ಸಂಭ್ರಮದ ಶನಿವಾರ ಶೆಟ್ಟಳ್ಳಮ್ಮ ಜಾತ್ರೋತ್ಸವ

| Published : Apr 27 2025, 01:30 AM IST

ಸಾರಾಂಶ

ಪಟ್ಟಣದ ಸಮೀಪ ಇರುವ ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಶೆಟ್ಟಳ್ಳಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಸಮೀಪ ಇರುವ ಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಶೆಟ್ಟಳ್ಳಮ್ಮ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಶನಿವಾರ ಮುಂಜಾನೆಯಿಂದಲೇ ಶೆಟ್ಟಳ್ಳಮ್ಮ ದೇವಿಗೆ ಅಭಿಷೇಕ ಪುಣ್ಯಾಹ ಮಾಡಲಾಯಿತು.ಶೆಟ್ಟಳ್ಳಮ್ಮಮತ್ತು ಸಂತ್ಯಮ್ಮ ಉತ್ಸವ ಮೂರ್ತಿಗಳು ಹಾಗೂ ನಾಲ್ಕು ಸೋಮಗಳಿಗೂ ಅಲಂಕಾರ ಮಾಡಿ, ದೇವಸ್ಥಾನದ ನಾಲ್ಕು ದಿಕ್ಕುಗಳಿಗೂ ಪ್ರದಕ್ಷಣೆ ಮಾಡಿದ ನಂತರ ಶೆಟ್ಟಳ್ಳಮ್ಮ ದೇವಿಯನ್ನು ಅಲಂಕರಿಸಿದ ರಥದಲ್ಲಿ ಕೂರಿಸಲಾಯಿತು.

ನಂತರ ಗೊನೆ ತುಂಬಿದ ಬಾಳೆ ಕಂಬವನ್ನು ನೆಟ್ಟು, ರಾಸು ಕೂಳು ಹಾಕಿದ ನಂತರ ಬಾಳೆ ಕಂಬವನ್ನು ಛೇದನ ಮಾಡಿ ಹರ್ಷೋದ್ಗಾರದೊಂದಿಗೆ ರಥವನ್ನು ದೇವಸ್ಥಾನದ ಸುತ್ತ ಒಂದು ಸುತ್ತು ಪ್ರದಕ್ಷಣೆ ಹಾಕಲಾಯಿತು. ಭಕ್ತರು ಹಣ್ಣು ಜವನ ಎಸದು ಭಕ್ತಿ ಸಮರ್ಪಿಸಿದರು. ಶುಕ್ರವಾರ ಸಂಜೆ ಸಿಡಿ ಉತ್ಸವ ಆಚರಿಸಲಾಯಿತು ಎಲ್ಲ ಮನೆಗಳಿಂದ ಹೆಣ್ಣು ಮಕ್ಕಳು ಮಡೆ ಹೊತ್ತುಕೊಂಡು ಗ್ರಾಮದ ಮಧ್ಯ ಬಂದಾಗ ಹಿರಿಯರು ಹೆಣ್ಣು ಮಕ್ಕಳಿಗೆ ಬಾಯಿ ಬೀಗ ಚುಚ್ಚುತ್ತಾರೆ.

ಅಲಂಕರಿಸಿದ ಬಂಡಿಗೆ ಪೂಜೆ ಸಲ್ಲಿಸಿ ಬಲಿ ನೀಡಿದ ನಂತರ ಊರ ಮಧ್ಯದಿಂದ ಅಣತಿ ದೂರದಲ್ಲಿರುವ ದೇವಸ್ಥಾನದ ಬಳಿಗೆ ಬಂಡಿಯನ್ನು ಕರೆದೊಯ್ಯಲಾಗುತ್ತದೆ. ಶೆಟ್ಟಿಹಳ್ಳಿ ಗ್ರಾಮದ ಬಂಡಿಯ ಜೊತೆಗೆ ಕುರುಬರ ಕಾಳೇನಹಳ್ಳಿಯ ಭಕ್ತರು ಕೂಡ ಬಂಡಿ ಜೊತೆ ಆಗಮಿಸಿ ತಳುಗೆ ನೈವೇದ್ಯ ತರುತ್ತಾರೆ. ಗ್ರಾಮ ದೇವತೆ ಶೆಟ್ಟಳ್ಳಮ್ಮ ಜಾತ್ರಾ ಮಹೋತ್ಸವ ಎಂದು ಕರೆಯುವ ಈ ಜಾತ್ರೆಯಲ್ಲಿ ಉತ್ಸವ ಮೂರ್ತಿಗಳಾದ ಶೆಟ್ಟಳ್ಳಮ್ಮ ಹಾಗೂ ಸಂತ್ಯಮ್ಮನ ಉತ್ಸವ ಮೂರ್ತಿಗಳನ್ನು ತಡಗೂರಿನಿಂದ ತರಲಾಗುತ್ತದೆ.

ನಾಲ್ಕು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಸಿಡಿ ಉತ್ಸವ ಜರುಗಿದರೆ ಶನಿವಾರ ಮಧ್ಯಾಹ್ನ ರಥೋತ್ಸವ ನಡೆದ ನಂತರ ರಾತ್ರಿ ಸೋಮನ ಉತ್ಸವ ಅದಕ್ಕೂ ಮುಂಚಿತವಾಗಿ ಗ್ರಾಮದ ನಾಲ್ಕು ವರ್ಷದ ಮಕ್ಕಳಿಂದ 15 ವರ್ಷದ ಮಕ್ಕಳು ವಿಶೇಷವಾಗಿ ನೃತ್ಯ ಕಲಿತಿದ್ದು, ಭರತನಾಟ್ಯ ಯಕ್ಷಗಾನ ಹಾಗೂ ಸಂಗೀತ ನೃತ್ಯ ಪ್ರದರ್ಶಿಸುತ್ತಿದ್ದಾರೆ. ಇದರಲ್ಲಿ ನಮ್ಮ ಗ್ರಾಮದ ಹೆಣ್ಣು ಮಕ್ಕಳು ಕೂಡ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಭಾನುವಾರ ಪಲ್ಲಕ್ಕಿ ಉತ್ಸವ ಸೋಮವಾರ ಆಚರಿಸುವ ಮೂಲಕ ಉತ್ಸವ ಮೂರ್ತಿಗಳನ್ನು ದಿಂಡಗೂರಿಗೆ ಕಳುಹಿಸಲಾಗುತ್ತದೆ.

ವರ್ಷಕ್ಕೊಮ್ಮೆ ಹಳ್ಳಿಯ ಎಲ್ಲ ಜನರು ಒಂದೆಡೆ ಕಲೆತು ತಮ್ಮ ಕಷ್ಟ ಸುಖವನ್ನು ಹೋಗಲಾಡಿಸಲಿ ಎಂದು ಅದ್ದೂರಿಯಾಗಿ ಇಂತಹ ಜಾತ್ರೆಯನ್ನ ಆಚರಿಸಿಕೊಂಡು ಬರುತ್ತಿದ್ದು, ಜಾತ್ರೆಯಲ್ಲಿ ಕೋಲಾಟದ ಕಲಾವಿದರು ಜಡೆಕೋಲು ಚಿತ್ತಾರ ಕೋಲು ಒಂದನೇ ತಾಳ ಎರಡನೇ ತಾಳ ಹೀಗೆ ವಿವಿಧ ಕೋಲಾಟವನ್ನು ಪ್ರದರ್ಶಿಸಿದರು. ಮತ್ತೊಂದು ಯುವಕರ ತಂಡ ತಮಟೆಯ ಸುದ್ದಿಗೆ ಕುಣಿದು ಕುಪ್ಪಳಿಸಿದರು