ಮಂಡ್ಯ ತಾಲೂಕಿನ ವ್ಯಕ್ತಿಗಳಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಕುರುಬ ಸಮುದಾಯದ ಬಗ್ಗೆ ಅವ್ಯಾಚ್ಚವಾಗಿ ಮಾತನಾಡಿ ಅಗೌರವ ತೋರಿದ್ದಾರೆ. ಸಿಎಂರನ್ನು ನಿಂದಿಸಿ, ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕುರುಬ ಸಮುದಾಯ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೀಳು ಶಬ್ದಗಳಿಂದ ನಿಂದಿಸಿರುವ ವ್ಯಕ್ತಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕುರುಬ ಸಮುದಾಯದ ಮುಖಂಡರು ಪೊಲೀಸ್ ಠಾಣೆಗೆ ದೂರು ನೀಡಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೆಶಕ ಪುಟ್ಟಬಸವಯ್ಯ ಮಾತನಾಡಿ, ಮಂಡ್ಯ ತಾಲೂಕಿನ ವ್ಯಕ್ತಿಗಳಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಕುರುಬ ಸಮುದಾಯದ ಬಗ್ಗೆ ಅವ್ಯಾಚ್ಚವಾಗಿ ಮಾತನಾಡಿ ಅಗೌರವ ತೋರಿದ್ದಾರೆ. ಸಿಎಂರನ್ನು ನಿಂದಿಸಿ ಸರ್ಕಾರ ನಿಮ್ಮದೇ ಇದೆ ತಾಕತ್ತು ಇದ್ದರೇ ಕ್ರಮ ಕೈಗೊಳ್ಳಿ ಎಂದು ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆ ಸಾಮರಸ್ಯಕ್ಕೆ ಹೆಸರುವಾಸಿ. ಕೋಮು ಘರ್ಷಣೆಗೆ ಅನುವು ಮಾಡಿಕೊಡುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೌಹರ್ಧತೆಯನ್ನು ಕಾಪಾಡಬೇಕೆಂದು ಕೋರಿದರು.

ಈ ವೇಳೆ ಕುರುಬರ ಸಂಘದ ತಾಲೂಕು ಅಧ್ಯಕ್ಷ ನಾಗರಾಜು, ಪುರಸಭೆ ಸದಸ್ಯ ಆನಂದ್, ಮುಖಂಡರಾದ ವಿಜಯ್ ಕುಮಾರ್, ಲಿಂಗರಾಜು, ಬಂಕ್ ಮಹದೇವು, ಮಂಜು, ಮಂಜು, ಮಹದೇವು, ಮಹದೇವಸ್ಚಾಮಿ, ಶಿವಣ್ಣ, ಮಂಜುನಾಥ್, ಚನ್ನಯ್ಯ, ಬಸವರಾಜು ಸೇರಿದಂತೆ ಇತರರು ಇದ್ದರು.

ಸಿಎಂ, ಡಿಸಿಎಂ ವಿರುದ್ಧ ಕೀಳುಪದ ಬಳಕೆ: ಆ.13ರಂದು ಬಸರಾಳು ಬಂದ್

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಬಸರಾಳಿನ ಬೆನ್ನಟ್ಟಿ ಗ್ರಾಮದ ಕುಮಾರ ಹಾಗೂ ಶಾನಬೋಗನಹಳ್ಳಿ ಗ್ರಾಮದ ಮಹೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕೀಳು ಮಟ್ಟದ ಪದಗಳನ್ನು ಬಳಸಿ ಬೆದರಿಕೆ ಹಾಕಿರುವುದನ್ನು ಖಂಡಿಸಿ ಆ.13ರಂದು ಬಸರಾಳು ಬಂದ್‌ಗೆ ಕರೆ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ತಿಳಿಸಿದರು.

ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಅತ್ಯಂತ ನಿಕೃಷ್ಟ ಪದಗಳಿಂದ ನಿಂದಿಸಿದ್ದಾರೆ. ಇಂತಹ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕುರುಬ ಸಮಾಜ ಹಾಗೂ ಹೆಣ್ಣು ಮಕ್ಕಳ ಬಗ್ಗೆಯೂ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಇವರು ಹೇಳಿರುವ ಪದಗಳನ್ನು ಹೇಳಲು ಸಹ ಅಸ್ಯವಾಗುತ್ತದೆ. ಇಂತಹ ಕೀಳು ಮಟ್ಟದ ಪದಗಳಿಂದ ನಿಂದಿಸಿರುವ ಈ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಇಂತಹ ವ್ಯಕ್ತಿಗಳ ಕೀಳು ಮಟ್ಟದ ಧೋರಣೆಯನ್ನು ಖಂಡಿಸಿ ಬುಧವಾರ ಬಸರಾಳು ಬಂದ್ ಆಚರಿಸಲಾಗುವುದು. ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿ ನಮ್ಮ ಪ್ರತಿಭಟನೆ ಯಶಸ್ವಿಗೊಳಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕುರುಬ ಸಮಾಜ ಜಿಲ್ಲಾಧ್ಯಕ್ಷ ಎಂ.ಎನ್. ಸುರೇಶ್, ದೊಡ್ಡಯ್ಯ ಇತರರು ಗೋಷ್ಠಿಯಲ್ಲಿದ್ದರು.