ಶಿಕ್ಷಣದ ಗುಣಮಟ್ಟ ಉನ್ನತಪಡಿಸಲು ಶಿಕ್ಷಾ ಕೋ ಪೈಲೆಟ್ ಯೋಜನೆ: ಸಂತೋಷ್

| Published : Dec 08 2024, 01:17 AM IST

ಶಿಕ್ಷಣದ ಗುಣಮಟ್ಟ ಉನ್ನತಪಡಿಸಲು ಶಿಕ್ಷಾ ಕೋ ಪೈಲೆಟ್ ಯೋಜನೆ: ಸಂತೋಷ್
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಮಕ್ಕಳ ಡಿಜಿಟಲ್ ಜ್ಞಾನ ವಿಕಾಸಕ್ಕಾಗಿ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶಿಕ್ಷಾ ಕೋಪೈಲೆಟ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಾ ಕೋಪೈಲೆಟ್ ಶಿಕ್ಷಣ ಫೌಂಡೇಶನ್‌ನ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಸಂತೋಷ್ ತಿಳಿಸಿದರು. ಶಿಕ್ಷಾ ಕೋಪೈಲೆಟ್ ಯೋಜನೆಯಡಿ ತಿಪಟೂರಿನಲ್ಲಿ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಶಾಲಾ ಮಕ್ಕಳ ಡಿಜಿಟಲ್ ಜ್ಞಾನ ವಿಕಾಸಕ್ಕಾಗಿ ಶಿಕ್ಷಣ ಗುಣಮಟ್ಟವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಶಿಕ್ಷಾ ಕೋಪೈಲೆಟ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಾ ಕೋಪೈಲೆಟ್ ಶಿಕ್ಷಣ ಫೌಂಡೇಶನ್‌ನ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಸಂತೋಷ್ ತಿಳಿಸಿದರು.ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರದಲ್ಲಿ ಶಿಕ್ಷಾ ಕೋಪೈಲೆಟ್ ಯೋಜನೆಯಡಿ ತಿಪಟೂರು, ಚಿಕ್ಕನಾಯಕಹಳ್ಳಿ, ತುರುವೇಕೆರೆ ತಾಲೂಕಿನ ೩೮ ಆಯ್ದ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ಕೃತಕ ಬುದ್ದಿಮತ್ತೆ ಆಧಾರಿತ ಈ ಉಪಕ್ರಮವು ಶಿಕ್ಷಕರಿಗೆ ಆಧುನಿಕ ಡಿಜಿಟಲ್ ಸಾಧನಗಳನ್ನು ಕಲಿಸುವ ಮೂಲಕ ಶ್ರೇಣಿಯ ಕಲಿಕೆಯನ್ನು ಉತ್ತಮಗೊಳಿಸಲು ಯೋಜಿಸಲಾಗಿದೆ. ಶಿಕ್ಷಾ ಕೋಪೈಲೆಟ್ ಶಿಕ್ಷಣ ಫೌಂಡೇಶನ್‌ ಮತ್ತು ಮೈಕ್ರೋಸಾಫ್ಟ್‌ ರಿಸರ್ಚ್ ಇಂಡಿಯಾ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಉಪಕರಣವು ಶಿಕ್ಷಕರಿಗೆ ವೈಯಕ್ತಿಕ ಪಾಠ ಯೋಜನೆಗಳು, ಆಕರ್ಷಕ ಶಿಕ್ಷಣ ಉಪಕರಣಗಳು, ರಿಯಲ್ ಟೈಮ್ ಮೌಲ್ಯಮಾಪನವನ್ನು ರಚಿಸಲು ನೆರವಾಗುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳನ್ನು ಬೆಂಬಲಿಸುತ್ತದೆ. ಇದು ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರಿಗೆ ಸುಲಭವಾಗಿ ಬಳಸಬಹುದಾಗಿದೆ. ಜಿಲ್ಲೆಯ ೩೮ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ೫ನೇ ತರಗತಿಯಿಂದ ೧೦ನೇ ತರಗತಿಯ ವಿಷಯವಾರು ಗಣಿತ, ವಿಜ್ಞಾನ, ಇಂಗ್ಲೀಷ್ ಮತ್ತು ಸಾಮಾಜಿಕ ವಿಜ್ಞಾನ ಬೋಧಿಸುವ ಶಿಕ್ಷಕರು ಬಳಸಬಹುದು ಎಂದರು. ಮತ್ತೋರ್ವ ವ್ಯವಸ್ಥಾಪಕ ತಮ್ಮಣ್ಣ ಮಾತನಾಡಿ, ಶಿಕ್ಷಕರಿಗೆ ವೈಯಕ್ತಿಕ ಮತ್ತು ಪರಿಣಾಮಕಾರಿ ಶಿಕ್ಷಣಕ್ಕಾಗಿ ಎಐ ಆಧಾರಿತ ಸಾಧನಗಳನ್ನು ಪರಿಚಯಿಸುವುದು ಕಾರ್ಯಕ್ರಮ ಉದ್ದೇಶ. ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಯ ಇಲಾಖೆಯ ಸಹಕಾರದೊಂದಿಗೆ ಶಿಕ್ಷಕ ಕೋಪೈಲೆಟ್ ವಿಶೇಷವಾಗಿ ತಿಪಟೂರಿನಂತಹ ಸ್ಥಳಗಳಲ್ಲಿ ಶಿಕ್ಷಣ ಪದ್ದತಿ ಗುಣಮಟ್ಟವು ಹೆಚ್ಚಿಸುವ ಮೂಲಕ ಶ್ರೇಣಿಯ ಹಿತಾಸಕ್ತಿಯನ್ನು ಹೆಚ್ಚಿಸಲಿದೆ. ತಂತ್ರಜ್ಞಾನವನ್ನು ತರಗತಿಗಳೊಂದಿಗೆ ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರದರ್ಶನವನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆ ಎಂದರು.ಈ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ್ದ ಶಿಕ್ಷಕರು ಈ ಉಪಕರಣದ ಸುಲಭ ಬಳಕೆ ಮತ್ತು ಅದರ ಪರಿಣಾಮಕಾರಿತ್ವವನ್ನು ಮೆಚ್ಚಿಕೊಂಡರು. ಪಾಠ ಯೋಜನೆಗಳು ಮತ್ತು ಪ್ರಶ್ನಾವಳಿಗಳನ್ನು ತಯಾರಿಸಲು, ಸಮಯವನ್ನು ಉಳಿಸಲು ಮತ್ತು ಉತ್ತಮ ಗುಣಮಟ್ಟದ ಪಾಠಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಗುರುಮೂರ್ತಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರುಗಳು ಭಾಗವಹಿಸಿದ್ದರು.