ಸಾರಾಂಶ
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಆಶ್ರಯದಲ್ಲಿ ‘ಗಾಂಧಿ ಸ್ಮೃತಿ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜಯಪ್ರಕಾಶ್ ಶೆಟ್ಟಿ ಎಚ್. ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉದ್ಯಾವರ
ಗಾಂಧೀಜಿಯವರನ್ನು ತತ್ವವಾಗಿ ಮುಟ್ಟಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಸೋತಿದೆ. ಈ ದೇಶಕ್ಕೆ ಗಾಂಧಿ, ಅಂಬೇಡ್ಕರ್ ಮತ್ತು ಸಂವಿಧಾನ ಎಂಬ ಮೂರು ರಕ್ಷಣಾ ಕವಚಗಳಿವೆ. ಅವುಗಳನ್ನು ಕಾಪಾಡಿಕೊಳ್ಳಬೇಕಾಗಿದೆ. ಇದು ಶಿಥಿಲವಾದರೆ ನಮ್ಮ ಸಾಮಾಜಿಕ ಬದುಕು ಅಸ್ತವ್ಯಸ್ತವಾಗುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದರು.ಅವರು ಇಲ್ಲಿನ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮತ್ತು ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಆಶ್ರಯದಲ್ಲಿ ಜರುಗಿದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಗಾಂಧಿಯನ್ನು ಯಾರು ಕೊಂದರು? ಯಾರು ಕೊಲ್ಲಲಿಲ್ಲ? ಎಂಬ ಪ್ರಶ್ನೆ ಮುಖ್ಯ ಅಲ್ಲ, ಆದರೆ ಗಾಂಧಿಯವರ ಕೊಲೆಯಾಯಿತಲ್ಲ ಎಂಬ ವಿಚಾರ ಮುಖ್ಯವಾಗಬೇಕು. ಆ ಪಾಪಪ್ರಜ್ಞೆ ನಮ್ಮನ್ನು ಕಾಡಬೇಕು ಎಂದ ಅವರು, ಗಾಂಧಿಗೆ ಎದುರಾಗಿ ಇಂದು ಲಾಲ್ ಬಹುದ್ದೂರ್ ಶಾಸ್ತ್ರಿ ಅವರನ್ನು ನಿಲ್ಲಿಸಲಾಗುತ್ತಿದೆ. ಇದು ಮೂರ್ಖತನ. ಗಾಂಧಿ ಶಾಸ್ತ್ರಿ ಎಂದೂ ಸಮಾನಾಂತರ ಗೆರೆಗಳಲ್ಲ. ಅವು ಪರಸ್ಪರ ಕೂಡಿಕೊಳ್ಳುವ ಗೆರೆಗಳು. ಶಾಸ್ತ್ರಿ ಎಂದೂ ಕೂಡ ಗಾಂಧಿಯವರಿಗೆ ಎದುರಾಳಿಯಾಗಲು ಸಾಧ್ಯವಿಲ್ಲ ಎಂದರು.ಸಂಘಟನೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಾವರ ಫ್ರೆಂಡ್ಸ್ ಸರ್ಕಲಿನ ಪ್ರಧಾನ ಕಾರ್ಯದರ್ಶಿ ಅಬಿದ್ ಆಲಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ರೊನಾಲ್ಡ್ ರೆಬೆಲ್ಲೋ ಉಪಸ್ಥಿತರಿದ್ದರು. ಅಧ್ಯಕ್ಷ ತಿಲಕರಾಜ್ ಸಾಲ್ಯಾನ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಜೆರಾಲ್ಡ್ ಪಿರೇರ ವಂದಿಸಿದರು. ಮೈಕಲ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು.