ಸಾರಾಂಶ
ಧಾರವಾಡ: ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ತಕ್ಷಣವೇ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಮಾಡಲು ಆಗ್ರಹಿಸಿ ಶುಕ್ರವಾರ ಪರಿಶಿಷ್ಟ ಜಾತಿ ಒಳಮೀಸಲಾತಿ (ಮಾದಿಗ) ಹೋರಾಟ ಸಮಿತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ರಾಜ್ಯ ಕಾಂಗ್ರೆಸ್ ಸರ್ಕಾರವು ಸಾಮಾಜಿಕ ನ್ಯಾಯ ಮರೆತು ಮಾದಿಗ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಹೋರಾಟಗಾರರು, ಇಲ್ಲಿಯ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿ ಎದುರು ಕೇಶ ಮುಂಡನೆ ಮಾಡಿಕೊಂಡು ಕೇಶವನ್ನು ಮುಖ್ಯಮಂತ್ರಿಗಳಿಗೆ ಮನವಿ ಪತ್ರದ ಜತೆಗೆ ಕಳುಹಿಸಲು ಯೋಜಿಸಿದ್ದರು. ಅಂತೆಯೇ, ಸ್ಥಳದಲ್ಲಿ ಐವರು ಹೋರಾಟಗಾರರು ಕೇಶ ಮುಂಡನೆ ಸಹ ಮಾಡಿಕೊಂಡರು. ಅಷ್ಟರಲ್ಲಿ ಮಧ್ಯಸ್ಥಿಕೆ ವಹಿಸಿದ ಪೊಲೀಸರು ಕೇಶ ಮುಂಡನೆ ಮಾಡುವುದನ್ನು ತಡೆದರು. ಈ ಮಧ್ಯೆ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದು ಕೊನೆಗೆ 100ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.ಕಲಾಭವನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ಮಾಡಿದ ಮಾದಿಗ ಸಮುದಾಯದ ನೂರಾರು ಜನರು ಕೂಡಲೇ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಘೋಷಣೆ ಕೂಗಿದರು.
ಒಳಮೀಸಲಾತಿ ಬೇಡಿಕೆ ಕಳೆದ ಮೂರುವರೆ ದಶಕದಿಂದ ನನೆಗುದಿಗೆ ಬಿದ್ದಿದೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ವರ್ಷದ ಹಿಂದೆಯೇ ಸೂಚನೆ ನೀಡಿದೆ. ಹರಿಯಾಣ, ತೆಲಂಗಾಣ, ಆಂಧ್ರ ಪ್ರದೇಶ ಸರ್ಕಾರಗಳು ಮೀಸಲಾತಿ ನೀಡಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಈ ತೀರ್ಪು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದೆ. ಈ ನೀತಿಯಿಂದ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ನ್ಯಾಯಯುತ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಇದು ಮಾದಿಗ ಹಾಗೂ ಅದರ 29 ಉಪಜಾತಿಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.ನಾಗಮೋಹನದಾಸ್ ಆಯೋಗಕ್ಕೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಪರಿಶಿಷ್ಟ ಜಾತಿಗಳ ಮಧ್ಯೆ ಮೀಸಲಾತಿ ಹಂಚಿಕೆಯಲ್ಲಿ ಉಂಟಾಗಿರುವ ಅಸಮಾನತೆ ಮತ್ತು ಸಮುದಾಯಗಳ ನಡುವಿನ ಹಿಂದುಳಿದಿರುವಿಕೆ ಸಮಗ್ರವಾಗಿ ಅಧ್ಯಯನ ಮಾಡಲು ಆಯೋಗ ಎಲ್ಲ ಇಲಾಖೆಗಳಿಗೆ ಅಗತ್ಯ ಮಾಹಿತಿ ಕಳೆದ ಜನವರಿಯಲ್ಲಿ ಕೇಳಿತ್ತು. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಆರು ತಿಂಗಳಾದರೂ ಸರಿಯಾದ ಮಾಹಿತಿ ಆಯೋಗಕ್ಕೆ ಸಿಕ್ಕಿಲ್ಲ. ಕಾಂತರಾಜ ಆಯೋಗದ ಜಾತಿಗಣತಿ ವರದಿ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕಸದ ಬುಟ್ಟಿ ಸೇರಿತು. ಈಗ ನ್ಯಾ. ನಾಗಮೋಹನದಾಸ್ ವರದಿ ಬಗ್ಗೆ ಗೊಂದಲಗಳು ಸೃಷ್ಟಿಯಾಗಿವೆ. ಇದು ಸರ್ಕಾರದ ನಿರ್ಲಕ್ಷ್ಯ ಧೋರಣೆ ಬಗ್ಗೆ ಎಚ್ಚರಿಕೆಯ ಗಂಟೆ. ಆದ್ದರಿಂದ ಆ. 11ರಿಂದ ವಿಧಾನ ಮಂಡಲಗಳ ಅಧಿವೇಶನ ನಡೆಯುತ್ತಿದ್ದು, ಅಷ್ಟರಲ್ಲಿ ಸರ್ಕಾರ ತೀರ್ಮಾನ ಪ್ರಕಟಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ ಎಂದು ಹೋರಾಟಗಾರರು ಎಚ್ಚರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಚಂದ್ರಶೇಖರ ನಡುವಿನಮನಿ, ಮಂಜು ಹೊಸಮನಿ, ಎಸ್. ಹೆಗಡೆ, ಮಂಜು ಕೊಂಡಪಲ್ಲಿ, ನಿಂಗಪ್ಪ ಹಂಚಿನಾಳ, ಪುಂಡಲೀಕ ಮಾದರ, ರಾಕೇಶ ದೊಡಮನಿ, ಪರಶುರಾಮ ದೊಡಮನಿ, ಸಹಾದೇವ ಮಳಗಿ, ಸುರೇಶ ಖಾನಾಪೂರ, ನಿಂಗಪ್ಪ ಕೆಲಗೇರಿ, ಶಿವು ಪೂಜಾರ ಸೇರಿದಂತೆ ಹಲವರಿದ್ದರು.