ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯಗಳಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡವು 19 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಎರಡೂ ವಿಭಾಗದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ಬ್ಯಾಡಗಿ: ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯಗಳಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡವು 19 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಎರಡೂ ವಿಭಾಗದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿಜ್ಯೂವೆಲರ್ಸ ಆಶ್ರಯದಲ್ಲಿ ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಬ್ಯಾಡಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ದೈಹಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ 17 ಮತ್ತು 19 ವರ್ಷದೊಳಗಿನ ಬಾಲಕ-ಬಾಲಕಿಯರ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಪಂದ್ಯಾವಳಿ ಅಂತಿಮ ದಿನವಾದ ಭಾನುವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಜನಸ್ತೋಮದ ನಡುವೆ ಜರುಗಿದ ಅಂತಿಮ ಪಂದ್ಯಗಳು ಕೊನೆ ಕ್ಷಣದ ಫಲಿತಾಂಶಕ್ಕೆ ಸಾಕ್ಷಿಯಾದವು.19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿಡೇನೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜು ತಂಡವು ಬ್ಯಾಡಗಿ ಎಸ್‌ಜೆಜೆಎಂ ತಂಡವನ್ನು 08 (20-12) ಅಂಕಗಳಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 10 ಅಂಕಗಳ (14-04) ಮುನ್ನಡೆ ಸಾಧಿಸಿದ್ದ ಶಿಡೇನೂರ ತಂಡವು ಸಾಂಘಿಕ ಹೋರಾಟದಿಂದ ಜಯಗಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಸಚಿನ್ ಬೆಸ್ಟ್ ಡಿಫೆಂಡರ್, ಎಸ್‌ಜೆಜೆಎಮ್ ಪ್ರಶಾಂತ್ ಬೆಸ್ಟ ರೈಡರ್ ಮೋಟೆಬೆನ್ನೂರ ಸರ್ಕಾರಿ ಕಾಲೇಜಿನ ಆಟಗಾರ ವಿನಯ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.
ಮೇಲುಗೈ ಸಾಧಿಸಿದ ಬಾಲಕಿಯರು: ಬಾಲಕಿಯರ 19 ವರ್ಷದೊಳಗಿನ ವಿಭಾಗದಲ್ಲಿ ಶಿಡೇನೂರಿನ ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜು ತಂಡವು ಬ್ಯಾಡಗಿ ಎಸ್‌ಜೆಜೆಎಂ ತಂಡವನ್ನು 05 (33-28) ಅಂಕಗಳಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 8 ಅಂಕಗಳ (19-1) ಮುನ್ನಡೆ ಸಾಧಿಸಿದ್ದ ಶಿಡೇನೂರು ತಂಡದ ಬಾಲಕಿಯರು ಅಂತಿಮವಾಗಿ ಗೆಲುವಿನ ದಡವನ್ನು ಸೇರಿದರು. ಡಾ.ಬಿ.ಆರ್. ಅಂಬೇಡ್ಕರ್ ಕಾಲೇಜಿನ ರೇಖಾ ಬೆಸ್ಟ್ ಡಿಫೆಂಡರ್, ಅರ್ಪಿತಾ ಬೆಸ್ಟ ರೈಡರ್, ರುಕ್ಸಾರ ಖತೀಬ್ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.17 ವರ್ಷದ ಬಾಲಕಿಯರು ಘಾಳಪೂಜಿಗೆ ಪ್ರಶಸ್ತಿ: ಛಲ ಬಿಡದೇ ಮುನ್ನುಗ್ಗಿದ ಆಂಜನೇಯ ಪ್ರೌಢಶಾಲೆಯ ಬಾಲಕಿಯರು ಕೇವಲ 02 (13-11) ಅಂಕಗಳಿಂದ 17 ವರ್ಷದೊಳಗಿನ ಬಿಸಲಹಳ್ಳಿ ವಿರುದ್ಧ ಜಯಿಸುವ ಮೂಲಕ ಬಾಲಕಿಯರು ವಿಭಾಗದ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಮೊದಲಾರ್ಧದಲ್ಲಿ ಕೇವಲ 01 ಅಂಕಗಳ (07-06) ಮುನ್ನಡೆ ಸಾಧಿಸಿದ್ದ ಆಂಜನೇಯ ಪ್ರೌಢಶಾಲೆಯ ಬಾಲಕಿಯರು ಅಂತಿಮವಾಗಿ ಪ್ರಶಸ್ತಿಗೆ ಭಾಜನರಾದರು. ಬಿಸಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ರೇಷ್ಮಾ ಆಡಿನವರ ಬೆಸ್ಟ್ ಡಿಫೆಂಡರ್, ಗುಂಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಂದನಾ ಲಮಾಣಿ ಬೆಸ್ಟ ರೈಡರ್ ಹಾಗೂ ಆಂಜನೇಯ ಪ್ರೌಢಶಾಲೆಯ ಸಂಜನಾ ಗೂಳೇರ ಬೆಸ್ಟ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.
ಸೇಂಟ್ ವಿಯನ್ನಾ ಪ್ರೌಢಶಾಲೆಗೆ ಪ್ರಶಸ್ತ್ತಿ: 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 21 (27-06) ಅಂಕಗಳಿಂದ ಬ್ಯಾಡಗಿಯ ಸೇಂಟ್ ವಿಯೆನ್ನಾ ಪ್ರೌಢಶಾಲೆಯು, ಘಾಳಫೂಜಿಯ ಆಂಜನೇಯ ಪ್ರೌಢಶಾಲೆಯ ವಿರುದ್ಧ ನಿರಾಯಾಸದ ಗೆಲುವು ಸಾಧಿಸಿದರು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಕಾಯ್ದುಕೊಂಡ ಬಂದ ಸೇಂಟ್ ಜಾನ್ ವಿಯೆನ್ನಾ ಪ್ರೌಢಶಾಲೆ ಆಟಗಾರರು ಪಂದ್ಯದ ಮೊದಲಾರ್ಧದಲ್ಲಿ 17 (18-01) ಅಂಕಗಳ ಮುನ್ನಡೆ ಸಾಧಿಸಿದ್ದರು. ಮೋಟೆಬೆನ್ನೂರಿನ ಮಹದೇವ ಮೈಲಾರ ಪ್ರೌಢಶಾಲೆಯ ನಾಗರಾಜ ವಡ್ಡರ ಬೆಸ್ಟ ಆಲ್‌ರೌಂಡರ್, ಘಾಳಪೂಜಿ ಆಂಜನೇಯ ಪ್ರೌಢಶಾಲೆಯ ಸಂದೀಪ ಲಮಾಣಿ ಬೆಸ್ಟ ರೈಡರ್ ಹಾಗೂ ಎಸ್‌ಜೆಜೆಎಂ ಬ್ಯಾಡಗಿಯ ಗೌಸ್ ಅಜ್ಮಾ ಹಾಗೂ ಹಿರೇಅಣಜಿ ಜಿಎಚ್‌ಎಸ್ ಶಾಲೆಯ ಸಿದ್ದರಾಮೇಶ ದಳವಾಯಿ ಬೆಸ್ಟ್ ಡಿಫೆಂಡರ್ ಪ್ರಶಸ್ತಿಗೆ ಭಾಜನರಾದರು.