ಗಂಗೆ ಹೊಳೆದಂಡೆಗೆ ನಿಂತು ನಾಲ್ಕು ಭಾಗ ಮಾಡ್ಯಾಳ

| Published : Oct 26 2023, 01:00 AM IST

ಸಾರಾಂಶ

ಗಂಗೆ ಹೊಳೆದಂಡೆಗೆ ನಿಂತು ನಾಲ್ಕು ಭಾಗ ಮಾಡ್ಯಾಳ. ₹7,700 ಹತ್ತಿ, ₹4,700 ಜೋಳ, ಮೂರು ಆರು,- ಆರು ಮೂರಾದಿತಲೇ ಪರಾಕ್''

ಕನ್ನಡಪ್ರಭ ವಾರ್ತೆ ಬಳ್ಳಾರಿ

ಗಂಗೆ ಹೊಳೆದಂಡೆಗೆ ನಿಂತು ನಾಲ್ಕು ಭಾಗ ಮಾಡ್ಯಾಳ. ₹7,700 ಹತ್ತಿ, ₹4,700 ಜೋಳ, ಮೂರು ಆರು,- ಆರು ಮೂರಾದಿತಲೇ ಪರಾಕ್''''

- ಇದು ಆಂಧ್ರಪ್ರದೇಶದ ಗಡಿಭಾಗ ಕರ್ನೂಲ್ ಜಿಲ್ಲೆಯ ದೇವರಗುಡ್ಡದ ಜಾತ್ರೆಯಲ್ಲಿ ಈ ಬಾರಿ ಗೊರವಯ್ಯ ನುಡಿದಿರುವ ಕಾರಣಿಕ.

ಕರ್ನೂಲ್ ಜಿಲ್ಲೆ ಆಲೂರು ತಾಲೂಕಿನ ದೇವರುಗುಡ್ಡದ ಮಾಳ ಮಲ್ಲೇಶ್ವರಸ್ವಾಮಿ(ಗುಡ್ಡದ ಮಲ್ಲಯ್ಯ) ಜಾತ್ರೆಯಲ್ಲಿ ಪ್ರತಿವರ್ಷದಂತೆ ಲಕ್ಷ ಭಕ್ತರ ಸಮ್ಮುಖದಲ್ಲಿ ಮಲ್ಲೇಶ್ವರನ ಕಾರಣಿಕ ನುಡಿಯಲಾಯಿತು.

ಕಾರಣಿಕವನ್ನು ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದ್ದು, ಗಂಗೆ ಹೊಳೆದಂಡೆಗೆ ನಿಂತು ನಾಲ್ಕು ಭಾಗ ಮಾಡ್ಯಾಳ ಎಂಬುದು ಈ ಬಾರಿಯೂ ಮತ್ತೆ ನೀರಿನ ಅಭಾವವನ್ನು ಸೂಚಿಸುತ್ತದೆ. ಕೃಷಿಕರು ನೀರಿನ ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಕಾರಣಿಕ ನುಡಿದಿದೆ ಎಂದು ಭಕ್ತರು ವಿಶ್ಲೇಷಿಸುತ್ತಿದ್ದಾರೆ. ಹತ್ತಿ ಮತ್ತು ಜೋಳಕ್ಕೆ ಉತ್ತಮ ಧಾರಣೆ ಸಿಗಲಿದೆ. ಕೃಷಿಕರ ಬೆಳೆಯ ಧಾರಣೆಯಲ್ಲಿ ಹೊಯ್ದಾಟ ಇರಲಿದೆ ಎಂದು ಹೇಳಲಾಗುತ್ತಿದೆ.

ಕನ್ನಡದಲ್ಲಿ ಕಾರಣಿಕ ನುಡಿವ ಗೊರವಯ್ಯ:

ಆಂಧ್ರಪ್ರದೇಶದ ಆಲೂರು ತಾಲೂಕಿನಲ್ಲಿ ಗುಡ್ಡದ ಮಲ್ಲಯ್ಯನ ಜಾತ್ರೆಯಲ್ಲಿ ಕನ್ನಡದಲ್ಲಿಯೇ ಕಾರಣಿಕ ನುಡಿಯುವುದು ವಿಶೇಷ. ಮಾಳ ಮಲ್ಲೇಶ್ವರ ಜಾತ್ರೆ ಜರುಗುವ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ಹತ್ತಾರು ಗ್ರಾಮಗಳಲ್ಲಿ ಕನ್ನಡವೇ ಮುಖ್ಯಭಾಷೆ. ಈ ಜಾತ್ರೆಗೆ ಬಳ್ಳಾರಿ ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಜನರು ತೆರಳಿ, ದೇವರ ಕಾರಣಿಕ ಕೇಳಿ ಬರುತ್ತಾರೆ.