ಸಾರಾಂಶ
ದೇವಳದ ತಂತ್ರಿಗಳಾದ ವೇದಮೂರ್ತಿ ಕೆ.ಎಸ್.ಕೊರಂಗ್ರಪಾಡಿ ಕೃಷ್ಣಮೂರ್ತಿ ತಂತ್ರಿ ಮತ್ತು ವೇದಮೂರ್ತಿ ರಮಣ ತಂತ್ರಿಗಳ ನೇತೃತ್ವದಲ್ಲಿ ಈ ಯಾಗ ನಡೆಯಲಿದೆ. ಇದಕ್ಕೆ ಒಟ್ಟು ಸುಮಾರು 50 ಲಕ್ಷ ರು. ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿಸೆಂಬರ್ 9ರಿಂದ 15ರ ವರೆಗೆ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಗೌರವ ಸಲಹೆಗಾರ ಮಟ್ಟಾರು ರತ್ಮಾಕರ ಹೆಗ್ಡೆ ತಿಳಿಸಿದ್ದಾರೆ.
ಶನಿವಾರ ದೇವಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದರು. ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ದೇವಸ್ಥಾನದ ಶಿಲಾಮಯ ಸುತ್ತುಪೌಳಿ ನಿರ್ಮಾಣಗೊಂಡು ದೇವಿಯ ಸನ್ನಿಧಿಗೆ ಸಮರ್ಪಿಸಲ್ಪಟ್ಟಿದೆ. ಇದೀಗ ದೇವಳದ ಶ್ರೀ ನಾಗ ಸಾನಿಧ್ಯದ ಅಭಯ ವಾಕ್ಯದ ಸೂಚನೆಯಂತೆ ತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆ ನಡೆಸಲಾಗುತ್ತಿದೆ. ದೇವಳದ ತಂತ್ರಿಗಳಾದ ವೇದಮೂರ್ತಿ ಕೆ.ಎಸ್.ಕೊರಂಗ್ರಪಾಡಿ ಕೃಷ್ಣಮೂರ್ತಿ ತಂತ್ರಿ ಮತ್ತು ವೇದಮೂರ್ತಿ ರಮಣ ತಂತ್ರಿಗಳ ನೇತೃತ್ವದಲ್ಲಿ ಈ ಯಾಗ ನಡೆಯಲಿದೆ. ಇದಕ್ಕೆ ಒಟ್ಟು ಸುಮಾರು 50 ಲಕ್ಷ ರು. ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ.ಈ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಗಳಲ್ಲಿ ಉಳಿತಾಯದ ಹಣದಿಂದ, ದೇವಳದ ಉತ್ಸವ ಪರ್ವಕಾಲದಲ್ಲಿ ದೇವಿಯ ಅವಭೃತ ಸ್ನಾನಕೊಸ್ಕರ ಒಂದು ಸುಂದರವಾದ ಕೆರೆಯನ್ನು ದೇವಳದ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿದೆ.
ಈಗಾಗಲೇ ಕೆರೆ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಉಚಿತವಾಗಿ ನೀಡಲು ಸ್ಥಳದ ಮಾಲಕರು ಒಪ್ಪಿದ್ದಾರೆ. ಕೆರೆ ನಿರ್ಮಾಣ ಕಾರ್ಯವು ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಇದಕ್ಕೆ ಸುಮಾರು 75 ಲಕ್ಷ ರು. ವೆಚ್ಚವಾಗಬಹುದು ಎಂದವರು ಮಾಹಿತಿ ನೀಡಿದರು.ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಗಳ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನು ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳು ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವಲದ ಆಡಳಿತ ಮೊಕ್ತೇಸರ ಮೋಹನ್ ಮುದ್ಣಣ ಶೆಟ್ಟಿ, ಕಾರ್ಯದರ್ಶಿ ಬಿ. ನಾರಾಯಣದಾಸ್ ಉಡುಪ, ಮೊಕ್ತೇಸರರಾದ ರಮೇಶ್ ಶೆಟ್ಟಿ ಕಳತ್ತೂರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಶತಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಗಳ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.