ಸಾರಾಂಶ
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ಸ್ವೀಕರಿಸಿದ ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ.
ಕನ್ನಡಪ್ರಭ ವಾರ್ತೆ ಮಂಗಳೂರು
ಕೊರೋನಾ ವೇಳೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದಂತೆ ಪ್ರಸಕ್ತ ದ.ಕ.ಜಿಲ್ಲೆ ಸ್ವಚ್ಛತೆಗಾಗಿ ತುರ್ತು ಪರಿಸ್ಥಿತಿ ಘೋಷಿಸುವ ದುಸ್ಥಿತಿಯಲ್ಲಿದೆ. ಸ್ವಚ್ಛ ಗ್ರಾಮ ಹಾಗೂ ಸ್ವಚ್ಛ ಜಿಲ್ಲೆಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಜನತೆ ಜತೆ ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕಾಗಿದೆ ಎಂದು ಮುಡಿಪು ಜನಶಿಕ್ಷಣ ಟ್ರಸ್ಟ್ ಟ್ರಸ್ಟಿ ಹಾಗೂ ದ.ಕ. ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಹಾಗೂ ಕೃಷ್ಣಮೂಲ್ಯ ಹೇಳಿದ್ದಾರೆ. ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಪುರಸ್ಕಾರ ಸ್ವೀಕರಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕಳೆದ ನಾಲ್ಕು ದಶಕಗಳಿಂದ ಜನತೆಯ ಸಹಭಾಗಿತ್ವದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವುದೇ ಕೆಲಸ ಮಾಡಿದರೂ ಗೆಲವು ನಮ್ಮದಾಗಿತ್ತು. ಆದರೆ ಸ್ವಚ್ಛತೆ ವಿಚಾರದಲ್ಲಿ ಮಾತ್ರ ನಿರಂತರ ಸೋಲು ಕಾಣುತ್ತಿದ್ದೇವೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ಗರ್ಭಕೋಶ ತೊಂದರೆ, ಕ್ಯಾನ್ಸರ್‌ಕಾರಕವೇ ಮೊದಲಾದ ರೋಗಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಪ್ಲಾಸ್ಟಿಕ್ ಬಳಸಿ ಬಿಸಾಡಿದರೆ ದಂಡ ಕೂಡ ವಿಧಿಸುವಂತೆ ಆದೇಶಿಸಿದೆ. 2016ರಲ್ಲಿ ರಾಜ್ಯ ಸರ್ಕಾರ ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ, ಕಾರ್ಯಾಚರಣೆ ನಡೆಸಿದರೂ ಜನಮಾನಸದಲ್ಲಿ ಇನ್ನೂ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಬಗ್ಗೆ ಅಚ್ಚೊತ್ತಿಲ್ಲ. ಇದಕ್ಕೆ ಸಮಾಜ ಹಾಗೂ ಸರ್ಕಾರ ಕಾರಣವಾಗಿದ್ದು, ಇವರನ್ನು ಸೇರಿಸಿ ಒಟ್ಟಾಗಿ ಕಾರ್ಯಾಚರಣೆ ನಡೆಸಿದರೆ ಮಾತ್ರ ಶೂನ್ಯ ಪ್ಲಾಸ್ಟಿಕ್ ಬಳಕೆ ಅನುಷ್ಠಾನಕ್ಕೆ ತರಲು ಸಾಧ್ಯವಿದೆ ಎಂದು ಶೀನ ಶೆಟ್ಟಿ ಹೇಳಿದರು. ಸುಸ್ಥಿರ ಜೀವನ ಶೈಲಿ: ಸುಸ್ಥಿರ ಬದುಕಿಗಾಗಿ ಸುಸ್ಥಿರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಅಂದರೆ ಸ್ವಚ್ಛ, ಸ್ವಾವಲಂಬಿ, ಸ್ವಉದ್ಯೋಗ, ದುಶ್ಚಟಮುಕ್ತ, ಆದರ್ಶ ಬದುಕಿನ ಮಾದರಿ ಮನೆ ನಮ್ಮದಾಗುವಂತೆ ನೋಡಿಕೊಳ್ಳಬೇಕು. ಹಾಗಾದರೆ ಮಾತ್ರ ಕೊರೋನಾದಂತಹ ಯಾವುದೇ ಕಾಯಿಲೆ ಬಂದರೂ ಅದನ್ನು ಎದುರಿಸುವ ಸ್ವ ಶಕ್ತಿ ನಮ್ಮಲ್ಲಿರುತ್ತದೆ ಎಂದರು. ಸಂವಿಧಾನ ಉಚಿತ ಪ್ರತಿ ನೀಡಿಕೆ: ಸಂವಿಧಾನವೇ ನಮ್ಮ ಶಕ್ತಿಯಾಗಿದ್ದು, ಸಂವಿಧಾನ ಓದುವ ಮೂಲಕ ಸಂತೋಷ, ಸಾಮರಸ್ಯದ ಜೀವನ ನಡೆಸಬೇಕು. ಇದಕ್ಕಾಗಿ ಮಂಗಳೂರು ವಿವಿ ಸಹಯೋಗದಲ್ಲಿ ಸಂವಿಧಾನದ ಪುಸ್ತಕಗಳನ್ನು ಉಚಿತವಾಗಿ ಹಂಚುವ ಅಭಿಯಾನ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆಗೆ ಸ್ತ್ರೀಶಕ್ತಿ ಜಾಗೃತಿ, ಮತದಾನ ಜಾಗೃತಿ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜ ರೂಪಿಸಲು ಉದ್ದೇಶಿಸಲಾಗಿದೆ ಎಂದರು. ಜನರ ಬಳಿಗೆ ಫಾರ್ಮುಲಾ: ಜನಶಿಕ್ಷಣ ಟ್ರಸ್ಟ್‌ನ ಇನ್ನೋರ್ವ ಟ್ರಸ್ಟಿ ಕೃಷ್ಣ ಮೂಲ್ಯ ಮಾತನಾಡಿ, ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಜನರ ಬಳಿಗೆ ಹೋಗಿ ಅವರಿಂದಲೇ ಸಮಸ್ಯೆ ನಿವಾರಿಸುವುದೇ ಅತ್ಯುತ್ತಮ ಫಾರ್ಮುಲಾ. ಜನರ ನೇತೃತ್ವವೇ ಸಾಮಾಜಿಕ ಪರಿಶೋಧನೆ ಆಗಿದ್ದು, ಇದೇ ಪರಿಕಲ್ಪನೆಯಲ್ಲಿ ಜನಶಿಕ್ಷಣ ಟ್ರಸ್ಟ್ 17 ವಿವಿಧ ರೀತಿಯ ಅಭಿಯಾನಗಳನ್ನು ನಡೆಸಿದೆ. 1991ರಿಂದ ಇಲ್ಲಿವರೆಗೆ ನಿರಂತರವಾಗಿ ನವಸಾಕ್ಷರರ ಸಂಘಟನೆ ನಡೆಯುತ್ತಿದ್ದರೆ ಅದು ದೇಶದ ಪೈಕಿ ದ.ಕ.ದಲ್ಲಿ ಮಾತ್ರ ಎಂದರು. ಪೊಸಕುರಲ್ ವಾರ್ತಾ ವಾಹಿನಿ ವ್ಯವಸ್ಥಾಪಕ ನಿರ್ದೇಶಕ ವಿದ್ಯಾಧರ ಶೆಟ್ಟಿ ಗೌರವ ಅತಿಥಿ ಕಾರ್ಯಕ್ರಮ ಉದ್ಘಾಟಿಸಿ, ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯರದ್ದು ನೇರ ವ್ಯಕ್ತಿತ್ವ, ಸರಳ, ಸ್ವಚ್ಛ ಬದುಕು. ಸಮಾಜಕ್ಕೆ ಸ್ವಾವಲಂಬನೆಯ ಬದುಕು ನೀಡಿದ ಅವರು ಅನೇಕ ಸಾಧಕರನ್ನು ಮರೆಯಿಂದ ತೆರೆಗೆ ತಂದಿದ್ದಾರೆ ಎಂದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು. ಪತ್ರಕರ್ತ ಹರೀಶ್ ಮೋಟುಕಾನ ನಿರೂಪಿಸಿದರು.