ಸಂಯುಕ್ತ ಅರಬ್ ಎಮಿರೇಟ್ಸ್‌ (ಯುಎಇ) ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವೈದ್ಯರು, ತಜ್ಞರು, ಆರೋಗ್ಯ ಕಾರ್ಯಕರ್ತರು ಹಾಗೂ ಸಂಸ್ಥೆಗಳನ್ನು ಯುಎಇ ಸಚಿವ ಸಂಪುಟದ ಸದಸ್ಯ ಮತ್ತು ಸಹಿಷ್ಣುತೆ ಹಾಗೂ ಸಹಬಾಳ್ವೆ ಖಾತೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಗೌರವಿಸಿದರು. ದುಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ಅ.28ರಂದು ನಡೆದ ಆರನೇ ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಕ್ಷೇತ್ರಗಳ ಸುಮಾರು 1,000 ಗಣ್ಯರು, ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಮಂಗಳೂರು : ಸಂಯುಕ್ತ ಅರಬ್ ಎಮಿರೇಟ್ಸ್‌ (ಯುಎಇ) ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವೈದ್ಯರು, ತಜ್ಞರು, ಆರೋಗ್ಯ ಕಾರ್ಯಕರ್ತರು ಹಾಗೂ ಸಂಸ್ಥೆಗಳನ್ನು ಯುಎಇ ಸಚಿವ ಸಂಪುಟದ ಸದಸ್ಯ ಮತ್ತು ಸಹಿಷ್ಣುತೆ ಹಾಗೂ ಸಹಬಾಳ್ವೆ ಖಾತೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಗೌರವಿಸಿದರು. ದುಬೈನ ಗ್ರ್ಯಾಂಡ್ ಹಯಾತ್‌ನಲ್ಲಿ ಅ.28ರಂದು ನಡೆದ ಆರನೇ ವಾರ್ಷಿಕ ಆರೋಗ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆರೋಗ್ಯ ಕ್ಷೇತ್ರಗಳ ಸುಮಾರು 1,000 ಗಣ್ಯರು, ನಾಯಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.ವೈದ್ಯಕೀಯ ಸೇವೆಯಲ್ಲಿನ ಶ್ರೇಷ್ಠತೆ, ಶಸ್ತ್ರಚಿಕಿತ್ಸಾ ಕ್ಷೇತ್ರದ ಆವಿಷ್ಕಾರ, ಸಾರ್ವಜನಿಕ ಆರೋಗ್ಯ, ಕ್ಷೇಮಾಭಿವೃದ್ಧಿ ನಾಯಕತ್ವ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ರೋಗಿಗಳ ಆರೈಕೆ ಸೇರಿದಂತೆ 50ಕ್ಕೂ ಅಧಿಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಯುಎಇಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಕೊಡುಗೆ ನೀಡಿದ 15 ಎಮಿರೇಟಿ ಪ್ರಜೆಗಳಿಗೂ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆರೋಗ್ಯ ಕ್ಷೇತ್ರದ ಸಾಧಕರು ಮತ್ತು ಸಂಸ್ಥೆಗಳು ತಮ್ಮ ಕೌಶಲ, ನಾವೀನ್ಯತೆ ಹಾಗೂ ಸಮರ್ಪಣಾ ಮನೋಭಾವದ ಮೂಲಕ ದೇಶದ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದಾರೆ ಎಂದು ಶೇಖ್ ನಹ್ಯಾನ್ ಬಿನ್ ಮುಬಾರಕ್ ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಮಹತ್ವದ ಬದಲಾವಣೆ ತರುತ್ತಿವೆ. ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು, ವೈದ್ಯಕೀಯ ಸಂಶೋಧನೆಗೆ ನೆರವಾಗಲು ಮತ್ತು ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಇವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಹೇಳಿದರು.

ಯುಎಇಯಲ್ಲಿ 2026ನೇ ವರ್ಷವನ್ನು ಕುಟುಂಬದ ವರ್ಷವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಣೆಯಲ್ಲಿ ಕುಟುಂಬಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ತುಂಬೆ ಗ್ರೂಪ್‌ ಸಂಸ್ಥಾಪಕ ಅಧ್ಯಕ್ಷ ಹಾಗೂ ಹೆಲ್ತ್ ಮ್ಯಾಗಜೀನ್‌ನ ಸಂಸ್ಥಾಪಕ ಮತ್ತು ಪ್ರಕಾಶಕ ಡಾ. ತುಂಬೆ ಮೊಯ್ದೀನ್ ಮಾತನಾಡಿ, 1999ರಲ್ಲಿ ಆರಂಭವಾದ ಹೆಲ್ತ್ ಮ್ಯಾಗಜೀನ್‌ನಿಂದ ಆರೋಗ್ಯ ಪ್ರಶಸ್ತಿಗಳ ಪರಿಕಲ್ಪನೆ ಬೆಳೆಯಿತು. ಪ್ರಸ್ತುತ ತುಂಬೆ ಮೀಡಿಯಾ ಉತ್ತರ ಎಮಿರೇಟ್ಸ್‌ನ ಪ್ರಮುಖ ಮ್ಯಾಗಜೀನ್ ಪ್ರಕಾಶನ ಸಂಸ್ಥೆಯಾಗಿದ್ದು, ಹೆಲ್ತ್, ಲಿವಿಂಗ್ ಗಲ್ಫ್, ಗಲ್ಫ್ ಪೆಟ್ಸ್ ಆ್ಯಂಡ್ ವೆಟ್ಸ್, ಗಲ್ಫ್ ಎಜುಕೇಶನ್ ಸೇರಿದಂತೆ ಐದು ಶೀರ್ಷಿಕೆಗಳನ್ನು ಹೊಂದಿದೆ ಎಂದರು. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದ ಅವರು, ನಿರಂತರ ಪ್ರೋತ್ಸಾಹ ನೀಡುತ್ತಿರುವ ಶೇಖ್ ನಹ್ಯಾನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು.ತುಂಬೆ ಗ್ರೂಪ್‌ನ ಅಂಗಸಂಸ್ಥೆಯಾದ ತುಂಬೆ ಮೀಡಿಯಾದ ಪ್ರಮುಖ ಪ್ರಕಟಣೆ ಹೆಲ್ತ್ ಮ್ಯಾಗಜೀನ್ ಈ ಸಮಾರಂಭವನ್ನು ಆಯೋಜಿಸಿತ್ತು.

ಮಾಡರ್ನ್ ಫಾರ್ಮಸಿ, ಎಂ.ಪಿ.ಸಿ. (ಮಾಡರ್ನ್ ಫಾರ್ಮಾಸ್ಯುಟಿಕಲ್ ಕಂಪನಿ), ತುಂಬೆ ಫಾರ್ಮಸಿ, ತುಂಬೆ ಮತ್ತು ಸಿಟಿ ಫಾರ್ಮಾಸ್ಯುಟಿಕಲ್ ಕಂಪನಿ ಮುಖ್ಯ ಪ್ರಾಯೋಜಕರಾಗಿದ್ದವು. ನೈಟ್ ಫ್ರಾಂಕ್ ಜ್ಞಾನ ಪಾಲುದಾರ ಸಂಸ್ಥೆಯಾಗಿತ್ತು.