ಸಾರಾಂಶ
ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಹಂಪಿ: ವಿಶ್ವವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕುರಿ ಪ್ರದರ್ಶನ ಕಾರ್ಯಕ್ರಮವು ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಚಾಲನೆ ನೀಡಿದರು.ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಹಂಪಿ ರಸ್ತೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಶನಿವಾರ ಕುರಿಗಳ ಪ್ರದರ್ಶನ ನಡೆಯಿತು. ಆಕರ್ಷಕ ಕುರಿಗಳು, ಟಗರುಗಳ ವೀಕ್ಷಣೆಗೆ ಜನಸಾಗರವೇ ಹರಿದುಬಂದಿತ್ತು. ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಬಳ್ಳಾರಿ, ಕೆಂಗೂರಿ ಸೇರಿ 5 ರೀತಿಯ ತಳಿಗಳ 63ಕ್ಕೂ ಹೆಚ್ಚು ಕುರಿಗಳು ಪ್ರದರ್ಶನಗೊಂಡವು.
ಗಮನಸೆಳೆದ ಅಲಂಕೃತ ಟಗರುಗಳು: ಕುರಿ ಪ್ರದರ್ಶನದಲ್ಲಿ ಹೂವಿನಹಡಗಲಿಯ ಉತ್ತಂಗಿ, ಕಮಲಾಪುರ, ವೆಂಕಟಾಪುರ, ಕೊಟ್ಟೂರು, ರಾಂಪುರ, ಕೂಡ್ಲಿಗಿ, ಆನೆಕಲ್ಲು ತಾಂಡಾ, ಹರಪನಹಳ್ಳಿ ಸೇರಿದಂತೆ ದೂರದೂರುಗಳಿಂದ ಆಗಮಿಸಿದ್ದ ಟಗರುಗಳನ್ನು ಗೆಜ್ಜೆ, ಬಣ್ಣದ ವಸ್ತ್ರಗಳು, ಬಲೂನ್, ಗೊಂಡೇವು, ಮಿಂಚು, ಕನ್ನಡಿ, ಮೆಹೆಂದಿ ಮೂಲಕ ವಿಶೇಷವಾಗಿ ಟಗರುಗಳನ್ನು ಅಲಂಕರಿಸಲಾಗಿತ್ತು. ಪ್ರೇಕ್ಷಕರು ಹಾಗೂ ವಿದೇಶಿ ಪ್ರವಾಸಿಗರು ಸಹ ಟಗರುಗಳ ಬಳಿ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಸಿನಿನಟರ ಹೆಸರುಗಳು: ಟಗರುಗಳ ಅಲಂಕಾರಕ್ಕಿಂತ ಅವುಗಳ ಹೆಸರುಗಳೇ ವಿಭಿನ್ನವಾಗಿದ್ದವು. ವಿಜಯನಗರ ವೈಟ್ ಫೈಟರ್, ರಾಯಣ್ಣ, ರಾಜಾಹುಲಿ, ಕ್ರೇಜಿಸ್ಟಾರ್ ರವಿಚಂದ್ರ, ಮೈಲಾರಿ, ಜೈಭೀಮ್, ಉಗ್ರಂ, ಜೈ ಬಜರಂಗಿ, ಬೀರ, ಕಾಳಿ ಸೇರಿದಂತೆ ಅನೇಕ ನಟರ, ಸಿನಿಮಾಗಳ ಹಾಗೂ ದೇವರ ಹೆಸರುಗಳನ್ನು ಟಗರುಗಳಿಗೆ ನಾಮಕರಣ ಮಾಡಲಾಗಿತ್ತು. 99 ಕೆಜಿ ತೂಕದ ಉಗ್ರಂ ಟಗರು: ರಾಂಪುರ ಗ್ರಾಮದಿಂದ ಆಗಮಿಸಿದ್ದ ಉಗ್ರಂ ಎಂಬ ಹೆಸರಿನ ಟಗರು ಅಂದಾಜು 99 ಕೆಜಿ ತೂಕವಿದ್ದು, ಟಗರಿನ ವಿನ್ಯಾಸ, ಕೋಡುಗಳು ಹಾಗೂ ಅದರ ಆಕರ್ಷಕ ಅಲಂಕಾರಕ್ಕೆ ಜನರು ಮನಸೋತರು. 5 ವರ್ಷದ ಈ ಟಗರು ದಾವಣಗೆರೆ, ಹರಿಹರ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಕಡೆ ನಡೆದ ಟಗರು ಕಾಳಗ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ 120ಕ್ಕೂ ಹೆಚ್ಚು ಬಾರಿ ಗೆಲುವು ಸಾಧಿಸಿದೆ.ತಳಿಯ ಲಕ್ಷಣಗಳು, ದೇಹದ ರಚನೆ, ಬಲಿಷ್ಠತೆಯ ಆಧಾರದ ಮೇಲೆ ಕುರಿಗಳಿಗೆ ಬಹುಮಾನ ಘೋಷಿಸಲಾಯಿತು. ಕಡ್ಡಿರಾಂಪುರದ ಪ್ರೇಮ ಎಂಬವರ ಟಗರು ಪ್ರಥಮ ಸ್ಥಾನ ಪಡೆಯುವ ಮೂಲಕ ₹10 ಸಾವಿರ ಬಹುಮಾನ, ಕೊಂಡನಾಯಕನಹಳ್ಳಿಯ ಮಾರುತಿ ಎಂಬವರ ಟಗರು ದ್ವಿತೀಯ ಸ್ಥಾನ ಪಡೆದು ₹7500, ಹಳೇಮಲಪನಗುಡಿಯ ಮೋಹನ್ ಎಂಬವರ ಟಗರು ತೃತೀಯ ಸ್ಥಾನ ಪಡೆಯುವ ಮೂಲಕ ₹5 ಸಾವಿರ ಬಹುಮಾನವನ್ನು ಪಡೆಯಿತು ಎಂದು ತೀರ್ಪುಗಾರರಾದ ಪ್ರೊ. ಡಾ. ಪುರೋಹಿತ್ ಬಾಳೆಪ್ಪನವರ್ ತಿಳಿಸಿದರು. ಈ ವೇಳೆ ಇಲಾಖೆಯ ಹೊಸಪೇಟೆ ಸಹಾಯಕ ನಿರ್ದೇಶಕ ಡಾ. ಬೆಣ್ಣಿ ಬಸವರಾಜ್ ಸೇರಿದಂತೆ ಅನೇಕರಿದ್ದರು.