ಕೊಡಗಿನ ವಿವಿಧೆಡೆ ಷಷ್ಠಿ ಮಹೋತ್ಸವ ಸಂಪನ್ನ

| Published : Dec 08 2024, 01:16 AM IST

ಕೊಡಗಿನ ವಿವಿಧೆಡೆ ಷಷ್ಠಿ ಮಹೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಹಲವೆಡೆ ಷಷ್ಠಿ ಮಹೋತ್ಸವ ನೆರವೇರಿತು. ದೇಗುಲದಲ್ಲಿ ಬೆಳಗ್ಗೆ 5ರಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇವಾಲಯ, ಮುತ್ತಪ್ಪ ದೇಗುಲ, ಅಮ್ಮತ್ತಿ ಸಮೀಪದ ಬೈರಾಂಬಾಡ, ಕುಶಾಲನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಷಷ್ಠಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕೊಡಗಿನಲ್ಲಿ ಸುಬ್ರಮಣ್ಯ ದೇವರ ನೆಲೆಯೆಂದೇ ಪ್ರಖ್ಯಾತಿ ಪಡೆದಿರುವ ಅಮ್ಮತ್ತಿ ಒಂಟಿಯಂಗಡಿ ಸಮೀಪದ ಬೈರಂಬಾಡದಲ್ಲಿ ನಡೆದ ಷಷ್ಠಿ ಉತ್ಸವದಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಹರಕೆಯಾಗಿ ನಾನಾ ಬಗೆಯ ಬೆಳ್ಳಿಯ ಪ್ರತಿರೂಪಗಳನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು. ಮುಂಜಾನೆಯಿಂದಲೇ ಭಕ್ತರು ಬೈರಂಬಾಡದ ಸುಬ್ರಹ್ಮಣ್ಯನ ಸನ್ನಿಧಿಗೆ ಆಗಮಿಸಿ ಹಣ್ಣು ಕಾಯಿ, ಹರಕೆಯನ್ನು ಸಮರ್ಪಿಸಿದರು. ದೇವರ ಸನ್ನಿಧಿಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಪರಿಣಾಮ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿ ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂತು.

ಬೈರಂಬಾಡದಲ್ಲಿ ವಿಜೃಂಭಣೆಯ ಷಷ್ಠಿ ಉತ್ಸವ

ಬೈರಂಬಾಡ ಗ್ರಾಮದ ಸುಬ್ರಹ್ಮಣ್ಯ ದೇವಾಲಯದಲ್ಲಿ ಶನಿವಾರ ಷಷ್ಠಿ ಪ್ರಯುಕ್ತ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಜರುಗಿತು.

ದೇಗುಲದಲ್ಲಿ ಬೆಳಗ್ಗೆ 5ರಿಂದಲೇ ಪ್ರಧಾನ ಅರ್ಚಕರ ನೇತತ್ವದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡು ದೇವರಿಗೆ ಪಂಚಾಮೃತಾಭಿಷೇಕ, ಕುಂಕು ಮಾರ್ಚನೆ, ಕ್ಷೀರಾಭಿಷೇಕ, ರುದ್ರಾಭಿ ಷೇಕಗಳು ನಡೆದವು. ಭಕ್ತಾದಿಗಳು ಹಣ್ಣುಕಾಯಿ, ಹರಕೆಯ ಹಣವನ್ನು ದೇವಾಲಯಕ್ಕೆ ಒಪ್ಪಿಸಿ ಪೂಜೆ ಸಲ್ಲಿಸಿದರು.

ಜಿಲ್ಲೆಯ ವಿವಿಧ ಕಡೆಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತರು ತಂಡೋಪ ತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು. ಇವರೊಂದಿಗೆ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳು ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವಕ್ಕಾಗಿ ಆಗಮಿಸಿದ ಭಕ್ತಾಧಿಗಳಿಗೆ ಕೂರಲು ಸೂಕ್ತವಾದ ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು. ದೇವರಿಗೆ ಮಹಾಮಂಗಳಾರತಿ ಸೇವೆ ನಡೆದ ಬಳಿಕ ಮಧ್ಯಾಹ್ನ ಅನ್ನಸಂರ್ತಪಣೆ ನಡೆಯಿತು.

ಭಕ್ತರು ಸುಬ್ರಹ್ಮಣ್ಯ ದೇವರಿಗೆ ನಾಗರೂಪ ಮುಂತಾದ ಪ್ರತಿರೂಪಗಳನ್ನು ಹರಕೆಯಾಗಿ ಸಲ್ಲಿಸಿದರು. ದೇವಾಲಯದ ಹೊರಭಾಗದಲ್ಲಿ ಭಕ್ತಾದಿಗಳು ಕೇಶ ಮುಂಡನ ಮಾಡಿಸಿಕೊಂಡು ಹರಕೆ ಒಪ್ಪಿಸಿದ ದೃಶ್ಯವು ಕಂಡುಬಂತು. ಜಾತ್ರೆ ಅಂಗವಾಗಿ ಬೆಳಗ್ಗೆಯಿಂದ ಸಂಜೆವರೆಗೆ ಮಡಿಕೇರಿ, ಮೂರ್ನಾಡು, ಹಾಕತೂರು, ಸಿದ್ದಾಪುರ, ವಿರಾಜಪೇಟೆ, ಪಾಲಿಬೆಟ್ಟ, ಅಮ್ಮತ್ತಿ, ನಾಪೋಕ್ಲು, ಗೋಣಿಕೊಪ್ಪ ಸೇರಿದಂತೆ ನಾನಾ ಕಡೆಗಳಿಂದ ವಿಶೇಷ ಖಾಸಗಿ ಬಸ್‌ಗಳು, ಬಾಡಿಗೆ ಜೀಪ್, ವ್ಯಾನ್ ಇನ್ನಿತರ ವಾಹನಗಳ ಸಂಚಾರವಿತ್ತು. ಇದರಿಂದ ವಿವಿಧ ಭಾಗಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಲು ಅನುಕೂಲವಾಯಿತು. ಮಡಿಕೇರಿ ನಗರ ವೃತ್ತ ನಿರೀಕ್ಷಕ ಹಾಗೂ ಸಿದ್ದಾಪುರ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ನೇತತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಾಹನಗಳ ನಿಲುಗಡೆಗೆ, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರು ನಿಯಂತಣ್ರದಲ್ಲಿ ತೊಡಗಿಕೊಂಡಿದ್ದರು.

ಮೂರ್ನಾಡು ಕಡೆಯಿಂದ ಹಾಗೂ ಅಮ್ಮತ್ತಿ ಕಡೆಯಿಂದ ಬರುತ್ತಿದ್ದ ವಾಹನಗಳನ್ನು ದೇವಾಲಯದ ಪ್ರಮುಖ ದ್ವಾರದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಯಿತು.

ದೇವಾಲಯದ ರಸ್ತೆ ಬದಿಯಲ್ಲಿ ಪುಟಾಣಿಗಳು ಕೂಡ ಭಿಕ್ಷಾಟನೆಯಲ್ಲಿ ತೊಡಗಿದ್ದ ದೃಶ್ಯಗಳು ಕಂಡುಬಂತು. ದೇವಾಲಯಕ್ಕೆ ಭೇಟಿ ನೀಡಿದ ಭಕ್ತರು ಭಿಕ್ಷೆ ನೀಡಿದರು. ಜಾತ್ರಾ ಸಂದರ್ಭ ಭಿಕ್ಷೆ ನೀಡಿದರೆ ಹೆಚ್ಚಿನ ಪುಣ್ಯ ಸಿಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ನಾನಾ ಕಡೆಗಳಿಂದ ಆಗಮಿಸಿದ್ದ ಭಿಕ್ಷುಕರಿಗೆ ಭಕ್ತರು ಅಕ್ಕಿ ಹಾಗೂ ಹಣವನ್ನು ದಾನವಾಗಿ ನೀಡಿದರು. ಇತ್ತ ಹೊರಭಾಗದ ರಸ್ತೆ ಬದಿಯಲ್ಲಿ ವ್ಯಾಪಾರಿಗಳು ವಿವಿಧ ಮಳಿಗೆಗಳನ್ನು ನಿರ್ಮಿಸಿ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಕೇರಳದ ಹಲ್ವಾ ಸೇರಿದಂತೆ ಬಗೆಬಗೆಯ ತಿಂಡಿ ತಿನಿಸುಗಳ ಮಾರಾಟ ಜೋರಾಗಿತ್ತು. ದೇವಾಲಯ ಆಡಳಿತ ಮಂಡಳಿ ಭಕ್ತಾದಿಗಳಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಮಾಡಲಾಯಿತು.

ಸೌಹರ್ದ ಮೆರೆದ ಭಕ್ತರು

ಬೈರಂಬಾಡ ಷಷ್ಠಿ ಉತ್ಸವಕ್ಕೆ ಆಗಮಿಸಿದ ಭಕ್ತರು ಮಾರ್ಗ ಮಧ್ಯೆ ಇರುವ ಒಂಟಿಯಂಗಡಿ ಸಮೀಪದ ಕುಲ್ಕುಮಾಡ್ ದರ್ಗಾದಲ್ಲಿ ಆಗರ್ ಬತ್ತಿ ಹತ್ತಿಸಿ ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹರ್ದತೆ ಮೆರೆದ ದೃಶ್ಯವು ಕಂಡುಬಂತು.