ಸಾರಾಂಶ
ಇದೀಗ ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಅಸಮಾಧಾನದ ಹೊಗೆ ಬರಲಾರಂಭಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಮಯದಲ್ಲಿ ನಾಯಕರು ನೀಡಿದ ಭರವಸೆಗಳನ್ನು ನಂಬಿದ್ದ ನಾಯಕರು ಈಗ ಆ ಭರವಸೆಗಳನ್ನು ಮುನ್ನೆಲೆಗೆ ತರಲು ಮುಂದಾಗಿದ್ದಾರೆ.
ಶಶಿಕಾಂತ ಮೆಂಡೆಗಾರ
ವಿಜಯಪುರ : ಗಡಿಭಾಗದಲ್ಲಿ ಒಂದೆಡೆ ತೊಗರಿ ಬೆಳೆಹಾನಿ, ಮತ್ತೊಂದೆಡೆ ವಕ್ಫ್ ಆಸ್ತಿ ಬಿಸಿ, ಮಗದೊಂದೆಡೆ ಕೃಷ್ಣಾ ಸಂತ್ರಸ್ತರಿಂದ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಕೂಗು. ಇವೆಲ್ಲದರ ಜೊತೆಗೆ ಇದೀಗ ಕಾಂಗ್ರೆಸ್ ನಾಯಕರಲ್ಲಿ ಒಳಗೊಳಗೆ ಅಸಮಾಧಾನದ ಹೊಗೆ ಬರಲಾರಂಭಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಮಯದಲ್ಲಿ ನಾಯಕರು ನೀಡಿದ ಭರವಸೆಗಳನ್ನು ನಂಬಿದ್ದ ನಾಯಕರು ಈಗ ಆ ಭರವಸೆಗಳನ್ನು ಮುನ್ನೆಲೆಗೆ ತರಲು ಮುಂದಾಗಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಲು ಮುಂದಾಗಿದ್ದಾರೆ. ಹೀಗಾಗಿ ಇದು ವಿಜಯಪುರ ಜಿಲ್ಲೆಯ ಆಂತರಿಕ ಕದನ ಶುರುವಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಎರಡೂವರೆ ವರ್ಷದ ಬಳಿಕ ಅಧಿಕಾರ ಹಸ್ತಾಂತರವಾಗಲಿದೆ ಎಂಬ ದೊಡ್ಡ ಅಲೆ ಆರಂಭಗೊಂಡಿದೆ. ಆದರೆ, ಇದು ಗೊತ್ತಿರುವ ರಹಸ್ಯ ಎಂಬಂತೆ ಇದನ್ನು ಬಿಂಬಿಸಲಾಗುತ್ತಿದೆ. ಆದರೆ, ಯಾರೂ ಇದನ್ನು ಅಧಿಕೃತವಾಗಿ ಬಾಯಿಬಿಡುತ್ತಿಲ್ಲ. ಅದರಂತೆ ಈಗ ಜಿಲ್ಲಾಮಟ್ಟದಲ್ಲಿಯೂ ಕಾಂಗ್ರೆಸ್ ವಲಯದಲ್ಲಿ ಅಧಿಕಾರ ಹಸ್ತಾಂತರದ ಕೂಗು ಕೂಡ ಕೇಳಿಬರುತ್ತಿದೆ. ಒಂದು ರೀತಿಯಲ್ಲಿ ಅಧಿಕಾರದ ಬದಲಾವಣೆಗೆ ನಾಯಕರು ಮನ್ನಣೆ ಹಾಕುವಂತೆ ಕೂಗು ಎದ್ದಿದೆ.
ವಿಜಯಪುರ ಜಿಲ್ಲೆಯಲ್ಲಿ ಈಗ ಆರು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಈಗಾಗಲೇ ಇಬ್ಬರು ಸಚಿವರಿದ್ದರೂ ಪರೋಕ್ಷವಾಗಿ 3ನೇ ಸಚಿವ ಸ್ಥಾನಕ್ಕೆ ಬೇಡಿಕೆ ಇಡಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲ ಸಚಿವ ಸ್ಥಾನಗಳೂ ಎರಡೂವರೆ ವರ್ಷಕ್ಕೆ ಬದಲಾವಣೆಯಾಗಿ ಉಳಿದವರಿಗೆ ಅವಕಾಶ ಕೊಡಲಾಗುತ್ತದೆ ಎಂಬ ಒಡಂಬಡಿಕೆ ಆಗಿತ್ತು ಎನ್ನುವುದು ಎಲ್ಲ ಕಡೆ ಕೇಳಿಬರುತ್ತಿರುವ ಮಾತು. ಆದರೆ ಇದೀಗ ಆ ತೆರೆಮರೆಯ ರಹಸ್ಯ ಒಪ್ಪಂದವನ್ನು ಒಪ್ಪಲು ಯಾರೂ ಮುಂದಾಗುತ್ತಿಲ್ಲ. ಹೀಗಾಗಿ ಮುಂಬರಲಿರುವ ಅವಕಾಶಕ್ಕೆ ಈಗಿನಿಂದಲೇ ಸೀಟ್‌ಬ್ಲಾಕ್ ಮಾಡಿಕೊಳ್ಳುವ ತವಕ ನಾಯಕರಲ್ಲಿ ಮೂಡತೊಡಗಿದೆ.
ಚುನಾವಣೆಗೂ ಮುಂಚೆ ಜಿಲ್ಲೆಯ ಮೂವರು ನಾಯಕರನ್ನು (ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ) ಕರೆದು ಚನ್ನಾಗಿ ಎಲೆಕ್ಷನ್ ಮಾಡಿ ಎಂದಿದ್ದ ಹೈಕಮಾಂಡ್ ಇದೀಗ ಕೊಟ್ಟ ಮಾತನ್ನು ಮರೆತಂತಿದೆ. ಇಷ್ಟುದಿನ ಸುಮ್ಮನಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸೈಲೆಂಟಾಗಿಯೇ ತಮಗೂ ಸಚಿವಸ್ಥಾನ ಸಿಗಬೇಕಿದೆ ಎಂದು ಸಿಎಂಗೆ ಸಂದೇಶ ರವಾನಿಸಿದ್ದಾರೆ. ಕಾರಣ, ಈ ಹಿಂದೆ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಇಂಡಿ ಶಾಸಕರಿಗೆ ಚುನಾವಣೆಯ ವೇಳೆ ಭರವಸೆ ಸಿಕ್ಕಿತ್ತು. ಹಾಗಾಗಿ, ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನರ್ ರಚನೆ ಅನ್ನೋದಾದರೆ ಸಿಎಂ ಕೊಟ್ಟ ಮಾತು ನೆನಪಿನಲ್ಲಿ ಇಟ್ಟುಕೊಳ್ಳಲಿ. ಯಾರ್‍ಯಾರಿಗೆ ಏನೇನು ಮಾತು ಕೊಟ್ಟಿದ್ದಾರೆ ಅದನ್ನ ನೆನಪಿಸಿಕೊಂಡು ಪುನರ್ ರಚನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಅಧಿಕಾರ ವಿಕೇಂದ್ರಿಕರಣ ಆಗಬೇಕು. ಈ ಬಾರಿ ಸಚಿವ ಸಂಪುಟದಲ್ಲಿ ತಮಗೆ ಸಚಿವಸ್ಥಾನ ಸಿಗಬೇಕು ಎಂಬುದನ್ನು ಇಂಡಿ ಶಾಸಕರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಗೆ ಸಿಕ್ಕಿತ್ತು ಮೂರು ಮಂತ್ರಿ:
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಜೆಡಿಎಸ್‌ನಿಂದ ಹಿರಿಯರಾಗಿದ್ದ ದಿ.ಎಂ.ಸಿ.ಮನಗೂಳಿ ಹಾಗೂ ಕಾಂಗ್ರೆಸ್‌ನಿಂದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನಗಳು ಸಿಕ್ಕಿದ್ದವು. ಒಂದೇ ಸಮಯದಲ್ಲಿ ಮೂವರಿಗೆ ಸಚಿವಸ್ಥಾನ ಸಿಕ್ಕಿದ್ದರಿಂದ ಆ ವೇಳೆ ಜಿಲ್ಲೆ ಅಭಿವೃದ್ಧಿಯತ್ತ ಸಾಗಿತ್ತು.
ಯಾರಾಗ್ತಾರೆ 3ನೇ ಸಚಿವರು?:
ಈಗಾಗಲೇ ನಾಯಕರು ಮಾತು ಕೊಟ್ಟಂತೆ ನಡೆದುಕೊಂಡು ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೊಡಬೇಕು ಅಥವಾ ಪವರ್ ಶೇರಿಂಗ್ ಆಗಬೇಕು ಎಂದು ಪರೋಕ್ಷವಾಗಿ ಇಂಡಿ ಶಾಸಕರು ಧ್ವನಿ ಎತ್ತಿದ್ದಾರೆ. ಇದರೊಂದಿಗೆ ಮುದ್ದೇಬಿಹಾಳದ ಮಾಜಿ ಸಚಿವ, ಹಿರಿಯ ಶಾಸಕ ಸಿ.ಎಸ್.ನಾಡಗೌಡ ಸಹ ಇದ್ದು, ಯಾರಿಗೆ ಅಧಿಕಾರ ಸಿಗಲಿದೆಯೋ ಅಥವಾ ಈಗಿರುವ ಇಬ್ಬರ ಮೇಲೆಯೇ ಮುಂದುವರೆಯಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಅವರು ಯಾರಿಗೆ ಏನು ಮಾತು ಕೊಟ್ಟಿದ್ದರೋ ಅವರನ್ನು ಮರೆಯಬಾರದು. ಪಾರ್ಟಿಯಿಂದ ಏನೇನೋ ಕಮಿಟ್ಮೆಂಟ್ ಇವೆ. ನಮಗೆ ಮೂವರಿಗೆ ಸಮನಾಗಿ ಅಧಿಕಾರ ಹಂಚಿಕೆ ಎಂದಿದ್ದರು. ಮೂವರಿಗೂ ಇಕ್ವಲ್ ಪವರ್ ಶೇರಿಂಗ್ ಎಂದಿದ್ದರು. ಇದು ಎಂದು ಅವರಿಗೆ ನೆನಪಾಗುತ್ತದೋ ಅಂದು ಅವರು ಮಾಡಲಿ.
ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ.ಶಾಸಕ ಯಶವಂತರಾಯಗೌಡರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ ಅವರು ಸಚಿವ ಸ್ಥಾನ ಕೇಳುವುದರಲ್ಲೇನೂ ತಪ್ಪಿಲ್ಲ. ಜಿಲ್ಲೆಗೆ ಇನ್ನೊಂದು ಸಚಿವಸ್ಥಾನ ಸಿಕ್ಕರೆ ನಮಗೆಲ್ಲ ಖುಷಿ ಆಗಲಿದೆ. ಪಕ್ಷಕ್ಕೆ ಮತ್ತಷ್ಟು ಬಲ ಬರಲಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಲಿದೆ. ಎಲ್ಲವನ್ನೂ ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರು ತೀರ್ಮಾನಿಸುತ್ತಾರೆ.
- ಮಲ್ಲಿಕಾರ್ಜುನ ಲೋಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ