ಆಶ್ರಯ ಸಮಿತಿ ರಚಿಸಿ 2 ತಿಂಗಳಲ್ಲಿ ನಿವೇಶನ ಹಂಚಿಕೆ

| Published : Oct 07 2025, 01:02 AM IST

ಸಾರಾಂಶ

ರಾಮನಗರ: ಮುಂದಿನ ಎರಡು ತಿಂಗಳಲ್ಲಿ ಆಶ್ರಯ ಸಮಿತಿ ರಚನೆ ಮಾಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ರಾಮನಗರ: ಮುಂದಿನ ಎರಡು ತಿಂಗಳಲ್ಲಿ ಆಶ್ರಯ ಸಮಿತಿ ರಚನೆ ಮಾಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಪಂಚಾಯಿತಿ ವ್ಯಾಪ್ತಿಯ ಚನ್ನಮಾನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸ್ವೀಕರಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಅಹವಾಲು ಸಲ್ಲಿಸಿದ ಬಹುತೇಕ ಮಂದಿ ನಿವೇಶನ ಕೋರಿ ಮನವಿ ಮಾಡಿದ್ದೀರಿ. ಈಗಾಗಲೇ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಂಬಾಪುರ ಗ್ರಾಮದ ಬಳಿ ಸುಮಾರು 22 ಎಕರೆ ಜಮೀನನ್ನು ಗುರುತಿಸಲಾಗಿದೆ. ಅಲ್ಲಿ ಚನ್ನಮಾನಹಳ್ಳಿ, ವಿಭೂತಿಕೆರೆ, ಅಂಜನಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನಿವೇಶನ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ಅತಿ ಶೀಘ್ರದಲ್ಲೇ ಆಶ್ರಯ ಸಮಿತಿ ರಚನೆ ಮಾಡುತ್ತೇವೆ. ಆಯಾಯ ಗ್ರಾಮದಲ್ಲಿ ಯಾರು ಬಡವರು, ನಿರ್ಗತಿಕರು, ಯಾರಿಗೆ ನಿವೇಶನ ಅಗತ್ಯವಿದೆ ಎಂಬುದನ್ನು ಗುರುತಿಸಿ ನಿವೇಶನ ಹಂಚಿಕೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

1 ಸಾವಿರ ಬಗರ್ ಹುಕುಂ ಅರ್ಜಿ:

ಕಳೆದ 20 ವರ್ಷದಿಂದ ತಾಲೂಕಿನಲ್ಲಿ ನಿವೇಶನ ಮಾತ್ರವಲ್ಲದೇ, ಒಂದೇ ಒಂದು ಗುಂಟೆ ಬಗರ್ ಹುಕುಂ ಜಮೀನನ್ನೂ ಸಹ ನೀಡಿಲ್ಲ. ಈ ಹಿಂದೆ ನಿಮ್ಮಿಂದ ಆಯ್ಕೆಯಾದ ನಾಯಕರು ಮುಖ್ಯಮಂತ್ರಿ , ಪ್ರಧಾನ ಮಂತ್ರಿ ಹುದ್ದೆಗಳನ್ನು ಅಲಂಕರಿಸಿದರು. ನೀವು ಎಷ್ಟೇ ಆಶೀರ್ವಾದ ಮಾಡಿದರೂ, ಅವರು ನಿಮ್ಮ ಋಣ ತೀರಿಸಲಿಲ್ಲ. ನಮಗೆ ನೀವು ಶಾಸಕನನ್ನಾಗಿ ಮಾಡಿ ಎರಡೂವರೆ ವರ್ಷ ಕಳೆದಿದೆ. ಈ ಸೀಮಿತ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.

ವಿಭೂತಿಕೆರೆ ಪಂಚಾಯಿತಿಗೆ ವಿವಿಧ ಅನುದಾನದಡಿ 9.5ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದೇವೆ. ಚನ್ನಮಾನಹಳ್ಳಿ ಗ್ರಾಮಕ್ಕೆ 1 ಕೋಟಿ ಅನುದಾನ ಕೊಟ್ಟಿದ್ದೇವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 50 ಕೋಟಿ ಲಭ್ಯವಿದ್ದು, ಈ ಗ್ರಾಮಕ್ಕೆ ಇನ್ನೂ 20 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1 ಕೋಟಿ ವೆಚ್ಚದಲ್ಲಿ ಚನ್ನಮಾನಹಳ್ಳಿ ಕೆರೆ ಅಭಿವೃದ್ಧಿ ಮಾಡುತ್ತಿದ್ದೇವೆ. ಮುಂದಿನ ವಾರ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಶಾಸಕರು ತಿಳಿಸಿದರು.

ಸಭೆಯಲ್ಲಿ ಶೈಕ್ಷಣಿಕ ಸಹಾಯಧನ, ಉದ್ಯೋಗ, ನಿವೇಶನ, ಚರಂಡಿ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಕೋರಿ ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಕುಂದುಕೊರತೆ ಸಭೆ ನಂತರ 35 ಎಕರೆ ವ್ಯಾಪ್ತಿಯಲ್ಲಿರುವ ಚನ್ನಮಾನಹಳ್ಳಿ ಕೆರೆ ಅಳತೆ ಕಾರ್ಯ ಮಾಡಲು ತಹಸೀಲ್ದಾರ್ ಅವರಿಗೆ ಸೂಚಿಸುತ್ತೇನೆ. ಕೆರೆ ಏರಿಯ ಮೇಲೆ 13 ಅಡಿ ಅಗಲವಾದ 1 ಕಿ.ಮೀ ವಾಕಿಂಗ್ ಪಾಥ್, ಪ್ರವೇಶ ದ್ವಾರ ಮಾಡಬಹುದು. ಊರಿನ ಕಲುಷಿತ ನೀರು ಕೆರೆ ಸೇರದಂತೆ ಕ್ರಮವಹಿಸಿ ಎಂದು ಎಂಜಿನಿಯರ್‌ಗೆ ಇಕ್ಬಾಲ್ ಹುಸೇನ್ ರವರು ಸೂಚನೆ ನೀಡಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ವಿ.ಎಚ್.ರಾಜು, ಬಗರ್ ಹುಕುಂ ಸಮಿತಿ ಸದಸ್ಯ ಜಯಕರ್ನಾಟಕ ರವಿ, ಗ್ರಾಮದ ಮುಖಂಡರಾದ ನಾಗೇಶ್, ಚನ್ನಮಾನಹಳ್ಳಿ ರಾಜು, ವೆಂಕಟಪ್ಪ, ಉಮೇಶ್, ಶ್ರೀನಿವಾಸ್, ಶಶಿ, ಮುನಿರಾಜು, ಗೋವಿಂದರಾಜು, ವೆಂಕಟಪ್ಪ, ಶಿವಣ್ಣ, ವಿಷಕಂಠಪ್ಪ, ಕುಂಬಾಪುರ ಪಾರ್ಥ,ಅರಳಪ್ಪ, ಭೂಷಣ್ ಮತ್ತಿತರರು ಹಾಜರಿದ್ದರು.

ಕೋಟ್‌...........

ಕಳೆದ 20-25 ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೀರಿ. ಅಂತಹ 850ರಿಂದ 1000 ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ, ಅರ್ಹ ರೈತರಿಗೆ ಸಾಗುವಳಿ ಜಮೀನು ಕೊಡಿಸುತ್ತೇನೆ. ಈಗಾಗಲೇ ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಜಮೀನಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಸುಮಾರು 40 ಮಂದಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ.

-ಇಕ್ಬಾಲ್‌ ಹುಸೇನ್‌, ಶಾಸಕ, ರಾಮನಗರ ವಿಧಾನಸಭಾ ಕ್ಷೇತ್ರ

6ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಚನ್ನಮಾನಹಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.