ಸಾರಾಂಶ
- ಜಿಲ್ಲಾಡಳಿತ ಕ್ರಮದಿಂದ ರೈತರು, ಕಚೇರಿ ಸಿಬ್ಬಂದಿಗೆ ಅಲೆದಾಟ ತಪ್ಪಲ್ಲ: ಸತೀಶ್ ಅಸಮಾಧಾನ
- - - - ರೈತರು ಆಟೋ ರಿಕ್ಷಾದಲ್ಲಿ ಸರ್ವೆ ಕಚೇರಿಗೆ ಹೋಗಿ ಬರುವುದಕ್ಕೆಂದೇ ₹100-₹120 ಖರ್ಚು ಮಾಡುವಂತಾಗಿದೆ- ತಾಲೂಕು ಕಚೇರಿಯಿಂದ ಶಿವಾಲಿ ಟಾಕೀಸ್ ಬಳಿ ಬಾಡಿಗೆ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಸರಿಯೇ?
- ಶಿಥಿಲ ಕಟ್ಟಡ ನೆಪದಲ್ಲಿ ಬಡರೈತರು, ಇಲಾಖೆ ನೌಕರರ ಸಮಸ್ಯೆಗಳನ್ನು ಜಿಲ್ಲಾಡಳಿತ ಪರಿಗಣಿಸಿಲ್ಲ- - - ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧೀನದಲ್ಲಿದ್ದ ಭೂ ಸರ್ವೇ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ನಗರದ ದೇವರಾಜ ಅರಸು ಬಡಾವಣೆಯ ಶಿವಾಲಿ ಚಿತ್ರ ಮಂದಿರದ ಬಳಿ ಸ್ಥಳಾಂತರಿಸಿರುವುದು ರೈತರ ವಿರೋಧಿ ಧೋರಣೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.ನಗರದ ಎಪಿಎಂಸಿ ರೈತ ಭವನದ ತಾಲೂಕು ಕಚೇರಿಯಲ್ಲಿದ್ದ ಭೂ ಸರ್ವೇ ಮತ್ತು ಭೂ ದಾಖಲೆಗಳ ಕಚೇರಿಯನ್ನು ಸ್ಥಳಾಂತರಿಸಿದ್ದಾರೆ. ತಾಲೂಕು ಕಚೇರಿಯಲ್ಲೇ ಸರ್ವೇ ಕಚೇರಿ ಸಹ ಇದ್ದು, ತಹಸೀಲ್ದಾರ ಅಧೀನದಲ್ಲಿ ಇರುತ್ತದೆ. ಈಗ ಹೊಸ ಬಸ್ ನಿಲ್ದಾಣ ಎದುರಿನಲ್ಲಿ ಹಾಗೂ ಎಪಿಎಂಸಿ ಪ್ರಾಂಗಣದಲ್ಲೇ ಸರ್ವೆ ಇಲಾಖೆ ಇದ್ದುದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿತ್ತು ಎಂದು ತಿಳಿಸಿದ್ದಾರೆ.
ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ತಾಲೂಕು ಕಚೇರಿಗೆ ಬರುವವರು ಅಲ್ಲಿದ್ದ ಸರ್ವೇ ಕಚೇರಿಗೆ ಬಂದು, ತಮ್ಮ ಭೂ ಆಸ್ತಿಗಳ ಸರ್ಕಾರಿ ದಾಖಲೆ-ಪತ್ರಗಳ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು. ಈಗ ಸರ್ವೇ ಕಚೇರಿ ತಾಲೂಕು ಕಚೇರಿಯಿಂದ 3-4 ಕಿ.ಮೀ.ಗೂ ಅಧಿಕ ದೂರಕ್ಕೆ ಹೋದರೆ, ರೈತರು ಆಟೋ ರಿಕ್ಷಾದಲ್ಲಿ ಸರ್ವೆ ಕಚೇರಿಗೆ ಹೋಗಿ ಬರುವುದಕ್ಕೆಂದೇ ₹100-₹120 ಖರ್ಚು ಮಾಡಬೇಕಾಗುತ್ತದೆ. ಸರ್ವೇ ಕಚೇರಿ ಕಡತಗಳಿಗೆ ತಹಸೀಲ್ದಾರ್ ಸಹಿಗಾಗಿ ಸಿಬ್ಬಂದಿ ಫೈಲ್‌ಗಳನ್ನು ಹಿಡಿದುಕೊಂಡು ಎರಡೂ ಕಚೇರಿಗೆ ಎಲೆದಾಡಬೇಕು. ತಹಸೀಲ್ದಾರ್ ಇಲ್ಲದಿದ್ದರೆ ಕಾಯಬೇಕು. ಇದರಿಂದ ರೈತರು, ಜನ ಸಾಮಾನ್ಯರು, ಕಚೇರಿ ಸಿಬ್ಬಂದಿಯ ಅಮೂಲ್ಯ ಸಮಯ, ಶ್ರಮವೂ ವ್ಯರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಎಡಿಎಲ್‌ಆರ್ ಕಸ್ತೂರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದೇನೆ. ಆಗ ಅವರು, ಈಗಿರುವ ಕಟ್ಟಡ ಶಿಥಿಲಗೊಂಡಿದೆ, ಮೇಲ್ಚಾವಣಿ ದುರ್ಬಲವಾಗಿದ್ದು, ಮಳೆ ಬಂದರೆ ಸೋರುತ್ತದೆ, ಯಾವ ಕ್ಷಣದಲ್ಲಾದರೂ ವಿದ್ಯುತ್ ಶಾರ್ಟ್ ಸಕ್ಯೂಟ್ ಆಗಬಹುದು. ಸಿಬ್ಬಂದಿಗೆ ಸೂಕ್ತ ರಕ್ಷಣೆ ಇಲ್ಲ, ಭೂ ದಾಖಲೆಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಹಾಗಾಗಿ ಜಿಲ್ಲಾಧಿಕಾರಿ ಅನುಮೋದನೆ ಪಡೆದೇ, ಕಚೇರಿ ಸ್ಥಳಾಂತರಿಸಲು ತೀರ್ಮಾನಿಸಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಬಡರೈತರು, ಮಹಿಳೆಯರ ಸಮಸ್ಯೆ ಜಿಲ್ಲಾಡಳಿತ ಪರಿಗಣಿಸಿಲ್ಲ ಎಂದಿದ್ದಾರೆ.
- - -ಬಾಕ್ಸ್ ಕಟ್ಟಡ ದುರಸ್ತಿಗೆ ಅಧಿಕಾರಿಗಳೇ ನಿರ್ಲಕ್ಷ್ಯ ಆದರೆ, ಶಿಥಿಲ ಕಟ್ಟಡವನ್ನು ದುರಸ್ತಿಗೆ ತಹಸೀಲ್ದಾರ್ ಕಚೇರಿಯಿಂದ ಎಪಿಎಂಸಿ ಕಚೇರಿಗೆ ಪತ್ರವನ್ನೇ ಬರೆದಿಲ್ಲ. ಕಳೆದ 3 ವರ್ಷಗಳಿಂದಲೂ ಜಿಲ್ಲಾಧಿಕಾರಿ ಅವರೇ ಎಪಿಎಂಸಿ ಆಡಳಿತಾಧಿಕಾರಿಯೂ ಆಗಿದ್ದಾರೆ. ಆದರೂ, ತಾಲೂಕು ಕಚೇರಿಯ ಶಿಥಿಲ ಕಟ್ಟಡ ದುರಸ್ಥಿ ಕಡೆಗೆ ಗಮನ ಹರಿಸದಿರುವುದು ಸೋಜಿಗದ ಸಂಗತಿ ಎಂದು ಜಿಲ್ಲಾಧಿಕಾರಿ ಕಾರ್ಯವೈಖರಿ ಬಗ್ಗೆ ಬಿ.ಎಂ.ಸತೀಶ ಕೊಳೇನಹಳ್ಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- - - -19ಕೆಡಿವಿಜಿ2: ಬಿ.ಎಂ.ಸತೀಶ ಕೊಳೇನಹಳ್ಳಿ