ಶಿಗೇಹಳ್ಳಿ ಗ್ರಾಮಸ್ಥರಿಗಿಲ್ಲ ಸ್ವಚ್ಛ ನೀರು ಭಾಗ್ಯ

| Published : Oct 09 2024, 01:30 AM IST

ಸಾರಾಂಶ

ಸೊರಬ ತಾಲೂಕಿನ ಶಿಗೇಹಳ್ಳಿ ಗ್ರಾಮದ ಕುಡಿಯುವ ನೀರಿನ ಬೋರ್‌ವೆಲ್‌ನಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಸರಬರಾಜು ಆಗುತ್ತಿದೆ.

ಎಚ್.ಕೆ.ಬಿ. ಸ್ವಾಮಿ

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಶಿಗೇಹಳ್ಳಿ ಗ್ರಾಮಸ್ಥರಿಗೆ ಶುದ್ಧ ನೀರು ಬಳಸುವ ಭಾಗ್ಯ ಇಲ್ಲವಾಗಿದ್ದು, ಪ್ರತಿನಿತ್ಯ ಮಣ್ಣು ಮಿಶ್ರಿತ ರಾಡಿ ನೀರು ಕುಡಿವ ದುಸ್ಥಿತಿ ಬಂದಿದೆ. ಇದರಿಂದ ಗ್ರಾಮಸ್ಥರು ಶೀತ, ಜ್ವರ ಸೇರಿದಂತೆ ಚರ್ಮ ರೋಗದಿಂದ ಬಳಲುತ್ತಿದ್ದಾರೆ.

ಸೊರಬ ಪುರಸಭೆ ವ್ಯಾಪ್ತಿಗೆ ಬರುವ ಶಿಗೇಹಳ್ಳಿಯು ಪಟ್ಟಣ ಪ್ರದೇಶದಿಂದ ಕೇವಲ 5 ಕಿಮೀ ದೂರದಲ್ಲಿದೆ. ಸುಮಾರು 50 ಮನೆಗಳಿವೆ. ಕುಡಿವ ನೀರಿಗಾಗಿ ಗ್ರಾಮದಲ್ಲಿ ಒಂದೇ ಒಂದು ಕೊಳವೆ ಬಾವಿ ಇದೆ. ಬೋರ್‌ವೆಲ್‌ನಿಂದ ಪೈಪ್‌ಲೈನ್ ಮೂಲಕ ಪ್ರತಿ ಮನೆಗೆ ಸರಬರಾಜು ಆಗುವ ನೀರು ಕಳೆದ ನಾಲ್ಕು ತಿಂಗಳಿಂದ ಕಲುಷಿತವಾಗಿದೆ. ಇದನ್ನೇ ಗ್ರಾಮಸ್ಥರು ಕುಡಿಯಲು ಮತ್ತು ಗೃಹ ಬಳಕೆಗೆ ಉಪಯೋಗಿಸುತ್ತಿದ್ದಾರೆ.

ಕಲುಷಿತ ನೀರು ಸೇವಿಸಿದ ಪರಿಣಾಮ ಮಕ್ಕಳು ಸೇರಿ ಗ್ರಾಮದ ಹಲವರಿಗೆ ಶೀತ, ಜ್ವರ ಕಾಣಿಸಿಕೊಂಡಿದೆ. ಅಲ್ಲದೇ ಸ್ನಾನಕ್ಕೆ ಉಪಯೋಗಿಸುವುದರಿಂದ ಮೈ ತುರಿಕೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಏಳು ವರ್ಷಗಳ ಹಿಂದೆ ಗ್ರಾಪಂನಿಂದ ಕೊರೆಸಿದ ಕೊಳವೆ ಬಾವಿಯಲ್ಲಿ 5 ಇಂಚು ನೀರು ಇದ್ದು, ನಾಲ್ಕೈದು ತಿಂಗಳಿಂದ ನೀರಿನ ಸೆಲೆ ಕಡಿಮೆಯಾಗಿದೆ ರಾಡಿ ನೀರು ಬರುತ್ತಿದೆ. ನೀರನ್ನು ಪಾತ್ರೆ, ಪ್ಲಾಸ್ಟಿಕ್ ಟಬ್‌ಗಳಲ್ಲಿ ಸಂಗ್ರಹಿಸಿಟ್ಟರೆ ಮಣ್ಣು ತಳ ಸೇರುತ್ತದೆ. ನಂತರ ಮೇಲಿನ ತಿಳಿ ನೀರನ್ನು ಕುಡಿಯಲು ಬಳಸುತ್ತಿದ್ದಾರೆ.

ಗ್ರಾಮಸ್ಥರು ದೂರಿನ ಮೇರೆಗೆ ಪುರಸಭೆಯಿಂದ 5 ತಿಂಗಳ ಹಿಂದೆ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ ಮೋಟಾರ್ ಅಳವಡಿಸಿಲ್ಲ. ಈ ಕುರಿತು ಅಧಿಕಾರಿಗಳಿಗೆ ಕೇಳಿದರೆ ಮೋಟಾರ್ ಮತ್ತು ಪೈಪ್ ಖರೀದಿಗೆ ಪುರಸಭೆಯಲ್ಲಿ ಅನುದಾನ ಇಲ್ಲ ಎನ್ನುತ್ತಾರೆ. ಈ ಕರಿತು ತಮ್ಮ ಸಮಸ್ಯೆ ತಿಳಿಸಲು ಕ್ಷೇತ್ರದ ಶಾಸಕರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.

--

ಕೋಟ್‌:

ಶಿಗೇಹಳ್ಳಿ ಗ್ರಾಮ ಸೊರಬ ಪುರಸಭೆ ವ್ಯಾಪ್ತಿಗೆ ಒಳಪಟ್ಟು 5 ವರ್ಷಗಳು ಕಳೆದಿವೆ. ಆದರೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. 6 ವರ್ಷಗಳ ಹಿಂದೆ ಗ್ರಾಪಂ ಅಭಿವೃದ್ಧಿ ಅನುದಾನದಲ್ಲಿ ಕೊರೆಸಿದ್ದ ಒಂದೇ ಒಂದು ಕೊಳವೆ ಬಾವಿ ಇಡೀ ಗ್ರಾಮಕ್ಕೆ ನೀರು ಒದಗಿಸುತ್ತಿದೆ. ಅದರ ನೀರು ಶುದ್ಧವಾಗಿಲ್ಲ. ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗೆ ಮೋಟಾರ್ ಅಳವಡಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ.

-ಕೆರಿಯಪ್ಪ, ಶಿಗೇಹಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ