ಸಾರಾಂಶ
ಕಾಂತಾರ ಚಾಪ್ಟರ್ 1ರಲ್ಲೂ ಸಾಹಿತಿ ಶಶಿರಾಜ್ ಕಾವೂರು ಬ್ರಹ್ಮಕಲಶವೊಂದರ ಹಾಡು ಬರೆದಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಒಂದೇ ದಿನದಲ್ಲಿ 9 ಲಕ್ಷ ವ್ಯೂ ಪಡೆದಿದೆ.
ಮಂಗಳೂರು: ಕಾಂತಾರ ಮೊದಲ ಸಿನಿಮಾದ ‘ವರಾಹರೂಪಂ’ ಹಾಡು ಎಲ್ಲೆಡೆ ಟ್ರೆಂಡ್ ಸೆಟ್ ಆಗಿತ್ತು. ಮಂಗಳೂರಿನ ನ್ಯಾಯವಾದಿ, ಸಾಹಿತಿ ಶಶಿರಾಜ್ ರಾವ್ ಕಾವೂರು ಇದರ ಸಾಹಿತ್ಯ ಬರೆದಿದ್ದರು. ಇದೀಗ ಕಾಂತಾರ ಚಾಪ್ಟರ್ 1ರಲ್ಲೂ ಅವರು ಬ್ರಹ್ಮಕಲಶವೊಂದರ ಹಾಡು ಬರೆದಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದ್ದು, ಒಂದೇ ದಿನದಲ್ಲಿ 9 ಲಕ್ಷ ವ್ಯೂ ಆಗಿದೆ.
ಇದೇ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ದೇವಸ್ಥಾನದ ಬ್ರಹ್ಮಕಲಶಕ್ಕೊಂದು ಹಾಡು ಚಿತ್ರಿತವಾಗಿದೆ. ಬ್ರಹ್ಮಕಲಶದ ಮೇಲೆ ಹಾಡು ಬರೆಯಬೇಕು ಎಂದು ರಿಷಭ್ ಶೆಟ್ಟಿಯವರು ಹೇಳಿದಾಗ ಶಶಿರಾಜ್ ರಾವ್ ಕಾವೂರು ಅವರಿಗೆ ಸಿದ್ಧತೆ ಅಗತ್ಯ ಎಂದು ಅನಿಸಿತ್ತಂತೆ. ಅದಕ್ಕಾಗಿ ಹಲವಾರು ಪುಸ್ತಕಗಳನ್ನು ತಡಕಾಡಬೇಕಾಯಿತು. ಈ ಬಗ್ಗೆ ಪರಿಣಿತರಲ್ಲಿ ಮಾತಾಡಬೇಕಾಯಿತು. ಹಾಡು ಬರೆದ ಬಳಿಕವೂ ಒಂದಷ್ಟು ಪರಿಷ್ಕರಣೆಯೂ ಮಾಡಬೇಕಾಯಿತು ಎಂದು ಶಶಿರಾಜ್ ರಾವ್ ಕಾವೂರು ಹೇಳುತ್ತಾರೆ.ಕಾಂತಾರ ಸಿನಿಮಾಕ್ಕೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಅವರೇ ಕಾಂತಾರ ಚಾಪ್ಟರ್ 1ರಲ್ಲಿ ಕಮಾಲ್ ಮಾಡಿದ್ದಾರೆ. ಬ್ರಹ್ಮಕಲಶದ ಹಾಡಿಗೆ ಕೆನಡಾ ಮೂಲದ ಭಾರತೀಯ ಗಾಯಕ ಸದ್ಯ ಮುಂಬೈ ನಿವಾಸಿ ಕ್ಲಾಸಿಕಲ್ ಸಿಂಗರ್ ಅಭಿ ವಿ. ದನಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಹಿಂದಿ, ತಮಿಳು, ತೆಲುಗು, ಮಲಯಾಳಂ ಎಲ್ಲ ಭಾಷೆಯ ಹಾಡುಗಳನ್ನು ಇವರೇ ಹಾಡಿದ್ದಾರೆ.ಬ್ರಹ್ಮಕಲಶದ ಹಾಡು ಅಲ್ಲದೆ ಕೃಷಿ ಮೇಲೊಂದು ಸೇರಿ ಇನ್ನೆರಡು ಹಾಡುಗಳನ್ನು ಶಶಿರಾಜ್ ಬರೆದಿದ್ದಾರಂತೆ. ಒಟ್ಟಿನಲ್ಲಿ ಬ್ರಹ್ಮಕಲಶದ ಹಾಡು ಕೇಳುಗರನ್ನು ಮೋಡಿ ಮಾಡಲಿದೆ ಎಂಬುದು ಸದ್ಯದ ಹಾಡಿನ ಟ್ರೆಂಡ್ ಸೂಚಿಸುತ್ತಿದೆ.