ಸಾರಾಂಶ
ನಗರದ ಕುವೆಂಪು ರಂಗಮಂದಿರದಲ್ಲಿ ಜು. 12ರಂದು ಶನಿವಾರ ಸಂಜೆ 6.45 ಕ್ಕೆ ಹಿರಿಯ ನಟಿ ಉಮಾಶ್ರೀ ಅಭಿನಯಿಸುವ ಶರ್ಮಿಷ್ಠೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಜು. 12ರಂದು ಶನಿವಾರ ಸಂಜೆ 6.45 ಕ್ಕೆ ಹಿರಿಯ ನಟಿ ಉಮಾಶ್ರೀ ಅಭಿನಯಿಸುವ ಶರ್ಮಿಷ್ಠೆ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖಾ -ಮುಖಿ ಎಸ್.ಟಿ. ರಂಗತಂಡ ಶಿವಮೊಗ್ಗ, ರಂಗಸಂಪದ ಬೆಂಗಳೂರು ಇವರ ಸಹಯೋಗದಲ್ಲಿ ಈ ನಾಟಕ ಪ್ರದರ್ಶನ ನಡೆಯಲಿದ್ದು, ಬೇಲೂರು ರಘುನಂದನ್ ಅವರ ಈ ನಾಟಕಕ್ಕೆ ಚಿದಂಬರರಾವ್ ಜಂಬೆ ವಿನ್ಯಾಸ, ನಿರ್ದೇಶನವಿದೆ. ಅನೂಪ್ ಶೆಟ್ಟಿ ಸಂಗೀತ ವಿನ್ಯಾಸ, ಶಿವಲಿಂಗ ಪ್ರಸಾದ್ ಸಂಗೀತ ನಿರ್ವಹಣೆ, ಪ್ರಮೋದ್ ಶಿಗ್ಗಾಂವ್ ರಂಗಸಜ್ಜಿಕೆ, ವಸ್ತ್ರವಿನ್ಯಾಸವಿದೆ ಎಂದು ಮಾಹಿತಿ ನೀಡಿದರು.ಸಾಗರ ತಾಲೂಕಿನವರಾದ ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಭಾರತೀಯ ರಂಗಭೂಮಿಯ ಅಪರೂಪದ ರಂಗನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ದೇಶದ ಹಲವಾರು ಕಡೆ ಉನ್ನತ ರಂಗಶಿಬಿರ ನಡೆಸಿಕೊಟ್ಟಿದ್ದಾರೆ. ಮೈಸೂರು ರಂಗಾಯಣ ನಿರ್ದೇಶಕರಾಗಿ, ಸಾಣೆಹಳ್ಳಿ ರಂಗಶಾಲೆಯ ಗೌರವ ನಿರ್ದೇಶಕರಾಗಿ ಹಾಗೂ ಹಲವಾರು ರಂಗಭೂಮಿ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರು ಈ ನಾಟಕ ನಿರ್ದೇಶಿಸಿದ್ದಾರೆ ಎಂದರು.
ಕನ್ನಡ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ಕ್ಷೇತ್ರದ ಅಭಿಜಾತ ಕಲಾವಿದೆ, 4 ದಶಕಕ್ಕೂ ಹೆಚ್ಚು ಕಾಲದಿಂದ ಕನ್ನಡ ರಂಗಭೂಮಿ ಕ್ಷೇತ್ರದಲ್ಲಿ ಅನುಪಮವಾದ ಸೇವೆ ಸಲ್ಲಿಸುತ್ತಿರುವ ಉಮಾಶ್ರೀ ಅವರು ಭಾರತೀಯ ಅಭಿನಯ ಪರಂಪರೆಯಲ್ಲಿ ಒಂದು ಅಮೂಲ್ಯ ಮಾದರಿ. ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ವಿಭಿನ್ನ ರೀತಿಯ ಮತ್ತು ಸಂವೇದನಾಶೀಲ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೀಗೆ ಹಲವಾರು ನಾಟಕಗಳಲ್ಲಿ ಅಭಿನಯಿಸಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ರಂಗ ಸಂಪದ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ಮನ್ನಣೆ ಪಡೆದ ಉಮಾಶ್ರೀ ಅವರು ಈಗ ಇದೇ ತಂಡದ ಮೂಲಕ ಶರ್ಮಿಷ್ಠೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಏಕವ್ಯಕ್ತಿ ರಂಗಪ್ರಯೋಗ ಇದಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಮಂಜು ರಂಗಾಯಣ, ಮಹೇಂದ್ರ, ಪ್ರದೀಪ್, ಮಧು, ಅಶ್ವಿನ್ ಮತ್ತಿತರರು ಇದ್ದರು.