ಶಿಕಾರಿಪುರ: ಕಾನೂರು ದುರ್ಗಮ್ಮನ ವೃತ್ತ ನಾಮಫಲಕ ಅಳವಡಿಕೆ
KannadaprabhaNewsNetwork | Published : Oct 11 2023, 12:45 AM IST
ಶಿಕಾರಿಪುರ: ಕಾನೂರು ದುರ್ಗಮ್ಮನ ವೃತ್ತ ನಾಮಫಲಕ ಅಳವಡಿಕೆ
ಸಾರಾಂಶ
2014ರಲ್ಲಿಯೇ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾನೂರು ದುರ್ಗಮ್ಮನ ಸರ್ಕಲ್ ಎಂದು ಅಧಿಕೃತವಾಗಿ ಅನುಮೋದನೆ
- ಪುರಸಭೆ ಅನುಮತಿ ಇದ್ದರೂ ಫಲಕ ಅಳವಡಿಕೆ ಆಗಿರಲಿಲ್ಲ । ಸುದೀರ್ಘ ಕಾಲದ ಗೊಂದಲ ಅಂತ್ಯ - - - ಶಿಕಾರಿಪುರ: ಪಟ್ಟಣದ ಪುರಸಭೆಯಲ್ಲಿ ಹಲವು ವರ್ಷದ ಹಿಂದೆ ಸಾಮಾನ್ಯ ಸಭೆಯಲ್ಲಿ ಅನುಮೋದನೆಯಾಗಿ ನನೆಗುದಿಗೆ ಬಿದ್ದಿದ್ದ ವೃತ್ತವೊಂದಕ್ಕೆ ಸೋಮವಾರ ಅಧಿಕೃತವಾಗಿ ಕಾನೂರು ದುರ್ಗಮ್ಮನ ವೃತ್ತ ಎಂದು ನಾಮಫಲಕ ಅಳವಡಿಸುವ ಮೂಲಕ ಸುದೀರ್ಘ ಕಾಲದ ಗೊಂದಲ ಅಂತ್ಯಗೊಂಡಿದೆ. ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಕಾನೂರು ದುರ್ಗಮ್ಮ ಹಾಗೂ ಕಾನೂರು ಬಸವೇಶ್ವರ ದೇವಸ್ಥಾನದ ಮಧ್ಯದ ವೃತ್ತಕ್ಕೆ ಕಾನೂರು ದುರ್ಗಮ್ಮ ಸರ್ಕಲ್ ಎಂದು ಪುರಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ ಇದುವರೆಗೂ ಅಧಿಕೃತವಾಗಿ ನಾಮಫಲಕ ಅಳವಡಿಸದೇ ಸೀಮಿತ ಸಮುದಾಯದ ಹಿತಾಸಕ್ತಿಗಾಗಿ ನನೆಗುದಿಯಲ್ಲಿತ್ತು ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ಅಧಿಕೃತವಾಗಿ ನಾಮಫಲಕ ಅಳವಡಿಸಿ, ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. 2014ರಲ್ಲಿಯೇ ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾನೂರು ದುರ್ಗಮ್ಮನ ಸರ್ಕಲ್ ಎಂದು ಅಧಿಕೃತವಾಗಿ ಅನುಮೋದನೆ ದೊರೆತಿದ್ದರೂ, ಕೋಮುಸಂಘರ್ಷ, ಮತೀಯ ಭಾವನೆ ಹದಗೆಡುವ ನೆಪದಿಂದ ನಾಮಫಲಕ ಅನಾವರಣಕ್ಕೆ ಹಿಂದೇಟು ಹಾಕಲಾಗುತ್ತಿತ್ತು. ಇದೀಗ ಪುರಸಭಾಧ್ಯಕ್ಷೆ ಹಾಗೂ ಸ್ಥಳೀಯ ಸದಸ್ಯೆ ರೇಖಾಬಾಯಿ ಮಂಜುನಾಥ ಸಿಂಗ್ ಅವರ ವಿಶೇಷ ಕಾಳಜಿ, ಪ್ರಯತ್ನದಿಂದಾಗಿ ನಾಮಫಲಕ ಅನಾವರಣ ಕಾರ್ಯ ಸೋಮವಾರ ನಿರ್ವಿಘ್ನವಾಗಿ ನೆರವೇರಿದೆ. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಸದಸ್ಯ ಬಿ.ಪಿ. ಶಿವನಗೌಡ, ವಿಶ್ವನಾಥಸ್ವಾಮಿ, ಶ್ರೀಕಾಂತ್ ಕಡೇಕೇರಿ, ಲಕ್ಷ್ಮಣಪ್ಪ, ಬಸವರಾಜಪ್ಪ ಮತ್ತಿತರರು ಹಾಜರಿದ್ದರು. - - - -9ಕೆ.ಎಸ್.ಕೆ.ಪಿ1: ಶಿಕಾರಿಪುರದಲ್ಲಿ ಬಸ್ ನಿಲ್ದಾಣಕ್ಕೆ ತಿರುಗುವ ವೃತ್ತಕ್ಕೆ ಸೋಮವಾರ ಕಾನೂರು ದುರ್ಗಮ್ಮನ ಸರ್ಕಲ್ ಎಂದು ಅಧಿಕೃತವಾಗಿ ನಾಮಫಲಕ ಅಳವಡಿಸಲಾಯಿತು.