ಮೆಡ್ಲೇರಿ ಸುತ್ತಮುತ್ತ ಚಿರತೆ ದಾಳಿಗೆ ಕುರಿಗಾರರು ಕಂಗಾಲು

| Published : Jan 23 2025, 12:50 AM IST

ಸಾರಾಂಶ

ಸುಮಾರು ಮೂರು ವಾರದಿಂದ ಮೆಡ್ಲೇರಿ ಹೊರಭಾಗದ ಜಮೀನು ಸೇರಿದಂತೆ ಇತರ ಕಡೆ ದೊಡ್ಡಿ ಹಾಕಿಕೊಂಡಿರುವ ಕುರಿಗಾರರ ಕುರಿಗಳ ಮೇಲೆ ಚಿರತೆ ಸತತವಾಗಿ ದಾಳಿ ಮಾಡುತ್ತಿದೆ. ಮಂಗಳವಾರ ಬೆಳಗಿನ ಜಾವ ಕೂಡ ಚಿರತೆ ಹತ್ತು ಕುರಿಗಳನ್ನು ತಿಂದು ಹಾಕಿದೆ.

ರಾಣಿಬೆನ್ನೂರು: ತಾಲೂಕಿನ ಮೆಡ್ಲೇರಿ ಸುತ್ತಮುತ್ತ ಭಾಗದಲ್ಲಿ ಒಂದೇ ವಾರದಲ್ಲಿ ಸುಮಾರು ಐವತ್ತು ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದೆ.

ಸುಮಾರು ಮೂರು ವಾರದಿಂದ ಮೆಡ್ಲೇರಿ ಹೊರಭಾಗದ ಜಮೀನು ಸೇರಿದಂತೆ ಇತರ ಕಡೆ ದೊಡ್ಡಿ ಹಾಕಿಕೊಂಡಿರುವ ಕುರಿಗಾರರ ಕುರಿಗಳ ಮೇಲೆ ಚಿರತೆ ಸತತವಾಗಿ ದಾಳಿ ಮಾಡುತ್ತಿದೆ. ಮಂಗಳವಾರ ಬೆಳಗಿನ ಜಾವ ಕೂಡ ಚಿರತೆ ಹತ್ತು ಕುರಿಗಳನ್ನು ತಿಂದು ಹಾಕಿದೆ. ಲಕ್ಷಾಂತರ ಮೌಲ್ಯದ ಕುರಿ ಕಳೆದುಕೊಂಡ ಕುರಿ ಮಾಲೀಕರು ಕಂಗಾಲಾಗಿದ್ದು, ದಿನ ನಿತ್ಯವೂ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುತ್ತಾರೆಯೇ ಹೊರತು ಚಿರತೆ ಸೆರೆ ಹಿಡಿಯುವ ಕೆಲಸಕ್ಕೆ ಮಾತ್ರ ಕೈ ಹಾಕಿಲ್ಲ. ಮಾಲೀಕರಿಗೆ ಪರಿಹಾರ ನೀಡಲು ಸಹ ಹಿಂದೇಟು ಹಾಕುತ್ತಿದ್ದಾರೆ ಎಂದು ಕುರಿ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಭಯಗೊಂಡ ಗ್ರಾಮಸ್ಥರು: 15 ದಿನಗಳಿಂದ ಗ್ರಾಮದ ಸುತ್ತಮುತ್ತ ಚಿರತೆ ದಾಳಿ ಮಾಡಿ ಕುರಿಗಳ ಮಾರಣಹೋಮ ನಡೆಸುತ್ತಿದೆ. ಅದರಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ. ಈ ಕುರಿತು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಕೂಡ ಇಲ್ಲಿಯವರಿಗೂ ಸಮಸ್ಯೆ ಬಗೆಹರಿದಿಲ್ಲ. ಇದು ಇದೇ ರೀತಿ ಮುಂದುವರಿದರೆ ಜನರು ಹೊರಗೆ ಬರಲು ಆಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಕೂಡಲೇ ಅರಣ್ಯ ಇಲಾಖೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಸುತ್ತಮುತ್ತ ಚಿರತೆ ದಾಳಿಯಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ತಾಲೂಕಿನ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮೆಡ್ಲೇರಿ ಭಾಗದಲ್ಲಿ ಸತತವಾಗಿ ದಾಳಿ ಮಾಡುವ ಚಿರತೆ ಸೆರೆ ಹಿಡಿಯಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮೆಡ್ಲೇರಿ ಗ್ರಾಮದ ಮುಖಂಡ ಸುರೇಶ ಬಿಲ್ಲಾಳ ಹೇಳುತ್ತಾರೆ.ಮೆಡ್ಲೇರಿ ಗ್ರಾಮದ ಸುತ್ತಮುತ್ತ ಕುರಿಗಳ ದೊಡ್ಡಿಗಳ ಮೇಲೆ ಚಿರತೆ ದಾಳಿ ಕುರಿತು ಈಗಾಗಲೇ ಅಗತ್ಯ ಕ್ರಮಕೈಗೊಂಡು ಚಿರತೆ ಸೆರೆ ಹಿಡಿಯಲು ಬೋನ್‌ಗಳನ್ನು ಇಡಲಾಗಿದೆ. ಮೈಕ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚಿರತೆ ದಾಳಿ ಮಾಡಿದ ಕುರಿಗಳ ಮಾಲೀಕರಿಗೆ ಇ-ಪರಿಹಾರ ಆ್ಯಪ್ ಮೂಲಕ ಪರಿಹಾರ ಒದಗಿಸಲಾಗುವುದು. ಜನರು ಹೆಚ್ಚಾಗಿ ಒಬ್ಬಂಟಿಯಾಗಿ ಸಂಚರಿಸುವುದಕ್ಕೆ ಕಡಿವಾಣ ಹಾಕಬೇಕು. ಅರಣ್ಯ ಇಲಾಖೆ ಜತೆ ಸಹಕರಿಸಬೇಕು ಎಂದು ರಾಣಿಬೆನ್ನೂರು ವಲಯ ಅರಣ್ಯಾಧಿಕಾರಿ (ವನ್ಯಜೀವಿ ವಿಭಾಗ) ಲಿಂಗರೆಡ್ಡಿ ಹೇಳಿದರು.