ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ 2024-25 ನೇ ಸಾಲಿನ ಆಯವ್ಯಯವನ್ನು ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಯತೀಶ್ ಆರ್. ಮಂಡಿಸಿ ₹32,08590 ಉಳಿತಾಯ ಘೋಷಿಸಿದರು.ಪುರಸಭೆ ಸಭಾಂಗಣದಲ್ಲಿ ಆಡಳಿತಾಧಿಕಾರಿ ಯತೀಶ್ ಅಧ್ಯಕ್ಷತೆಯಲ್ಲಿ ನಡೆದ 2024-25 ನೇ ಸಾಲಿನ ಬಜೆಟ್‌ನಲ್ಲಿ ಬೀದಿದೀಪ ನಿರ್ವಹಣೆಗೆ ₹30 ಲಕ್ಷ, ನೈರ್ಮಲೀಕರಣ ನಿರ್ವಹಣೆಗೆ ₹11.5 ಲಕ್ಷ, ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗೆ ₹1.07 ಕೋಟಿ, ರಸ್ತೆ ನಿರ್ಮಾಣಕ್ಕೆ ₹35 ಲಕ್ಷ, ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ₹42 ಲಕ್ಷ, ಉದ್ಯಾನವನ ನಿರ್ಮಾಣ ಹಾಗೂ ಅರಣ್ಯೀಕರಣಕ್ಕೆ ₹10 ಲಕ್ಷ, ಮಳೆ ನೀರಿನ ಚರಂಡಿ, ತೆರೆದ ಚರಂಡಿ ನಿರ್ಮಾಣಕ್ಕೆ ₹6 ಲಕ್ಷ, ನಾಗರಿಕ ವಿನ್ಯಾಸ ಇತರೆ ಬಾಬ್ತು ₹5 ಲಕ್ಷ, ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ- ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ₹34.53 ಲಕ್ಷ, ₹7.25 % ಕಾರ್ಯಕ್ರಮಕ್ಕೆ ₹15 ಲಕ್ಷ, % 5 ಕಾರ್ಯಕ್ರಮಕ್ಕೆ ₹6 ಲಕ್ಷ, ಕ್ರೀಡಾ ಪ್ರೋತ್ಸಾಹಕ್ಕೆ ₹1 ಲಕ್ಷ, ಕಾಂಪೌಂಡ್ ಮತ್ತಿತರ ಸೇವೆಗೆ ₹12 ಲಕ್ಷ, ಸಮುದಾಯ ಭವನ ನಿರ್ವಹಣೆಗೆ ₹1 ಲಕ್ಷ, ರುದ್ರಭೂಮಿಗಳ ಅಭಿವೃದ್ಧಿಗೆ ₹10 ಲಕ್ಷ, ಪೌರ ಕಾರ್ಮಿಕರ ವಿಶ್ರಾಂತಿ ಗೃಹಕ್ಕೆ ₹16 ಲಕ್ಷ, ವಂತಿಕೆಗೆ ₹8 ಲಕ್ಷ, ಇತರೆ ರಾಜಸ್ವ ವೆಚ್ಚಗಳಿಗೆ ₹13.38 ಲಕ್ಷ ಮೀಸಲಿರಿಸಿದ್ದಾರೆ.
ಒಟ್ಟು ₹16,55,08,200 ಖರ್ಚು ಬಾಬ್ತು ತೆಗೆದಿಟ್ಟು, ಮನೆ ಕಂದಾಯದಿಂದ ₹1.48 ಕೋಟಿ, ನೀರಿನ ಕಂದಾಯದಿಂದ ₹97.25 ಲಕ್ಷ, ಮಳಿಗೆಗಳ ಬಾಡಿಗೆಯಿಂದ ₹80 ಲಕ್ಷ, ಇತರೆ ಕಂದಾಯ ಬಾಬ್ತುಗಳಿಂದ ₹68422000 ಹಾಗೂ ಸರ್ಕಾರದಿಂದ ಬಂದ ಅನುದಾನ ₹61352610 ಒಟ್ಟು ಆದಾಯ ₹162299610 ದಿಂದ ₹3208590 ಉಳಿತಾಯದ ಬಜೆಟ್ ಅನ್ನು ಉಪವಿಭಾಗಾಧಿಕಾರಿ ಅವರು ಮಂಡಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರ ಅನುಮೋದನೆ ಪಡೆದರು.ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಸದಸ್ಯ ಮಹೇಶ್ ಹುಲ್ಮಾರ್ ಆಗ್ರಹಿಸಿದಾಗ ಮುಖ್ಯಾಧಿಕಾರಿ ಭರತ್ ಮಾತನಾಡಿ, ಕಳೆದ ವರ್ಷ ₹10 ಲಕ್ಷ ಮೀಸಲಿಟ್ಟಿದ್ದು ಈ ಬಾರಿ ರೂ.15 ಲಕ್ಷಕ್ಕೆ ಹೆಚ್ಚಿಸಲಾಗಿದೆ ರಾಜ್ಯ ಸರ್ಕಾರದಿಂದ ₹1 ಕೋಟಿ ಹಾಗೂ ಕೇಂದ್ರದ ಅಮೃತ್ 2.0 ಯೋಜನೆಯಡಿ ₹12 ಕೋಟಿ ನೆರವು ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಪಟ್ಟಣದ ಬಹುತೇಕ ಕೆರೆಗಳು ಅಕ್ರಮ ಒತ್ತುವರಿಯಾಗಿ ಮನೆ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಸಾಮಾನ್ಯ ನಿಧಿಯಡಿ ಅಳತೆ ಮೂಲಕ ಕೆರೆ ಜಾಗವನ್ನು ಬಂದೋಬಸ್ತ್ ಮಾಡುವಂತೆ ಹಾಗೂ ಸಾಮಾನ್ಯ ನಿಧಿಯಡಿ ಟ್ಯೂಬ್ ಲೈಟ್ ಗಾಗಿ ಮೀಸಲಿಟ್ಟ ₹20 ಲಕ್ಷ ದಲ್ಲಿ ಎಲ್ಲೆಡೆ ಎಲ್ಇಡಿ ಬಲ್ಬ್‌ಗಳನ್ನು ಅಳವಡಿಸುವಂತೆ ತಿಳಿಸಿದರು.ಸದಸ್ಯ ಗೋಣಿ ಪ್ರಕಾಶ್ ಮಾತನಾಡಿ, ಎಲ್ಇಡಿ ಬಲ್ಬ್‌ಗಳಿಂದ ವಿದ್ಯುತ್ ಉಳಿತಾಯವಾಗಲಿದೆ. ಕೂಡಲೇ ಎಲ್ಲೆಡೆ ಅಳವಡಿಸಿ ಅನುದಾನ ತೊಂದರೆಯಾದಲ್ಲಿ ಸೋಲಾರ್ ದೀಪ ಅಳವಡಿಸಿ. ಇದೀಗ ಪುರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಜನತೆಗೆ ಉತ್ತರ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಸದಸ್ಯ ಉಳ್ಳಿ ದರ್ಶನ್ ದ್ವನಿಗೂಡಿಸಿ, ಜನತೆ ಕನಿಷ್ಠ ದೀಪ ಹಾಕಿಸುವ ಯೋಗ್ಯತೆ ಇಲ್ಲ ಎಂದು ಕಿಡಿಕಾರುತ್ತಿದ್ದು, ಉತ್ತರಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತಾಧಿಕಾರಿ ಯತೀಶ್ ಮಾತನಾಡಿ, ಅಧ್ಯಕ್ಷರ ಆಯ್ಕೆ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆ ಬಜೆಟ್ ಮಂಡಿಸುವ ಅವಕಾಶ ದೊರೆತಿದ್ದು, ಬರಗಾಲದ ಹಿನ್ನೆಲೆ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಸತತ 4 ಗಂಟೆ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀರಿನ ಸಮಸ್ಯೆ ಉದ್ಭವಿಸದಂತೆ ತಾಕೀತು ಮಾಡಿದ್ದಾರೆ. ಖಾಸಗಿ ಬೋರ್‌ವೆಲ್‌ಗಳ ಬಳಸಿಕೊಂಡು, ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಸದಸ್ಯ ನಾಗರಾಜಗೌಡ, ಪಾಲಾಕ್ಷಪ್ಪ, ರೋಷನ್, ಸಾಧಿಕ್ ಅಹ್ಮದ್, ರೂಪಕಲಾ ಹೆಗ್ಡೆ, ಲಕ್ಷ್ಮೀ, ರೇಖಾಬಾಯಿ, ಶೈಲಾ ಮಡ್ಡಿ, ಉಮಾವತಿ, ಸುರೇಶ್, ರಮೇಶ್, ರೇಣುಕಸ್ವಾಮಿ, ಸುನಂದ, ಕಮಲಮ್ಮ, ರೂಪ ಅಧಿಕಾರಿ ರಾಜಕುಮಾರ್, ಉಲ್ಲಾಸ್, ಪರಶುರಾಮಪ್ಪ ಮತ್ತಿತರರು ಹಾಜರಿದ್ದರು.
- - - -7ಕೆ.ಎಸ್.ಕೆ.ಪಿ1:ಶಿಕಾರಿಪುರ ಪುರಸಭೆಯಲ್ಲಿ ಗುರುವಾರ ಉಪವಿಭಾಗಾಧಿಕಾರಿ ಯತೀಶ್ ಬಜೆಟ್ ಮಂಡಿಸಿದರು.