ಸಾರಾಂಶ
ಗುನ್ನಾಯನಕಹಳ್ಳಿ ಗ್ರಾಮದ ಪುಟ್ಟಸ್ವಾಮಿ ಪುತ್ರ ರೈತ (ವಿಕಲಚೇತನ) ಜಿ.ಪಿ.ಸುಧಾಕರ ಅವರಿಗೆ ಸೇರಿದ ಮೂರು ಕುರಿಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದಾಗ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಮೂರು ಕುರಿಗಳಲ್ಲಿ ಎರಡು ಕುರಿಗಳ ರಕ್ತ ಕುಡಿದು ಸಾಯಿಸಿ, ಮತ್ತೊಂದು ಕುರಿಯನ್ನು ಹೊತ್ತೊಯ್ದಿದೆ. ಇದರಿಂದ ವಿಕಲಚೇತನ ರೈತನಿಗೆ ಸುಮಾರು 30 ರಿಂದ 40 ಸಾವಿರ ರು.ನಷ್ಟವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಚಿರತೆ ನಿರಂತರ ದಾಳಿಯಿಂದ ರೈತರ ಕುರಿಗಳು, ಹಸು, ಎಮ್ಮೆ ಕರು ಬಲಿಯಾಗಿರುವ ಘಟನೆ ತಾಲೂಕಿನ ದುದ್ದ ಹೋಬಳಿ ಗುನ್ನಾಯನಕಹಳ್ಳಿಯಲ್ಲಿ ನಡೆದಿದೆ.ಬುಧವಾರ ರಾತ್ರಿ ಗ್ರಾಮದ ಪುಟ್ಟಸ್ವಾಮಿ ಪುತ್ರ ರೈತ (ವಿಕಲಚೇತನ) ಜಿ.ಪಿ.ಸುಧಾಕರ ಅವರಿಗೆ ಸೇರಿದ ಮೂರು ಕುರಿಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದಾಗ ಚಿರತೆ ದಾಳಿ ಮಾಡಿ ಬಲಿ ಪಡೆದಿದೆ. ಮೂರು ಕುರಿಗಳಲ್ಲಿ ಎರಡು ಕುರಿಗಳ ರಕ್ತ ಕುಡಿದು ಸಾಯಿಸಿ, ಮತ್ತೊಂದು ಕುರಿಯನ್ನು ಹೊತ್ತೊಯ್ದಿದೆ. ಇದರಿಂದ ವಿಕಲಚೇತನ ರೈತನಿಗೆ ಸುಮಾರು 30 ರಿಂದ 40 ಸಾವಿರ ರು.ನಷ್ಟವಾಗಿದೆ.
ಎಮ್ಮೆ ಸಾಕಾಣಿಕೆ ಜೊತೆಗೆ ಕುರಿಗಳನ್ನು ಸಾಕುತ್ತಿದ್ದ ಸುಧಾಕರ್ ಇವುಗಳೇ ಜೀವನಕ್ಕೆ ಆಧಾರವಾಗಿದ್ದವು. ಊರಿನೊಳಗೆ ಚಿರತೆ ದಾಳಿ ಮಾಡಿ ಕುರಿಗಳನ್ನು ಬಲಿ ಪಡೆದಿರುವುದರಿಂದ ರೈತನಿಗೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಪರಿಹಾರ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಸತತ ಮೂರು ದಿನಗಳಿಂದ ಗ್ರಾಮದಲ್ಲೆ ನಿಂಗೇಗೌಡರಿಗೆ ಸೇರಿದ ಹಸುವಿನ ಕರು, ಎಮ್ಮೆ ಕರು, ರಾತ್ರಿ ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದರೂ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಚಿರತೆ ಹಾವಳಿ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೆ ಸಿಬ್ಬಂದಿ ಬಂದು ನೋಡಿ ಸುಮ್ಮನೆ ತೆರಳುತ್ತಿದ್ದಾರೆ. ಬೋನು ಇಟ್ಟು ಚಿರತೆ ಸೆರೆಗೆ ಮುಂದಾಗುತ್ತಿಲ್ಲ. ಚಿರತೆ ಭಯದಿಂದ ಜಮೀನುಗಳಿಗೆ ಹೋಗಿ ರೈತರು ರಾತ್ರಿ ವೇಳೆ ನೀರು ಹಾಯಿಸಲು ಭಯ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆಸುತ್ತಮುತ್ತಲಿನಲ್ಲಿ ನಿರಂತರವಾಗಿ ಚಿರತೆ ಹಾವಳಿ ಹೆಚ್ಚಾಗಿದ್ದರೂ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಬೇಸರ ತರಿಸಿದೆ. ಕೂಡಲೇ ಶಾಸಕರು, ಅಧಿಕಾರಿಗಳು ಗಮನ ಹರಿಸಿ ಚಿರತೆ ಹಿಡಿಯಲು ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.