ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಕುರುಬರು ರಾಜಕೀಯ ಪಕ್ಷಗಳ ಗುಲಾಮರಲ್ಲ, ಆಡಳಿತ ರಾಜಕೀಯ ಪಕ್ಷಗಳು ನಮ್ಮ ಸಮಾಜದ ಮಹತ್ತರ ಬೇಡಿಕೆಯಾದ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಮಾನವೀಯತೆ ದೃಷ್ಟಿಯಿಂದ ನಮ್ಮ ಸಮಾಜವನ್ನು ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿಯ ಸಿದ್ಧರಾಮಾನಂದ ಸ್ವಾಮೀಜಿ ಒತ್ತಾಯಿಸಿದರು.ಪಟ್ಟಣದ ಕನಕಭವನದಿಂದ ಪ್ರಾರಂಭವಾದ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಎಸ್.ಟಿ. ಪಟ್ಟಿಗೆ ಸೇರಿಸಬೇಕು ಎಂದು ನಡೆಸಿದ ಬೃಹತ್ ಪ್ರತಿಭಟನೆಯು ಲಾಡ್ಜಿಂಗ್ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಗೆ ತಲುಪಿದ ನಂತರದ ಹೊರಾಟವನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಗೊಂಡ ಪರ್‍ಯಾಯ ಪದದಲ್ಲಿ ಅನೇಕ ಪದಗಳಿವೆ ಅದರಲ್ಲಿ ಕುರುಬ ಪದ ಒಂದಾಗಿದ್ದು ನಮ್ಮ ಸಮಾಜವನ್ನು ೧೯೩೬ರಲ್ಲಿ ರಾಣಿ ಎಲಿಜಬೆತ್ ಮತ್ತು ೧೯೫೦ರಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಎಸ್.ಟಿ. ಪಟ್ಟಿಯಲ್ಲಿ ಪರಿಗಣಿಸಿದ್ದಾರೆ. ಆದರೆ ಇಲ್ಲಿನ ಆಡಳಿತ ಪಕ್ಷಗಳು ನಮ್ಮ ಸಮಾಜದವರನ್ನು ಕೇವಲ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಮಾಜದವರು ಯಾವ ರಾಜಕೀಯ ಪಕ್ಷಗಳ ಗುಲಾಮರಲ್ಲ ನಮ್ಮ ಸಮಾಜದವರನ್ನು ಮಾನವೀಯತೆ ದೃಷ್ಟಿಯಿಂದ ಎಸ್.ಟಿ. ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಪ್ರಧಾನಿ ನರೇಂದ್ರ ಮೊದಿ ಮತ್ತು ಅಮಿತ್ ಷಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಚಿಕ್ಕಲಿಂಗ ಬೀರದೇವರು, ಜಿಲ್ಲಾ ಗೊಂಡ ಕುರುಬ ಸಮಾಜದ ಅಧ್ಯಕ್ಷ ಮಹಾಂತೇಶ ಕೌಲಗಿ, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಬಸವರಾಜ ಹೊಸಳ್ಳಿ, ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು. ಬಸವರಾಜ ಮೊಗಲಿ, ಪ್ರಭು ಗಂಗಾಣಿ, ಯಲ್ಲಾಲಿಂಗ ಪೂಜಾರಿ, ಜುಮ್ಮಣ್ಣ ಪೂಜಾರಿ, ಸಿದ್ದು ಪೂಜಾರಿ, ಜಗನಾಥ ಪೂಜಾರಿ, ನಾಗೇಶ ಬೀರಲಿಂಗ ಪೂಜಾರಿ, ಇತರರು ಇದ್ದರು.ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ:
ಪಟ್ಟಣದ ಲಾಡ್ಜಿಂಗ್ ಬಳಿ ಸಮಾಜದ ಭಾಂದವರು ಮಾನವ ಸರಪಳಿ ನಿರ್ಮಿಸಿ ಟಯರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗೊಂಡ ಪರ್ಯಾಯ ಪದ ಕುರುಬ ಪದವನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಪ್ರತಿಭಟನೆ ನಡೆಸಿದರು.