ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ಸಿಗಬೇಕೆಂದು ಅಫಜಲ್ಪುರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಕುರಿ ಹಿಂಡು ನುಗ್ಗಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅಫಜಲ್ಪುರ ಪಟ್ಟಣದ ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಪ್ರತಿಭಟನಾ ಪೂರ್ವ ಸಭೆ ನಡೆಸಿ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೆಡ್-2 ತಹಸೀಲ್ದಾರ ಮುಖಾಂತರ ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆ ಉದ್ದೇಶಿಸಿ ಕುರುಬ ಸಮಾಜದ ಮುಖಂಡ ಜೆ.ಎಂ. ಕೊರಬು ಮಾತನಾಡಿ, ಬಿಜೆಪಿಯ ಹಿರಿಯ ನಾಯಕರು, ಕೇಂದ್ರದ ಸಚಿವರೆಲ್ಲ ಕಳೆದ ಬಾರಿಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸಮಾಜವನ್ನು ಎಸ್.ಟಿ. ಮೀಸಲಾತಿ ಅಡಿಯಲ್ಲಿ ಸೇರಿಸುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದಾರೆ. ನಾವು ಮೀಸಲಾತಿಯಿಂದ ವಂಚಿತರಾಗಿದ್ದೇವೆ. ನಮ್ಮ ಮುಂದಿನ ಪೀಳಿಗೆ ವಂಚಿತರಾಗಬಾರದೆಂದು ನಾವು ಈಗ ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಕೇಳುವ ಹಾಗೆ ಹೋರಾಟ ರೂಪಿಸಬೇಕಾಗಿದೆ. ಗೊಂಡ ಪಂಗಡಕ್ಕೆ ಎಸ್.ಟಿ. ಮೀಸಲಾತಿ ನೀಡಲಾಗುತ್ತಿದೆ. ಗೊಂಡದ ಪರ್ಯಾಯ ಪದವಾಗಿರುವ ಕುರುಬರನ್ನು ಕೂಡ ಎಸ್.ಟಿ. ಮೀಸಲಿನಡಿ ಮೀಸಲಾತಿ ನೀಡಬೇಕಾಗಿದೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕುರುಬ ಸಮಾಜದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ಗೊಂಡರೇ ಕುರುಬರು, ಕುರುಬರೇ ಗೊಂಡರು ಎನ್ನುವ ಸತ್ಯವನ್ನು ಕೇಂದ್ರ ಸರ್ಕಾರಕ್ಕೆ ನಾವೆಲ್ಲರೂ ಮನವರಿಕೆ ಮಾಡಿಕೊಡಬೇಕಾಗಿದೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಂಭಾವಿತರಾಗಿ ಹೋರಾಟ ಮಾಡೋಣ. ಅಗತ್ಯ ಬಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧರಾಗೋಣ. ಮಠದಲ್ಲಿ ಕುಳಿತು ಭಕ್ತರಿಗೆ ಆಶೀರ್ವಾದ ಮಾಡುತ್ತಾ ಕಾಣಿಕೆ ಪಡೆದು ಐಶಾರಾಮಿ ಜೀವನ ನಡೆಸುವ ಸ್ವಾಮೀಜಿ ನಾನಲ್ಲ. ನಮ್ಮಿಂದ ಆಶೀರ್ವಾದ ಪಡೆದುಕೊಳ್ಳುವ ಭಕ್ತರ ಮನೆಗಳು ಬೀದಿಗೆ ಬರಬಾರದು, ಅವರ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಾರದೆಂದು ಅನಾರೋಗ್ಯದ ನಡುವೆಯೂ ಮಠ ತೊರೆದು ಬೀದಿಗೆ ಬಂದಿದ್ದೇನೆ. ನಮ್ಮ ಬೇಡಿಕೆ ಈಡೇರುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹಿಂದೊಮ್ಮೆ ಬೀದರ್ ಸಂಸದ ಭಗವಂತ ಖುಬಾ ಅವರು ನಮ್ಮ ಕುಲದೈವ ಮಾಳಿಂಗರಾಯ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಕುರುಬ ಸಮಾಜವನ್ನು ಎಸ್.ಟಿ. ಮೀಸಲಾತಿ ಅಡಿ ಸೇರಿಸುವುದಾಗಿ ಭರವಸೆ ನೀಡಿದ್ದರು. ಈಗ ಕೊಟ್ಟ ಮಾತು ಮರೆತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.ಸಮಾಜದ ಮುಖಂಡರಾದ ಮಹಾಂತೇಶ ಕೌಲಗಿ, ಬೈಲಪ್ಪ ಪೂಜಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಬೀರಲಿಂಗ ದೇವರು, ಗುರುನಾಥ ಪೂಜಾರಿ, ಬೀರಣ್ಣ ಪೂಜಾರಿ, ರಮೇಶ ಪೂಜಾರಿ, ಯಲ್ಲಾಲಿಂಗ ಪೂಜಾರಿ, ಸಾಯಬಣ್ಣ ಪೂಜಾರಿ, ಪದ್ಮಗೊಂಡ ಪೂಜಾರಿ, ಕರೇಪ್ಪ ಪೂಜಾರಿ, ನಿಂಗಗೊಂಡ ಪೂಜಾರಿ ಸೇರಿದಂತೆ ಅನೇಕರು ಇದ್ದರು.