ಕೆ.ಆರ್.ಪೇಟೆ:

ಚಿರತೆಗಳ ದಾಳಿಯಿಂದ ಕುರಿಗಳು ಸಾವನ್ನಪ್ಪಿ, 10 ಕುರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಾಯಕನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ರೈತ ಪ್ರೇಮೇಶ್ ಅವರ ಕೊಟ್ಟಿಗೆಗೆ ನುಗ್ಗಿದ ಎರಡು ಚಿರತೆಗಳು 15 ಕುರಿಗಳ ಮೇಲೆ ದಾಳಿ ನಡೆಸಿವೆ. ಚಿರತೆಗಳ ದಾಳಿಯಲ್ಲಿ 5 ಕುರಿಗಳು ಸಾವನಪ್ಪಿವೆ. ಉಳಿದ ಕುರಿಗಳಿಗೆ ಗಂಭೀರವಾಗಿ ಗಾಯಗಳಾಗಿವೆ. ಇದರಿಂದ 3 ಲಕ್ಷ ರು. ನಷ್ಟ ಸಂಭವಿಸಿದೆ.

ವಿವಿಧ ಸಂಘ ಸಂಸ್ಥೆಗಳಿಂದ ಸಾಲ ಮಾಡಿ ಪ್ರೇಮೇಶ್ ಕುರಿಗಳನ್ನು ತಂದಿದ್ದರು. ಈಗ ರೈತರ ಬದುಕು ಇದೀಗ ಬೀದಿಗೆ ಬಂದಿದೆ. ಚಿರತೆಗಳ ಅಟ್ಟಹಾಸದಿಂದ ನಷ್ಟಕ್ಕೊಳಗಾಗಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಹಿಂದೆ ಚಿರತೆ ಉಪಟಳದ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆಗಳ ದಾಳಿಯಿಂದ ಗ್ರಾಮದಲ್ಲಿ ಈಗಾಗಲೇ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆ ಮನೆಯಿಂದ ಹೊರ ಬರಲು ಜನರು ಭಯಪಡುತ್ತಿದ್ದಾರೆ.


ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಚಿರತೆಗಳನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ರಸ್ತೆ ಅಪಘಾತ ಯುವಕನಿಗೆ ಕಾಲು ಮುರಿತ: ಉಚಿತ ಆ್ಯಂಬುಲೆನ್ಸ್ ಸೇವೆ

ಮಂಡ್ಯ: ಸಾರಿಗೆ ಬಸ್ ಡಿಕ್ಕಿಯಾಗಿ ಕಾಲು ಮುರಿದುಕೊಂಡು ನರಳಾಡುತ್ತಿದ್ದ ಯುವಕನಿಗೆ ಎಂ.ಎಂ.ಫೌಂಡೇಶನ್ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಿ ಯುವಕನ ಜೀವ ಉಳಿಸಿತು.ತಾಲೂಕು ಹಲ್ಲೆಗೆರೆ ಗ್ರಾಮದ ಸಮೀಪ ಬೇಬಿ ಗ್ರಾಮದ ನಿವಾಸಿ ಅರುಣ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿ ಅರುಣ್ ಕಾಲು ಮುರಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದರು. ವಿಷಯ ತಿಳಿದು ಎಂ.ಎಂ.ಫೌಂಡೇಶನ್‌ನ ಉಚಿತ ಆ್ಯಂಬುಲೆನ್ಸ್ ಸೇವೆ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿ ಗಾಯಾಳುವಿಗೆ ಸ್ಥಳದಲ್ಲೇ ಪ್ರಾಥಮಿಕ ನೆರವು ನೀಡಿ ಸುರಕ್ಷಿತವಾಗಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಚಿಕಿತ್ಸೆ ಸಮಯಕ್ಕೆ ದೊರೆತ ಪರಿಣಾಮ ಅವರ ಪ್ರಾಣ ಉಳಿಯಿತು.