ಶೈಕ್ಷಣಿಕ, ಸಾಮಾಜಿಕವಾಗಿ ಕುರುಬರು ಮುಂದೆ ಬನ್ನಿ

| Published : Mar 22 2025, 02:04 AM IST

ಶೈಕ್ಷಣಿಕ, ಸಾಮಾಜಿಕವಾಗಿ ಕುರುಬರು ಮುಂದೆ ಬನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಳಿಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ತೋಪು ಜಾತ್ರೆ ಕಾರ್ಯಕ್ರಮವನ್ನು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಉದ್ಘಾಟಿಸಿದರು.

ತಾಳಿಕಟ್ಟೆಯಲ್ಲಿ ಬೀರಲಿಂಗೇಶ್ವರಸ್ವಾಮಿ ತೋಪು ಜಾತ್ರೆಯಲ್ಲಿ ಸಾಣೇಹಳ್ಳಿ ಶ್ರೀ ಆಶೀರ್ವಚನ ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಪಶುಪಾಲನೆ, ಕುರಿ ಕಾಯಕ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವ ಕುರುಬ ಸಮಾಜ ಆರ್ಥಿಕವಾಗಿ ಸಬಲರಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಅವರು ಈ ಎರಡೂ ಕ್ಷೇತ್ರಗಳಲ್ಲಿಯೂ ಉನ್ನತಿ ಸಾಧಿಸಬೇಕು ಎಂದು ಸಾಣಿಹಳ್ಳಿ ಮಠದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಕಜಿ ಹೇಳಿದರು.

ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ (ಹಳ್ಳದ ಜಂಗಮ) ತೋಪು ಜಾತ್ರೆಯ 4ನೇ ದಿನದ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಶ್ರೀಗಳು ಮಾತನಾಡಿದರು.

ಹಿಂದುಳಿದ ಕುರುಬ ಸಮಾಜವು ಶೈಕ್ಷಣಿಕವಾಗಿ ಪ್ರಬಲಗೊಳ್ಳಬೇಕಾದ ಅನಿವಾರ್ಯತೆ ಇದೆ. ಜಾತ್ರೆ, ಪರಿಸೆ, ಮಾರಿ ಹಬ್ಬಗಳನ್ನು ಅದ್ಧೂರಿಯಾಗಿ ಮಾಡುವ ನೆಪದಲ್ಲಿ ಹಣ ವ್ಯಯ ಮಾಡುವುದರಿಂದ ಬದುಕು ಕಷ್ಟಕ್ಕೆ ಸಿಲುಕುತ್ತದೆ. ಸಮಯ ಮತ್ತು ಹಣದ ಮಹತ್ವವನ್ನು ಅರಿತು ಜನ ಬದುಕಬೇಕಿದೆ. ತಾಳಿಕಟ್ಟೆಯು ಒಂದು ಕಲೆ, ಸಾಹಿತ್ಯ, ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮವಾಗಿದ್ದು, ಜನರು ಇನ್ನಾದರು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ ಜೀವನ ಸಾಗಿಸಬೇಕು. ಉಳಿತಾಯ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡುವಷ್ಟು ಪ್ರಾತಿನಿಧ್ಯವನ್ನು ಶ್ರೀಗಳ ಆಶಿರ್ವಚನಗಳು, ಉಪನ್ಯಾಸಗಳು, ಚಿಂತನ-ಮಂತನಗಳಿಗೆ, ಚರ್ಚಾ ಕಾರ್ಯಕ್ರಮಗಳಿಗೆ ನೀಡುತ್ತಿಲ್ಲ. ಅಲ್ಲಿ ಜನರ ಕೊರತೆ ಎದ್ದು ಕಾಣುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕುರುಬರ ಸಂಸ್ಕೃತಿ, ಪರಂಪರೆ ಅತ್ಯಂತ ದೊಡ್ಡದು. ಅದನ್ನು ನಾವೆಲ್ಲರೂ ಆಸ್ವಾದಿಸಬೇಕು. ಆ ನಿಟ್ಟಿನಲ್ಲಿ ಉಪನ್ಯಾಸಕರು ತಿಳಿಸುವ ವಿಚಾರಧಾರೆಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಭವ್ಯ ಪರಂಪರೆಯನ್ನು ಹೊಂದಿರುವಂತಹ ಸಮುದಾಯ ಯಾವುದಾದರೂ ಇದೆ ಎಂದರೆ ಅದು ಹಾಲುಮತ ಸಮುದಾಯ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ಇತಿಹಾಸದ ಪುಟಗಳಲ್ಲಿ ಈ ನೆಲಕ್ಕೆ, ಈ ಸಂಸ್ಕೃತಿಗೆ, ಜನರಿಗೆ ಎಲ್ಲಾ ರಂಗಗಳಲ್ಲಿಯೂ ಕೂಡ ಬಹುದೊಡ್ಡ ಕೊಡುಗೆ ಕೊಟ್ಟಿರುವಂತಹ ಸಮುದಾಯ ಹಾಲುಮತ ಸಮುದಾಯ. ವಿಜಯನಗರ ಸಾಮ್ರಾಜ್ಯದಿಂದ ಹಿಡಿದು, ಉತ್ತರ ಭಾರತದ ಅಹಲ್ಯ ಬಾಯಿ ಹೋಳ್ಕರ್ ಅವರವರೆಗೆ ಚಿಂತನೆಯನ್ನು ಮಾಡಿದಾಗ ಬಹುದೊಡ್ಡ ತ್ಯಾಗ, ಬಲಿದಾನಗಳನ್ನು ನೀಡಿದ ಕೀರ್ತಿ ಹಾಲುಮತ ಸಮುದಾಯಕ್ಕೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಲಿಂಗದಹಳ್ಳಿ ಹಾಲಪ್ಪ ಹಾಲು ಮತದ ಸಾಂಸ್ಕೃತಿಕ ಇತಿಹಾಸ ಕುರಿತು, ಹಂಪಿ ವಿಶ್ವವಿದ್ಯಾಲಯದ ಎಫ್.ಟಿ.ಹಳ್ಳಿಕೆರೆ ತಾಳಿಕಟ್ಟೆಯ ಪರಿಸರದ ಶಾಸನ, ಶಿಲ್ಪಕಲೆ ಕುರಿತು, ವಡ್ಡಗೆರೆ ನಾಗರಾಜ್ ಹಾಲುಮತ ಮತ್ತು ಇತರೆ ಬುಡಕಟ್ಟುಗಳ ಕುರಿತು ಉಪನ್ಯಾಸ ನೀಡಿದರು.

ಸಮಾರಂಭದಲ್ಲಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿದರು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಅಬಕಾರಿ ಜಂಟಿ ಆಯುಕ್ತ ಟಿ.ನಾಗರಾಜಪ್ಪ, ಓಂಕಾರಯ್ಯ ಓಡೆಯರ್, ಗುಡಿಗೌಡ ಪುಟ್ಟಪ್ಪ, ಮಾಜಿ ಗುಡಿಗೌಡ ನಾಗರಾಜಪ್ಪ, ನಿವೃತ್ತ ಬಿಇಒ ಯು.ಬಸವರಾಜಪ್ಪ, ಡಿವೈಎಸ್‌ಪಿ ವಿ.ಶೇಖರಪ್ಪ, ಕೆ.ಸೋಮಶೇಖರಪ್ಪ, ಮತ್ತಿತರರಿದ್ದರು.