ಸಾರಾಂಶ
ಹಾವೇರಿ (ಶಿಗ್ಗಾಂವಿ): ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಶಿಗ್ಗಾಂವಿ-ಸವಣೂರು ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಬೆಳಗ್ಗೆ ಮತ್ತು ಸಂಜೆ ತುರುಸಿನಿಂದ ಮತದಾನ ನಡೆಯಿತು. ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲದೇ ಕ್ಷೇತ್ರದ 241 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ. ಚುನಾವಣಾ ಕಣದಲ್ಲಿದ್ದ ಬಹುತೇಕ ಅಭ್ಯರ್ಥಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾರರು ಮತಗಟ್ಟೆಗೆ ಆಗಮಿಸಿದ್ದರು. ಮಧ್ಯಾಹ್ನದ ಬಿಸಿಲಿನ ಭಯದಿಂದ ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆ 10ಕ್ಕೆ ಸರದಿ ಸಾಲಿನಲ್ಲಿ ನಿಂತು ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಮಧ್ಯಾಹ್ನದ ಬಿಸಿಲು ಹೆಚ್ಚಾಗುತ್ತಿದ್ದಂತೆ ಮತದಾರರು ಮತಗಟ್ಟೆಗೆ ಬರುವ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಆದರೂ ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು ಮತದಾರರಿಗೆ ಮಿನರಲ್ ವಾಟರ್, ತಂಪುಪಾನೀಯ, ಎಳನೀರು, ಉಪಾಹಾರದ ವ್ಯವಸ್ಥೆ ಮಾಡಿ ಮನವೊಲಿಸಿದರು. ಸಂಜೆ ವೇಳೆಗೆ ಮತದಾನ ಪ್ರಕ್ರಿಯೆ ತುರುಸಿನಿಂದ ನಡೆಯಿತು. ಈ ಉಪ ಚುನಾವಣೆಯಲ್ಲಿ ಮಧ್ಯಾಹ್ನ ಅವಧಿ ವರೆಗೆ ಪುರುಷರಿಗಿಂತ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮತಹಕ್ಕನ್ನು ದಾಖಲಿಸಿದರು.ಎಷ್ಟೊತ್ತಿಗೆ ಎಷ್ಟು ಮತದಾನ?:ಜಿಲ್ಲೆಯಲ್ಲಿ ಬೆಳಗ್ಗೆ 9ರ ವೇಳೆಗೆ ಶೇ.10.8ರಷ್ಟು, ಬೆಳಗ್ಗೆ 11 ಗಂಟೆ ವೇಳೆಗೆ ಶೇ. 26.01ರಷ್ಟು, ಮಧ್ಯಾಹ್ನ 1ರ ವೇಳೆಗೆ ಶೇ. 43.50ರಷ್ಟು, ಮಧ್ಯಾಹ್ನ 3ರ ವೇಳೆಗೆ ಶೇ.59.62 ರಷ್ಟು, ಸಂಜೆ 5 ಗಂಟೆ ಹೊತ್ತಿಗೆ ಶೇ. 75.07ರಷ್ಟು ಮತದಾನ ನಡೆದಿದೆ. ವಯೋವೃದ್ಧೆಯಿಂದ ಮತದಾನ: ಶಿಗ್ಗಾಂವಿಯ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 96ರ ವಯೋವೃದ್ಧೆ ದುರ್ಗಮ್ಮ ಆಲದಕಟ್ಡಿ ಅವರು ಶಿಗ್ಗಾಂವಿಯ ಮತಗಟ್ಟೆ ಸಂಖ್ಯೆ 106ಕ್ಕೆ ಆಗಮಿಸಿ ಮತ ಹಕ್ಕನ್ನು ಚಲಾಯಿಸಿ ಗಮನ ಸೆಳೆದರು.ಮೊದಲ ಬಾರಿಗೆ ಮತದಾನ ಮಾಡಿದ ಸಂಭ್ರಮ: ಉಪ ಚುನಾವಣೆಯಲ್ಲಿ ಮತಗಟ್ಟೆ ಸಂಖ್ಯೆ 135ರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸವಣೂರಿನ ಸಖಿ ಮತಗಟ್ಟೆಯಲ್ಲಿ ಅಂಜಲಿ ತೆಲಗಿ ಅವರು ಮೊದಲನೇ ಬಾರಿಗೆ ಮತ ಚಲಾಯಿಸಿ ಸಂತೋಷ ಹಂಚಿಕೊಂಡರು.ಅನಿವಾಸಿ ಭಾರತೀಯರಿಂದ ಮತದಾನ: ಅಮೆರಿಕಾದ ಆಸ್ಟನ್ ಟೆಕ್ಸಿಸ್ ವಾಸಿಯಾಗಿರುವ ಅನುಷಾ ಸೊಬಾನಿ ಅವರು ಶಿಗ್ಗಾಂವಿ ಪಟ್ಟಣದ ಮತಗಟ್ಟೆ ಸಂಖ್ಯೆ 108ಕ್ಕೆ ಆಗಮಿಸಿ ತಮ್ಮ ಮತಹಕ್ಕನ್ನು ಚಲಾಯಿಸಿದರು.ವಿಶೇಷ ಮತಗಟ್ಟೆಗಳು: ಶಿಗ್ಗಾಂವಿ ಪುರಸಭೆಯ ಮತಗಟ್ಟೆ ಸಂಖ್ಯೆ 98ರಲ್ಲಿ, ಕೊಟ್ಟಿಗೇರಿಯ ಮತಗಟ್ಟೆ ಸಂಖ್ಯೆ 195ರಲ್ಲಿ, ಸವಣೂರಿನ ಮತಗಟ್ಟೆ ಸಂಖ್ಯೆ 135 ಮತ್ತು ವೆಳ್ಳಾಗಟ್ಟಿಯ ಮತಗಟ್ಟೆ ಸಂಖ್ಯೆ 212ರ ಐದೂ ಸಖಿ ಮತಗಟ್ಟೆಗಳಲ್ಲಿ ಮಹಿಳಾ ನೌಕರರೇ ಕಾರ್ಯನಿರ್ವಹಿಸಿ ಸೈ ಅನಿಸಿಕೊಂಡರು. ಮತಗಟ್ಟೆ ಸಂಖ್ಯೆ 178 ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತೆರೆಯಲಾಗಿದ್ದ ವಿಶೇಷಚೇತನರ ಮತಗಟ್ಟೆಯಲ್ಲಿ ವಿಕಲಚೇತನ ನೌಕರರು ಕಾರ್ಯನಿರ್ವಹಿಸಿ ಗಮನ ಸೆಳೆದರು. ದುಂಡಶಿ ಗ್ರಾಮದಲ್ಲಿನ ಶಾಸಕರ ಮಾದರಿಯ ಸರ್ಕಾರಿ ಶಾಲೆಯಲ್ಲಿನ ವಿಷಯಾಧಾರಿತ ಮತಗಟ್ಟೆ ಮತ್ತು ಕೋಣನಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವ ದಿಕ್ಕಿನಲ್ಲಿದ್ದ ಯುವ ಮತಗಟ್ಟೆಗಳು ಮತದಾರರ ಗಮನ ಸೆಳೆದವು.ಸೂಕ್ತ ಭದ್ರತೆ:241 ಮತಗಟ್ಟೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯಕ್ಕೆ ತಕ್ಕಂತೆ ಪೊಲೀಸ್, ಗೃಹರಕ್ಷಕ ದಳ ಮತ್ತು ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಲಾಗಿತ್ತು. 716ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು.ರಾಜಕೀಯ ಭವಿಷ್ಯ ಭದ್ರ:ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತದಾರರು ಚುನಾವಣಾ ಕಣದಲ್ಲಿರುವ 8 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದರು. ಅಭ್ಯರ್ಥಿಗಳ ಭವಿಷ್ಯ ಈಗ ಮತಯಂತ್ರದಲ್ಲಿ ಭದ್ರವಾಗಿದ್ದು ನ. 23ರಂದು ಎಣಿಕೆಯ ಮೂಲಕ ಬಹಿರಂಗಗೊಳ್ಳಲಿವೆ.ಮಹಿಳೆಯರು ಮುಂದೆ:ಉಪಚುನಾವಣೆಯಲ್ಲಿ ಮಹಿಳೆಯರು ಬೆಳಗಿನಿಂದಲೇ ಮತಗಟ್ಟೆಗಳಿಗೆ ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ಮಧ್ಯಾಹ್ನ 3 ಗಂಟೆಗೆ 71,856 ಮಹಿಳೆಯರು ಮತ ಚಲಾಯಿಸಿದ್ದರು. ಮಧ್ಯಾಹ್ನದ ವರೆಗೆ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರೇ ಮುಂದಿದ್ದರು. ಸಂಜೆ ವೇಳೆಗೆ ಪುರುಷರ ಮತದಾನ ಪ್ರಮಾಣ ಹೆಚ್ಚಾಯಿತು.ಯುವಕರಲ್ಲಿತ್ತು ಹುಮ್ಮಸ್ಸು: ಶಿಗ್ಗಾಂವಿ ಕ್ಷೇತ್ರಗದಲ್ಲಿ ಈ ಬಾರಿ ಯುವಕರು ಹುಮ್ಮಸ್ಸಿನೊಂದಿಗೆ ಮತಚಲಾಯಿಸಿದರು. ಕೆಲ ಯುವಕರು ಮತಚಲಾಯಿಸಿದ ಬಳಿಕ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾ ಸಂಭ್ರಮಿಸಿದರು.ಮತದಾರರಿಗೆ ವಾಹನ ವ್ಯವಸ್ಥೆ:ಗುರುತಿನ ಚೀಟಿ ಹಿಡಿದ ಮತದಾರರು ಗುಂಪುಗುಂಪಾಗಿ ಮತದಾನದಲ್ಲಿ ಪಾಲ್ಗೊಳ್ಳಲು ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಿರಿಯರನ್ನು ಹೊತ್ತು ತರುವ, ವಾಹನದಲ್ಲಿ ಕರೆತರುವ ದೃಶ್ಯಗಳು ಕಂಡುಬಂದವು. ವಿಕಲಚೇತನರು, ಅಶಕ್ತರಿಗಾಗಿ ಮತಗಟ್ಟೆಯಲ್ಲಿ ತ್ರಿಚಕ್ರವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ನಿಯೋಜಿಸಿದ ಪೊಲೀಸ್ ಸಿಬ್ಬಂದಿ ಮತದಾರರಿಗೆ ನಿರಂತರ ಸೂಚನೆ ನೀಡುತ್ತಿರುವುದು ಕಂಡುಬಂದಿತು.ಮತಚೀಟಿ ಏಜೆಂಟ್‌ರ, ಮುಖಂಡರ ಹಾವಳಿ ಕಡಿಮೆ: ಚುನಾವಣಾ ಆಯೋಗದ ಸಿಬ್ಬಂದಿಯೇ ಮತದಾರರಿಗೆ ಮತಚೀಟಿ ನೀಡಿದ್ದರಿಂದ ಮತಗಟ್ಟೆಯ ಬಳಿ ಪೆಂಡಾಲ್ ಹಾಕಿಕೊಂಡು ಕುಳಿತಿರುತ್ತಿದ್ದ ಆಯಾ ಪಕ್ಷಗಳ ಕಾರ್ಯಕರ್ತರು ಬಹುತೇಕ ಮತಗಟ್ಟೆಯ ಬಳಿ ಕಂಡುಬರಲಿಲ್ಲ. ಕೆಲ ಮತಗಟ್ಟೆಗಳ ಬಳಿ ಒಂದು ಟೇಬಲ್ ಹಾಕಿಕೊಂಡು ಮತದಾನ ಮಾಡಲು ಬಂದವರ ಹೆಸರುಗಳನ್ನು ಮಾರ್ಕ್ ಮಾಡಿಕೊಂಡು ಯಾರು ಬಂದಿಲ್ಲ ಎಂಬುದನ್ನು ಕಾರ್ಯಕರ್ತರಿಗೆ ತಿಳಿಸುತ್ತಿದ್ದರು. ಅವರು ಅಂತಹ ಮತದಾರರ ಮನೆಬಾಗಿಲಿಗೆ ಹೋಗಿ ಮತಹಾಕಲು ಬರುವಂತೆ ವಿನಂತಿಸಿ ಆಟೋರಿಕ್ಷಾ, ಕಾರು, ಜೀಪ್, ಬೈಕ್‌ಗಳಲ್ಲಿ ಮತಗಟ್ಟೆಗೆ ಕರೆತರುತ್ತಿದ್ದರು. ಈ ಸಾರಿ ಮತಗಟ್ಟೆಗಳ ಬಳಿ ಅಷ್ಟಾಗಿ ಆಯಾ ಪಕ್ಷದ ಮುಖಂಡರು ಸಹ ಕಂಡುಬರಲಿಲ್ಲ.ಬೆಂಗಳೂರು, ಮಂಗಳೂರು ಸೇರಿ ರಾಜ್ಯ ಸೇರಿ ಹೊರ ರಾಜ್ಯಗಳಿಗೆ ದುಡಿಮೆಗೆ ಹೋಗಿದ್ದ ಮತದಾರರು ಸ್ವಕ್ಷೇತ್ರಗಳಿಗೆ ಆಗಮಿಸಿ ಮತಚಲಾಯಿಸಿದರು. ಕೆಲಕಡೆ ಆ ಗ್ರಾಮಗಳ ಮುಖಂಡರೇ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸಲು ವಾಹನದ ವ್ಯವಸ್ಥೆ ಮಾಡಿ ಮತದಾರರನ್ನು ಕರೆತಂದಿದ್ದರು.ಈ ಉಪಚುನಾವಣೆಯಲ್ಲಿ ಹೆಚ್ಚಾಗಿ ಮದ್ಯದ ವಾಸನೆ ಕಂಡು ಬರಲಿಲ್ಲ, ಚುನಾವಣೆಯಲ್ಲಿ ಮದ್ಯ ಹಂಚಿಕೆ ಮಾಡದಿರುವುದು, ಜಿಲ್ಲೆಯಾದ್ಯಂತ ಮದ್ಯ ನಿಷೇಧ ಮಾಡಿರುವುದರಿಂದ ಮದ್ಯದ ಹಾವಳಿ ಕಡಿಮೆಯಾಗಿತ್ತು.