ನ್ಯಾಯಯುತ ಹಾಗೂ ಪ್ರಾಮಾಣಿಕ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತಮ್ಮ ವೃತ್ತಿ ಗೌರವಕ್ಕೆ ಧಕ್ಕೆ ಬಾರದಂತೆ ಬದುಕಿ ಬಾಳಿದ ಚೇತನ ಬಿ.ವಿ. ಶೇಷಗಿರಿ ಅವರು ಈ ಭಾಗದಲ್ಲಿದ್ದದ್ದು ನಮ್ಮೆಲ್ಲರಿಗೂ ಗೌರವದ ಸಂಗತಿ ಎಂದು ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ನ್ಯಾಯಯುತ ಹಾಗೂ ಪ್ರಾಮಾಣಿಕ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ತಮ್ಮ ವೃತ್ತಿ ಗೌರವಕ್ಕೆ ಧಕ್ಕೆ ಬಾರದಂತೆ ಬದುಕಿ ಬಾಳಿದ ಚೇತನ ಬಿ.ವಿ. ಶೇಷಗಿರಿ ಅವರು ಈ ಭಾಗದಲ್ಲಿದ್ದದ್ದು ನಮ್ಮೆಲ್ಲರಿಗೂ ಗೌರವದ ಸಂಗತಿ ಎಂದು ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಚೌಕಿಸಾಲು ಮಠದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ಬಿ.ವಿ. ಶೇಷಗಿರಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಭಾವಪೂರ್ಣ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನಾಗಿ ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಬದುಕಿದ್ದಾಗ ಮಾಡಿದ ಸೇವೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದರು.ರೈತ ಸಂಘದ ಜಿಲ್ಲಾಧ್ಯಕ್ಷ ಪುಟ್ಟನಗೌಡ್ರು, ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಹಾಗೂ ನಿಕಟಪೂರ್ವ ಅಧ್ಯಕ್ಷ ಜಯಪ್ಪಗೌಡ್ರು ಮಾತನಾಡಿ, ತಾಲೂಕಿನಲ್ಲಿ ರೈತ ಸಂಘವನ್ನು ಬಲಪಡಿಸುವಲ್ಲಿ ಶೇಷಗಿರಿ ಅವರ ಶ್ರಮ ಅಪಾರವಾಗಿತ್ತು. ಏತ ನೀರಾವರಿ ಹಾಗೂ ಶರಾವತಿ ಹೋರಾಟ ಸೇರಿದಂತೆ ವಿವಿಧ ಜನಪರ ಚಳವಳಿಗಳಲ್ಲಿ ಅವರು ವಹಿಸಿದ ಪಾತ್ರ, ಚಳವಳಿಯ ವಿವಿಧ ಹಂತಗಳ ಬಗ್ಗೆ ಅವರಿಗಿದ್ದ ಅರಿವು ಹಾಗೂ ಎಲ್ಲರೊಂದಿಗೆ ಬೆಳೆಸಿಕೊಂಡಿದ್ದ ಮಾನವೀಯ ಸಂಬಂಧಗಳು ಸ್ಮರಣೀಯವಾಗಿವೆ ಎಂದರು.ವೀರಶೈವ ಸಮಾಜದ ಅಧ್ಯಕ್ಷ ಪ್ರಭುಲಿಂಗ ಆನಿಮಠ ಮಾತನಾಡಿ, ಶಿರಾಳಕೊಪ್ಪದಲ್ಲಿ ಸೇವಾ ವಿಕಾಸ ಶಾಲೆ ಹುಟ್ಟಿಕೊಳ್ಳಲು ಶೇಷಗಿರಿ ಅವರು ಪ್ರಮುಖ ಕಾರಣಕರ್ತರಾಗಿದ್ದರು. ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಸ್ಮರಣೀಯ ಎಂದರು.ವಕೀಲ ವಿನಯ್ ಪಾಟೀಲ್ ಮಾತನಾಡಿ, ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಚಟುವಟಿಕೆಗಳು ಹಾಗೂ ಟೋಲ್ ಹೋರಾಟ ಸಮಿತಿಯ ಹೋರಾಟದಲ್ಲಿ ಶೇಷಗಿರಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ ಮಾತನಾಡಿ, ರಾಜಕಾರಣಿಗಳು ಪತ್ರಕರ್ತರನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ಸಂದರ್ಭದಲ್ಲಿ, ರೈತ ಸಂಘವು ಹಿರಿಯ ಪತ್ರಕರ್ತರೊಬ್ಬರ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಮಹತ್ವದ ಸಂಗತಿ. ಇದು ಶೇಷಗಿರಿ ಅವರಿಗೆ ಮಾತ್ರವಲ್ಲ, ಎಲ್ಲ ಪತ್ರಕರ್ತರಿಗೆ ನೀಡಿದ ಗೌರವ ಎಂದು ಭಾವಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಶೇಷಗಿರಿ ಅವರ ಪತ್ನಿ ಸುಮಾ, ಪುತ್ರ ಅನಂತ್, ಪುತ್ರಿಯರಾದ ಪಲ್ಲವಿ, ಅದೋಕ್ಷಜಾ ಹಾಗೂ ಪ್ರಗತಿ ವಿಶ್ವಾಸ್ ಅವರು ಪುಷ್ಪನಮನ ಸಲ್ಲಿಸಿದರು.ಸೊರಬ ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಸೇಟ್, ಉಪತಹಸೀಲ್ದಾರ್ ಸಾಕಮ್ಮ, ನಾಮನಿರ್ದೇಶಿತ ಸದಸ್ಯರಾದ ತೇಜಣ್ಣ, ಗಣೇಶ್ ಭಂಡಾರಿ, ಟೌನ್ ಬಿಜೆಪಿ ಅಧ್ಯಕ್ಷ ಎ.ಸಿ. ಚನ್ನವೀರಪ್ಪ ಶೆಟ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿತ್ರೇಶ್, ಪುರಸಭೆ ಮಾಜಿ ಸದಸ್ಯ ತಡಗಣಿ ರಾಜಶೇಖರ್, ತಡಗಣಿ ಮಂಜಣ್ಣ, ರವಿ ಶಾನುಭೋಗ್, ಮಾಜಿ ಅಧ್ಯಕ್ಷರಾದ ಮಮತಾ ನಿಂಗಪ್ಪ, ವಿ. ಮನೋಹರ, ಟೌನ್ ಬಿಜೆಪಿ ಮಾಜಿ ಅಧ್ಯಕ್ಷ ಮಂಚಿ ಶಿವಣ್ಣ, ಮಂಚಾಲಿ ಚಂದ್ರಣ್ಣ, ರಮೇಶ್ ಹಿರೇಜಂಬೂರು, ಶೇಷಗಿರಿ ಅವರ ಬಾಲ್ಯದ ಗೆಳೆಯ ಇಂಡುವಳ್ಳಿ ಹುಚ್ಚರಾಯಪ್ಪ, ಭೋರ್ಗಿ ಮೇಸ್ಟ್ರು, ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪಾ ಹಾಲೇಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸುರಹೊನ್ನೆ, ಸವಿತಾ ಸಮಾಜದ ಭಾಸ್ಕರ್ ಭಂಡಾರಿ, ಹಿಂದೂ ಮಹಾಗಣಪತಿ ಅಧ್ಯಕ್ಷ ಮಾಲತೇಶ್ ಹಠ, ಉಪನ್ಯಾಸಕ ನಾರಾಯಣ, ಪ್ರಾಂಶುಪಾಲ ಚಂದ್ರಶೇಖರ್, ಬ್ರಾಹ್ಮಿ ಹೋಟೆಲ್ ಅಭಿಷೇಕ್, ರೈತ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ, ಮಾಳಗೊಂಡನಕೊಪ್ಪದ ಪ್ರಮೋದ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ನವೀನ್ ಕುಮಾರ್ ಎಂ. ನಿರೂಪಿಸಿದರು. ರೂಪಾ ಹಾಗೂ ಸಂಗಡಿಗರು ಗೀತನಮನ ಸಲ್ಲಿಸಿದರು. ಪತ್ರಕರ್ತರಾದ ಸತೀಶ್, ಅರುಣ್, ಅಬ್ದುಲ್ ನವೀದ್ ಗೌರವಾರ್ಪಣೆ ಮಾಡಿದರು.----------------------------
ಪೊಟೋ: 21ಎಸ್‌ಎಲ್‌ಕೆಪಿ01ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ಬಿ.ವಿ. ಶೇಷಗಿರಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಭಾವಪೂರ್ಣ ‘ನುಡಿನಮನ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.