ಸಾರಾಂಶ
ಶಿಗ್ಗಾಂವಿ: ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿ ಕಾನೂನುಬಾಹಿರವಾಗಿ ಪ್ರವಾಸಿ ಮಂದಿರ ಉದ್ಘಾಟನೆ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ ಘಟನೆ ನೂತನ ಪ್ರವಾಸಿ ಮಂದಿರದ ಆವರಣದಲ್ಲಿ ಜರುಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ತಾಲೂಕಾಧ್ಯಕ್ಷ ವಿಶ್ವನಾಥ ಹರವಿ ಮಾತನಾಡಿ, ಇನ್ನೂ ನಿರ್ಮಾಣ ಹಂತದಲ್ಲಿರುವ ಈ ಪ್ರವಾಸಿ ಮಂದಿರದ ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯು ತನ್ನ ವಶಕ್ಕೆ ಪಡೆದುಕೊಳ್ಳದೆ ಕಾನೂನನ್ನು ಗಾಳಿಗೆ ತೂರಿ ತರಾತುರಿಯಲ್ಲಿ ನಿಯಮಬಾಹಿರವಾಗಿ ಉದ್ಘಾಟನೆ ಮಾಡಲಾಗಿದೆ. ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಜಿಪಂ ಮಾಜಿ ಸದಸ್ಯ ಬಸವರಾಜ ಹೊನ್ನಣ್ಣನವರ ಮಾತನಾಡಿ, ಶಿಗ್ಗಾಂವಿಯ ಪ್ರವಾಸಿ ಮಂದಿರದ ನಿರ್ಮಾಣಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂರಾರು ಕೋಟಿ ನೀಡಿ ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಸೇಡಿನ ರಾಜಕಾರಣಕ್ಕಾಗಿ ಅಡಿಗಲ್ಲು ಸಮಾರಂಭದ ಫಲಕವನ್ನು ಕಟ್ಟಡಕ್ಕೆ ಅಳವಡಿಸದೇ ಕೇವಲ ಉದ್ಘಾಟನೆಗೆ ಸಂಬಂಧಿಸಿದ ಫಲಕ ಅಳವಡಿಸಿ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ಮಾಡಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಮರೆತು ಉದ್ಘಾಟನೆ ಮಾಡಿದ್ದಾರೆ. ಶಿಷ್ಟಾಚಾರ ಮರೆತು ಕಾನೂನುಬಾಹಿರವಾಗಿ ನೂತನ ಪ್ರವಾಸಿ ಮಂದಿರ ಉದ್ಘಾಟನೆ ಮಾಡಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಅಡಿಗಲ್ಲು ಸಮಾರಂಭದ ಫಲಕ ಕಟ್ಟಡಕ್ಕೆ ಗೌರವಪೂರ್ವಕವಾಗಿ ಅಳವಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ಕೇವಲ ಅಭಿವೃದ್ಧಿ ರಾಜಕಾರಣ ಮಾತ್ರ ಇದೆ. ಇಲ್ಲಿ ಸೇಡಿನ ರಾಜಕಾರಣಕ್ಕೆ ಅವಕಾಶವಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾನಿರತ ತಾಲೂಕು ಬಿಜೆಪಿ ಘಟಕದ ಮುಖಂಡರು ತಹಸೀಲ್ದಾರಗೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮುಖಂಡ ಕೆಎಂಎಫ್ ಮಾಜಿ ನಿರ್ದೇಶಕ ಬಸವನಗೌಡ ಮೇಲಿನಮನಿ, ಸಂತೋಷ ದೊಡ್ಡಮನಿ, ಶಿವಶಂಕರ ಸೇರಿದಂತೆ ಇತರರಿದ್ದರು.ತಹಸೀಲ್ದಾರರಿಂದ ಮನವಿ ಸ್ವೀಕಾರ
ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರವಿಕುಮಾರ ಕೊರವರ ಅವರು, ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಘಟನೆಯ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸುವುದಾಗಿ ಮತ್ತು ಅಡಿಗಲ್ಲು ಸಮಾರಂಭದ ಫಲಕ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.ಮರಳಿ ಮನಸಾಗಿದೆ ಸಿನಿಮಾ ಪ್ರಚಾರರಾಣಿಬೆನ್ನೂರು: ಮರಳಿ ಮನಸಾಗಿದೆ ಚಿತ್ರವು ಯುವಜನತೆಗೆ ಹತ್ತಿರವಾದ ಹಾಗೂ ಸಂಬಂಧಗಳ ಮೌಲ್ಯಗಳ ಆಧರಿತ ಅಂಶಗಳನ್ನು ಒಳಗೊಂಡಿದೆ ಎಂದು ಪ್ರಾ. ಡಾ. ಎಸ್.ಜಿ. ಮಾಕನೂರ ತಿಳಿಸಿದರು.ನಗರದ ಎಸ್‌ಟಿಜೆಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮರಳಿ ಮನಸಾಗಿದೆ ಕನ್ನಡ ಚಲನಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇದೊಂದು ಸಂಗೀತ ಪ್ರಧಾನ ಚಿತ್ರವಾದರೂ ಮೆಡಿಕಲ್‌ಗೆ ಸಂಬಂಧಿಸಿದ ವಿಷಯವೂ ಚಿತ್ರದಲ್ಲಿದೆ ಎಂದರು.
ನಿರ್ಮಾಪಕ ಮುದೇಗೌಡ್ರು ನವೀನಕುಮಾರ ಮಾತನಾಡಿ, ಈ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದ್ದು, ಜೂನ್ ತಿಂಗಳ ಕೊನೆಯಲ್ಲಿ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ನಾನು ಈ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ. ನಾನು ಓದಿದ ಕಾಲೇಜಿನಲ್ಲಿ ನಮ್ಮ ಚಿತ್ರದ ಪ್ರಮೋಷನ್ ಮಾಡುತ್ತಿರುವುದು ನನ್ನ ಪುಣ್ಯ ಎಂದರು.ನಿರ್ದೇಶಕ ನಾಗರಾಜ ಶಂಕರ, ಚಿತ್ರದ ನಾಯಕ ಅರ್ಜುನ ವೇದಾಂತ, ವಿಜಯಕುಮಾರ, ಡಾ. ಎಂ.ಈ. ಶಿವಕುಮಾರ್ ಹೊನ್ನಾಳಿ, ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.