ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ತ್ಯಾಗ ಬಲಿದಾನ ಹಾಗೂ ದಾನದ ಸಂಕೇತವೇ ಮುಸ್ಲಿಂ ಬಾಂಧವರು ಆಚರಿಸುವ ಬಕ್ರೀದ್. ಗುರುವಾರ ಎಲ್ಲೆಡೆ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಬಕ್ರೀದ್ ಹಬ್ಬ ಜೋರಾಗಿ ನಡೆಯುತ್ತದೆ. ಹಬ್ಬದ ಪ್ರಯುಕ್ತ ಮೇಕೆ, ಆಡು, ಕುರಿಗಳನ್ನು ಬಲಿ ನೀಡುವುದು ಹಬ್ಬದ ವಾಡಿಕೆ. ಕಾರಣ ಬಕ್ರೀದ್ ಹಬ್ಬದ ಬಲಿಗಾಗಿ ಮೇಕೆ ಹಾಗೂ ಕುರಿಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿವೆ.

ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದಂತೆ ರಾಜ್ಯಾದ್ಯಂತ ಕುರಿ, ಮೇಕೆ ಹಾಗೂ ಕೋಳಿಗಳ ಖರೀದಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಪೆರೆಸಂದ್ರ ಕುರಿಸಂತೆಯಲ್ಲಿ ವರ್ತಕರು ಕುರಿ, ಮೇಕೆ ಖರೀದಿಗೆ ಮುಗಿಬಿದ್ದಿದ್ದಾರೆ. ಈ ಸಂತೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ತಮಿಳುನಾಡು ಮತ್ತು ಕೇರಳದಿಂದಲೂ ವರ್ತಕರು ಆಗಮಿಸುತ್ತಿದ್ದಾರೆ.

ಬಕ್ರೀದ್ ಹಬ್ಬ ಬಂದರೆ ಸಾಕು ಕುರಿ ಸಾಕಾಣಿಕೆದಾರರಿಗೆ ಸುಗ್ಗಿಯ ಕಾಲ. ಬಕ್ರೀದ್ ಹಬ್ಬದಲ್ಲಿ ಮಾರಾಟ ಮಾಡಲೆಂದೇ ಕೆಲವರು ಕುರಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಇವರೆಲ್ಲಾ ತಾಲೂಕಿನ ಪೆರೆಸಂದ್ರದ ಎಪಿಎಂಸಿ ಮಾರುಕಟ್ಟೆಯಲ್ಲಿನ ಜಾರುವಾರು ಮಾರುಕಟ್ಟೆಯಲ್ಲಿ ಸಾಕು ಪ್ರಾಣಿಗಳನ್ನು ಮಾರಾಟ ಮಾಡಲು ತರುತ್ತಾರೆ.

80 ಸಾವಿರ ಕುರಿಗಳು:


ಸೋಮವಾರ ನಡೆದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸುಮಾರು 80 ಸಾವಿರಕ್ಕೂ ಹೆಚ್ಚು ಕುರಿಗಳು ಆಗಮಿಸಿದ್ದು, ಪ್ರಸ್ತುತ ವಿಶೇಷವಾಗಿ ಸಾಕಿದ್ದ 25 ಸಾವಿರದಿಂದ 30 ಸಾವಿರಕ್ಕೂ ಹೆಚ್ಚು ಕುರಿಗಳು ಮಾರಾಟಕ್ಕೆ ಲಭ್ಯವಿದ್ದವು. ಸಾವಿರಾರು ವ್ಯಾಪಾರಿಗಳು ತಮಗೆ ಇಷ್ಟವಾದ ಕುರಿ, ಮೇಕೆ, ಟಗರುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿಸಿದ್ದರ ಪರಿಣಾಮವಾಗಿ ಕುರಿ ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿತ್ತು. ಒಂದು ಕುರಿಗೆ ಕನಿಷ್ಠ 3,000 ರು.ಗಳಿಂದ ಆರಂಭವಾಗಿ, ಮೇಕೆಗಳಿಗೆ 10,000 ದಿಂದ 15,000 ರು.ಗಳವರೆಗೂ ಬೆಲೆ ಇದೆ. ಒಟ್ಟಾರೆ, ಬಕ್ರೀದ್ ಹಬ್ಬದ ಪ್ರಯುಕ್ತ ಪೆರೆಸಂದ್ರ ಕುರಿ ಸಂತೆಯಲ್ಲಿ ವ್ಯಾಪಾರ-ವಹಿವಾಟು ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಒಂದು ಕುರಿಗೆ ಸರಾಸರಿ 30 ರಿಂದ 35 ಸಾವಿರ ರುಪಾಯಿಗೆ ದರ ನಿಗದಿಯಾಗಿತ್ತು. ಕನಿಷ್ಠ 30 ಸಾವಿರದಿಂದ ಹಿಡಿದು 1 ಲಕ್ಷದವರೆಗೂ ಕುರಿಗಳು ಮಾರಾಟವಾದವು. ಕಳೆದ ಬಾರಿಗಿಂತ ಈ ವರ್ಷ ಕುರಿಗಳ ದರ ಏರಿಕೆಯಾಗಿದೆ. ಹೆಚ್ಚು ಜನರು ಖರೀದಿಗೆ ಬಂದಿದ್ದರು.

ಎಪಿಎಂಸಿ ಅಧಿಕಾರಿಗಳ ಪ್ರಕಾರ ಜಿಲ್ಲೆಯ ಅತಿ ದೊಡ್ಡ ಕುರಿಗಳ ಸಂತೆಯಲ್ಲಿ ಒಂದಾದ ಚಿಕ್ಕಬಳ್ಳಾಪುರದ ತಾಲೂಕಿನ ಪೆರೆಸಂದ್ರ ಗ್ರಾಮದಲ್ಲಿ ಸೋಮವಾರದ ಕುರಿಗಳ ಸಂತೆಯಲ್ಲಿ ಮೂಲೆ ಮೂಲೆಗಳಿಂದ ರೈತರು ಕುರಿ ಮಾರಲು ಬಂದಿದ್ದು ವಿವಿಧ ತಳಿಯ ಕುರಿಗಳನ್ನು ತಂದಿದ್ದರು. ಸುಮಾರು ಎಂಬತ್ತು ಸಾವಿರಕ್ಕೂ ಹೆಚ್ಚು ಕುರಿ, ಮೇಕೆಗಳು ಸಂತೆಯಲ್ಲಿ ಸೇರಿದ್ದು ಒಂದೇ ದಿನದಲ್ಲಿ ಸುಮಾರು ಎರಡು ಕೋಟಿ ರುಪಾಯಿಗಳ ವ್ಯಾಪಾರ ವಹಿವಾಟು ಆಗಿದೆ.

ಹಬ್ಬಕ್ಕೆ ಕೆಲ ದಿನಗಳ ಮುಂಚೆಯಿಂದಲೇ ಹಬ್ಬದ ಪ್ರಯಕ್ತ ಬಲಿದಾನ ಮಾಡಲು ಮೇಕೆ ಹಾಗೂ ಕುರಿಗಳಿಗೆ ಬೇಡಿಕೆ ಹೆಚ್ಚಿದೆ. ಜಿಲ್ಲೆಯ ಜಾನುವಾರು ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಿದೆ. ಅದರಲ್ಲೂ ಕುರಿಗಳು ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ ನೆರೆಯ ಆಂಧ್ರಪ್ರದೇಶ ,ತೆಲಂಗಾಣ ಮತ್ತು ಕೇರಳದ ವಿವಿಧ ಭಾಗಗಳಿಂದ ಕುರಿಗಳನ್ನು ಮಾರಾಟ ಮಾಡಲು ಸಾಕಾಣಿಕೆದಾರರು ಜಿಲ್ಲೆಗೆ ಆಗಮಿಸಿ, ಉತ್ತಮ ದರಕ್ಕೆ ತಮ್ಮ ಕುರಿಗಳು ಮಾರಾಟ ಆಗುತ್ತಿರುವುದಕ್ಕೆ ಆಂಧ್ರದ ಚಿಲುಮತ್ತೂರಿನ ಕುರಿ ಸಾಕಾಣಿಕೆದಾರ ಚೆಂಗಲ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ .

-----------ಸಿಕೆಬಿ-1 ಜಿಲ್ಲೆಯ ಅತಿ ದೊಡ್ಡ ಕುರಿಗಳ ಸಂತೆಯಲ್ಲಿ ಒಂದಾದ ಪೆರೇಸಂದ್ರ ಕುರಿಗಳ ಸಂತೆಯಲ್ಲಿ ಕುರಿಗಳ ಮಾರಾಟ.