ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಾಲೂಕಿನ ಶೆಟ್ಟಿಹಳ್ಳಿ ಅಭಯಾರಣ್ಯ ಗಡಿ ಪರಿಷ್ಕರಣೆ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದ ಕಂದಾಯ ಮತ್ತು ಅರಣ್ಯ ಭೂಮಿ ವಿಷಯದಲ್ಲಿ ಸದಾ ಸಂಘರ್ಷ ಎದುರಿಸುತ್ತಿರುವ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಜನರ ಕಂದಾಯ ಹಾಗೂ ಅರಣ್ಯ ಭೂಮಿ ತೊಡಕು ತಪ್ಪಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಈ ಸಂಬಂಧ ಪತ್ರಿಕೆ ಹೇಳಿಕೆ ನೀಡಿರುವ ಅವರು, ಕಂದಾಯ ಮತ್ತು ಅರಣ್ಯ ಭೂಮಿ ವಿಷಯದಲ್ಲಿ ಸದಾ ಸಂಘರ್ಷ ಎದುರಿಸುತ್ತಿರುವ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಜನರು ಸುಮಾರು ವರ್ಷಗಳಿಂದ ಭೂಮಿ ಹಕ್ಕು ವಿಷಯವಾಗಿ ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದರು. ಹೀಗಾಗಿ ಗಡಿ ಮರು ನಿಗದಿ ಮಾಡುವ ಮೂಲಕ ಶರಾವತಿ ಸಂತ್ರಸ್ತರಿಗೆ ಭೂಮಿ ಹಂಚಿಕೆ ಮಾಡುವ ಸಂಬಂಧ ಸಹಕಾರ ನೀಡಬೇಕೆಂದು 2022ರಲ್ಲಿ ಅಂದಿನ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಪರಿಣಾಮವಾಗಿ ಕೇಂದ್ರ ವನ್ಯಜೀವಿ ಮಂಡಳಿ ಸೂಚನೆ ಅನ್ವಯ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಿದ್ಧವಾಗಿತ್ತು. ಈಗ ರಾಜ್ಯ ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದರಿಂದ ಕಂದಾಯ ಹಾಗೂ ಅರಣ್ಯ ಭೂಮಿ ತೊಡಕು ತಪ್ಪಿದೆ ಎಂದು ಹೇಳಿದ್ದಾರೆ.
ಶೆಟ್ಟಿಹಳ್ಳಿ ವನ್ಯಜೀವಿ ಪ್ರದೇಶದಲ್ಲಿ ಜನರು ಅನುಭವಿಸುತ್ತಿರುವ ತೊಂದರೆ ಕುರಿತು ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಕೇಂದ್ರ ಸರ್ಕಾರದ ಸಚಿವರ ಗಮನ ಸೆಳೆದು ಶೆಟ್ಟಿಹಳ್ಳಿ ವನ್ಯಜೀವಿ ಪ್ರದೇಶದಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸವಿಸ್ತಾರವಾಗಿ ವಿವರಿಸಿ ಮರು ಪರಿಶೀಲಿಸುವಂತೆ ಕೋರಲಾಗಿತ್ತು. ಶೆಟ್ಟಿಹಳ್ಳಿ ಅಭಯಾರಣ್ಯವನ್ನು ಅವೈಜ್ಞಾನಿಕವಾಗಿ ಘೋಷಣೆ ಮಾಡಿರುವುದರಿಂದ ಆಗಿರುವ ಸಮಸ್ಯೆಗಳ ಕುರಿತು ಕೇಂದ್ರ ಸಚಿವರಿಗೆ ಪತ್ರ ಮೂಲಕ ಕೇಂದ್ರ ಸಚಿವರ ಗಮನಕ್ಕೆ ತರಲಾಗಿತ್ತು. ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ ಕಾರಣಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಕೆಲ ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿತ್ತು ಎಂದು ವಿವರಿಸಿದ್ದಾರೆ.ಶರಾವತಿ ಸಂತ್ರಸ್ತರ ಭೂಮಿ ಹಂಚಿಕೆಯಲ್ಲಿ ಉಂಟಾಗಿದ್ದ ದೊಡ್ಡ ತೊಡಕು ನಿವಾರಣೆಯಾಗಿದೆ. ಅವರಿಗೆ ಗುರುತಿಸಲಾಗಿದ್ದ ಭೂಮಿಯನ್ನು ವನ್ಯಜೀವಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಮುಖ್ಯವಾಗಿ ಜನವಸತಿ ಪ್ರದೇಶಗಳನ್ನು ಅಧಿಸೂಚನೆಯಿಂದ ಕೈ ಬಿಟ್ಟಿರುವುದರಿಂದ ಬಹಳಷ್ಟು ಮಂದಿಗೆ ಅನುಕೂಲವಾಗಿದೆ. ಈ ಹಿಂದೆ ವನ್ಯಜೀವಿ ವಲಯದೊಳಗೆ ಸೇರಿಕೊಂಡಿದ್ದ ಖಾಸಗಿ ಭೂಮಿ ಅಭಿವೃದ್ದಿಗೆ ಸಾಧ್ಯವಾಗಲಿದೆ ಎಂದಿದ್ದಾರೆ.
ಈ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಹಾಗೂ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಗಡಿ ಪುನರ್ ರಚನೆಯಿಂದ ಆಗುವ ಪ್ರಯೋಜನಗಳು
1.ಪ್ರಸ್ತಾಪಿತ ಅಧಿಸೂಚನೆಯಿಂದಾಗಿ ಈ ಹಿಂದೆ ವನ್ಯಜೀವಿಧಾಮದ ಗಡಿ ವ್ಯಾಪ್ತಿಯ ಒಳಗೆ ಸೇರ್ಪಡೆಗೊಂಡಂತಾಗಿದ್ದ ಶಿವಮೊಗ್ಗ ನಗರ ಪ್ರದೇಶದ ಭಾಗಗಳು, ಆಯನೂರು, ರಿಪ್ಪನ್ ಪೇಟೆ, ಕೋಣಂದೂರು ನಗರ ಪ್ರದೇಶಗಳ ಭಾಗಗಳು, ಖಾಸಗಿ ಜಮೀನುಗಳು, ಕಂದಾಯ ಮತ್ತು ಇತರೆ ಅರಣ್ಯೇತರ ಪ್ರದೇಶಗಳನ್ನು ವನ್ಯಜೀವಿಧಾಮದ ವ್ಯಾಪ್ತಿಯಿಂದ ಹೊರತುಪಡಿಸಿದಂತಾಗುತ್ತದೆ.2.ಪ್ರಸ್ತಾಪಿತ ಅಧಿಸೂಚನೆಯಲ್ಲಿ ಶರಾವತಿ ಪುನರ್ ವಸತಿಗಾಗಿ ಪ್ರಸ್ತಾಪಿಸಿರುವ ಪ್ರದೇಶಗಳನ್ನು ವನ್ಯಜೀವಿಧಾಮದ ವ್ಯಾಪ್ತಿಯಿಂದ ಹೊರತುಪಡಿಸಲಾಗಿರುತ್ತದೆ.
3.ಪ್ರಸ್ತುತವಾಗಿ ಶಿವಮೊಗ್ಗ-ಆಯನೂರು-ರಿಪ್ಪನ್ ಪೇಟೆ, ಶಿವಮೊಗ್ಗ-ಮಂಡಗದ್ದೆ ರಸ್ತೆಗಳ ಗಡಿಯಿಂದ ಆಚೆಗೆ 10.00 ಕಿ.ಮೀ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಅನ್ವಯವಾಗುತ್ತಿದ್ದು, ಈ ಅಧಿಸೂಚನೆಯಿಂದಾಗಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ಹೊಸ ಗಡಿಗೆ ಅಗತ್ಯವಿರುವಷ್ಟು ಮಾತ್ರ ವ್ಯಾಪ್ತಿ ನಿಗದಿಪಡಿಸಿ ಘೋಷಿಸಲು ಸಾಧ್ಯವಾಗುತ್ತದೆ.4.ಪ್ರಸ್ತಾಪಿತ ಪ್ರಸ್ತಾವನೆಯಿಂದಾಗಿ ಸಾರ್ವಜನಿಕ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಇದ್ದ ತೊಡಕುಗಳು ನಿವಾರಣೆಯಾಗಲಿದೆ.