ಸಾರಾಂಶ
ಹಾವೇರಿ: ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ನಡೆದಿದೆ.
ಹನಮಂತಗೌಡ ಶಿವನಗೌಡ ರಾಮನಗೌಡ (40) ಮೃತಪಟ್ಟ ವ್ಯಕ್ತಿ. ಕುರಿಗಳನ್ನು ಮೇಸಿಕೊಂಡು ಫ್ಲಾಟ್ ಏರಿಯಾ ಓಣಿ ದಾರಿ ಹೊಲದಲ್ಲಿ ನಿಂತುಕೊಂಡಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಸ್ಥಳಕ್ಕೆ ತಹಸೀಲ್ದಾರ್ ಶರಣಮ್ಮ ಕಾರಿ, ಗುತ್ತಲ ಪೊಲೀಸ್ ಠಾಣೆಯ ಪಿಎಸ್ಐ ಬಸನಗೌಡ ಬಿರಾದರ, ರವಿ ಮಲ್ಲಾಡದ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ವಿವಿಧೆಡೆ ಮಳೆಜಿಲ್ಲೆಯ ವಿವಿಧೆಡೆ ಸೋಮವಾರ ಮಳೆಯಾಗಿದ್ದು, ಹಾನಗಲ್ಲ ತಾಲೂಕಿನಲ್ಲಿ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭರ್ಜರಿ ಮಳೆ ಸುರಿದಿದೆ.ಹಾನಗಲ್ಲ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ಸಂಜೆ ಗಂಟೆಗೂ ಅಧಿಕ ಕಾಲ ಮಳೆ ಸುರಿದಿದೆ. ಇದರಿಂದ ಕೆಲಕಾಲ ವ್ಯಾಪಾರ ವಹಿವಾಟು, ಜನಸಂಚಾರಕ್ಕೆ ತೊಂದರೆಯಾಯಿತು. ವಿದ್ಯುತ್ ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಹಾವೇರಿ ನಗರದಲ್ಲಿ ಸಂಜೆಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ರಾತ್ರಿವರೆಗೂ ಮುಂದುವರಿದಿದೆ.ರೈತರು ಪ್ರಮಾಣಿತ ಬೀಜ ಖರೀದಿಸಲು ಸೂಚನೆ
ಹಾನಗಲ್ಲ: ಪ್ರಮಾಣಿತ ಹಾಗೂ ತೋಟಗಾರಿಕೆ ಇಲಾಖೆಯಿಂದ ಪರವಾನಗಿ ಪಡೆದ ಬಿತ್ತನೆ ಬೀಜಗಳನ್ನು ಮಾತ್ರ ಮಾರಾಟ ಮಾಡುವಂತೆ ಹಾಗೂ ರೈತರು ಪ್ರಮಾಣಿತ ಬಿತ್ತನೆ ಬೀಜಗಳನ್ನೆ ಅಧಿಕೃತ ಮಾರಾಟಗಾರಿಂದ ಖರೀದಿಸಿ ಬಿತ್ತನೆಗೆ ಮುಂದಾಗುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ತೋಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ ಮನವಿ ಮಾಡಿದ್ದಾರೆ.ಸೋಮವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ರೈತರಿಗೆ ಉತ್ತಮ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವ ಉದ್ದೇಶಕ್ಕಾಗಿ ಸ್ಥಳೀಯ ತೋಟಗಾರಿಕೆ ಇಲಾಖೆ ಮಾರಾಟಗಾರರಿಗೆ ಪರವಾನಗಿ ಪತ್ರ ನೀಡುವ ಸಕ್ಷಮ ಪ್ರಾಧಿಕಾರವಾಗಿದೆ. ತೋಟಗಾರಿಕಾ ಬೆಳೆಗಳಾದ ಹೂವು, ಹಣ್ಣು, ತರಕಾರಿ ಬೀಜ ಉತ್ಪಾದಿಸಿ ಮಾರಾಟ ಮಾಡುವವರು ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡಬೇಕು. ಖಾಸಗಿಯಾಗಿ ತರಕಾರಿ ಬೀಜ ಉತ್ಪಾದನೆ ಮಾಡುವ ಕಂಪನಿಯವರು, ರೈತ ಉತ್ಪಾದಕ ಸಂಸ್ಥೆಯವರು, ಖಾಸಗಿ ಬೀಜ ಮಾರಾಟ ಮಳಿಗೆಯವರು ಆನ್‌ಲೈನ್ ಸೇವಾ ಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಿ ನಂತರ ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಹಾನಗಲ್ಲಿನ ಹಿರಿಯ ತೋಟಗಾರಿಕೆ ನಿರ್ದೇಶಕರಿಗೆ ಸಲ್ಲಿಸಿ ಅವರಿಂದ ಪರವಾನಗಿ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.