ಸಿಂಧನೂರಿಗೆ ಕಚೇರಿಗಳ ಸ್ಥಳಾಂತರ ಲಿಂಗಸುಗೂರಲ್ಲಿ ಮುಂದುವರೆದ ಆಕ್ರೋಶ

| Published : Aug 31 2024, 01:32 AM IST

ಸಿಂಧನೂರಿಗೆ ಕಚೇರಿಗಳ ಸ್ಥಳಾಂತರ ಲಿಂಗಸುಗೂರಲ್ಲಿ ಮುಂದುವರೆದ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಸುಗೂರು ನ್ಯಾಯವಾದಿಗಳ ಸಂಘದಿಂದ ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಅಧಿಕಾರಿಗಳ ತಪ್ಪು ವರದಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಲಿಂಗಸುಗೂರಿನಿಂದ ಜಿಲ್ಲಾ ಮಟ್ಟದ ಕಚೇರಿಗಳು ಸಿಂಧನೂರಿಗೆ ಸ್ಥಳಾಂತರಗೊಳ್ಳುತ್ತಿವೆ, ಕೂಡಲೇ ತಡೆಹಿಡಿಯಬೇಕು, ಯಥಾ ಪ್ರಕಾರ ಕಚೇರಿಗಳು ಲಿಂಗಸುಗೂರಿನಲ್ಲಿಯೇ ಮುಂದುವರೆಯಬೇಕೆಂದು ನಡೆಯುತ್ತಿರುವ ಹೋರಾಟದ ಕಿಚ್ಚು 2ನೇ ದಿನಕ್ಕೂ ಮುಂದುವರೆದಿದ್ದು ಜನಾಕ್ರೋಶ ಮಡುಗಟ್ಟಿದೆ.

ಶುಕ್ರವಾರ ನ್ಯಾಯವಾದಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದವರು ಸಹಾಯಕ ಆಯುಕ್ತರ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ, ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ಅಧಿಕಾರಿಗಳು ಹುನ್ನಾರ ನಡೆಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕೃಷಿ ಉಪ ನಿರ್ದೇಶಕರ ಕಚೇರಿ-02 ಸ್ಥಳಾಂತರ ಮಾಡಿದ್ದಾರೆ. ಕೂಡಲೇ ಕೃಷಿ ಸಚಿವರು ಆದೇಶ ವಾಪಸ್ಸು ಪಡೆದು ಕಚೇರಿಯನ್ನು ಲಿಂಗಸುಗೂರಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಇದರ ಜೊತೆಗೆ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ನಿವಾಸಕ್ಕೆ ತೆರಳಿದ ಪ್ರತಿಭಟನಾನಿರತರು ಮನವಿ ಸಲ್ಲಿಸಿ ಕೂಡಲೇ ಸರ್ಕಾರ ಆದೇಶ ವಾಪಸ್ಸು ಪಡೆಯದೇ ಇದ್ದರೆ ನ್ಯಾಯಾಲಯದ ಮೋರೆ ಹೋಗೋಣ, ಅದಕ್ಕೆ ಬೇಕಾದ ಆರ್ಥಿಕ ಶಕ್ತಿ ನೀವೇ ಒದಗಿಸಬೇಕೆಂದು ಆಗ್ರಹಿಸಿದರು. ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಕೂಡಲೇ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡುವೇ ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹೇರುವೆ ಇಲ್ಲದೇ ಹೋದರೆ ನಾನೂ ನಿಮ್ಮೊಂದಿಗೆ ಹೋರಾಟಕ್ಕೆ ಮುಂದಾಗುವೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಕಾರ್ಯದರ್ಶಿ ಬಾಲರಾಜ ಸಾಗರ, ನಾಗರಾಜ ಗಸ್ತಿ, ಶರಣಬಸವ ಪಟ್ಟಣಶೆಟ್ಟಿ ಗುರುಗುಂಟಾ, ದೇವೇಂದ್ರ ನಾಯ್ಕ, ಜಂಬಣ್ಣ, ಐ.ವೀರಭದ್ರಪ್ಪ ನಿಲೋಗಲ್, ಅರುಣ ಕುಮಾರ, ಅನಿಲ್ ಕುಮಾರ, ವಿಶ್ವನಾಥ ಕೆ. ಕುಪ್ಪಣ್ಣ ಮಾಣಿಕ್ ಕರವೇ ತಾಲೂಕ ಅಧ್ಯಕ್ಷ ಜಿಲಾನಿ ಪಾಶ, ಹನುಮಂತ ನಾಯಕ, ಅಜೀಂ ಪಟೇಲ್ ಸೇರಿದಂತೆ ಇದ್ದರು.