹಿರಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಸೈ ಎನಿಸಿಕೊಂಡಿರುವ ಕಲಾವಿದೆ ಡಾ. ಉಮಾಶ್ರೀ ನಟಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಕಲಾವಿದರು ಅತ್ಯಂತ ಕಠಿಣವಾದ ಪರಿಶ್ರಮ ಪಡಲೇಬೇಕು. ಸಂಭಾಷಣೆ, ಅಭಿನಯ, ಅಂಗಿಕ ಸಂಜ್ಞೆ, ರಸ ನಿರೂಪಣೆಗಳು, ಕಲಾಭಿನಯ ಅವ್ಯಾಹತವಾಗಿ ಪ್ರವಾಹದಂತೆ ಹರಿದು ಬಂದಾಗ ಮಾತ್ರ ನೋಡುಗರನ್ನು ಹಿಡಿದಿಡಲು ಸಾಧ್ಯ. ಸುಮಾರು ಒಂದು ತಾಸು ಹತ್ತು ನಿಮಿಷಗಳ ನಾಟಕ ಪ್ರದರ್ಶನದಲ್ಲಿ ತಮ್ಮ ಸಹಜ ಕಲಾಭಿನಯದ ಮೂಲಕ ಉಮಾಶ್ರೀ ಅವರು ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.

ಯಯಾತಿ, ದೇವಯಾನಿ, ಶರ್ಮಿಷ್ಠೆ, ಪುರು, ಚಿತ್ರಲೇಖೆಯ ಪಾತ್ರಗಳು ನಾಟಕದ ಜೀವಾಳ. ಶರ್ಮಿಷ್ಠೆ, ಯಯಾತಿ ಮತ್ತು ಪುರುವಿನ ನಡುವೆ ನಡೆದ ತ್ರಿಕೋನ ಸಂಘರ್ಷದ ಹತ್ತಾರು ಮಗ್ಗಲುಗಳನ್ನು ಮನೋಜ್ಞವಾಗಿ ನಾಟಕ ತೆರೆದಿಡಿತ್ತು.

ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅವರ ಯಯಾತಿ ನಾಟಕದ ಈ ಹಿನ್ನೆಲೆಯ ಕಥನ ವಸ್ತುವಿದು. ಆದರೂ ಬದಲಾದ ಕಾಲಘಟ್ಟದಲ್ಲಿನ ಹೆಣ್ಣು ಮಗಳ ಅಂತರಂಗದ ತುಮುಲುಗಳನ್ನು ಡಾ. ಉಮಾಶ್ರೀ ಅವರು ''''''''ಶರ್ಮಿಷ್ಠೆ'''''''' ಮೂಲಕ ಹೊರಹಾಕಿದ್ದಾರೆ. ರಂಗಭೂಮಿ ಕಲಾವಿದ ಡಾ. ಬೇಲೂರು ರಘುನಂದನ್‌ ಬರೆದಿದ್ದು, ಚಿದಂಬರರಾವ್‌ ಜಂಬೆ ನಿರ್ದೇಶನ ಮಾಡಿದ್ದಾರೆ. ಹುಬ್ಬಳ್ಳಿಯ ಹರ್ಷವರ್ಧನ ಪ್ರಾಯೋಜಕತ್ವದಲ್ಲಿ ಬೆಂಗಳೂರಿನ ರಂಗಸಂಪದ ತಂಡದಿಂದ ನಾಟಕ ಮೂಡಿ ಬಂದಿತು.

ಸಾಹಿತ್ಯ ಅಕಾಡೆಮಿ ಸದಸ್ಯೆ ಮೈತ್ರಾಯಿಣಿ ಗದಿಗೆಪ್ಪಗೌಡರ ಮತ್ತು ಗಿರೀಶ ಗದಿಗೆಪ್ಪಗೌಡರ ಈ ನಾಟಕ ಪ್ರದರ್ಶನಕ್ಕೆ ಸಹಕಾರ ನೀಡಿದರು.