ತುಂಗಾ ಆರತಿಗೆ ಶಿವಮೊಗ್ಗ ಸಜ್ಜು: ಶಾಸಕ ಚನ್ನಬಸಪ್ಪ

| Published : Nov 10 2024, 01:45 AM IST

ಸಾರಾಂಶ

ಶಿವಮೊಗ್ಗ ನಗರದ ಶಾಸಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತುಂಗಾ-ಭದ್ರಾ ಉಳಿವು, ಮನುಕುಲದ ಉಳಿವು ಹಾಗೂ ಜಲ ಮೂಲಗಳನ್ನು ಉಳಿಸಬೇಕಿದೆ. ಆದ್ದರಿಂದ, ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನ.10 ರಂದು ಬೆಳಗ್ಗೆ 8.30ಕ್ಕೆ ಪ್ರಬುದ್ಧರ ಸಭೆ ಹಾಗೂ ಸಂಜೆ 6.30ಕ್ಕೆ ಕೋರ್ಪಲಯ್ಯ ಮಂಟಪದ ಬಳಿ ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ನಡೆಯುತ್ತಿರುವ ನಿರ್ಮಲ ತುಂಗಾಭದ್ರಾ ಅಭಿಯಾನದ ಭಾಗವಾದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ನ.9ರಂದು ಸಂಜೆ ಶಿವಮೊಗ್ಗ ನಗರ ಪ್ರವೇಶಿಸಲಿದೆ. ಇಲ್ಲಿ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಸಹಯೋಗದೊಂದಿಗೆ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಗಂಗಾ ನದಿ ಶುದ್ಧೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ಹಲವು ಅಧ್ಯಯನಗಳನ್ನು ನಡೆಸಿದ ಪ್ರತಿಫಲವಾಗಿ ಗಂಗಾನದಿ ಶುದ್ಧವಾಗಿ ಹರಿಯುತ್ತಿದೆ. ಅದೇ ಮಾದರಿಯಲ್ಲಿ ತುಂಗಾ-ಭದ್ರಾ ನದಿ ಶುದ್ಧೀಕರಣಕ್ಕೆ ಒತ್ತು ನೀಡಬೇಕಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತುಂಗಾ-ಭದ್ರಾ ನದಿಗಳನ್ನು ಶುದ್ಧೀಕರಿಸಿ ಉಳಿಸುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಪೂರ್ವ ಭಾವಿ ಸಭೆಗಳು ನಡೆದಿವೆ. ಈ ಸಭೆಯಲ್ಲಿ ಇಲ್ಲಿನ ಶಾಲಾ-ಕಾಲೇಜುಗಳ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರ ಅಭಿಪ್ರಾಯಗಳನ್ನೂ ಸಹ ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ತುಂಗಾ- ಭದ್ರಾ ನದಿಗಳ ಉಳಿಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.

ನಿರ್ಮಲ ತುಂಗಾಭದ್ರಾ ಅಭಿಯಾನದ ಸಂಚಾಲಕ ಗಿರೀಶ್ ಪಟೇಲ್ ಮಾತನಾಡಿ, ಜಲಜಾಗೃತಿ -ಜನಜಾಗೃತಿ ಪಾದಯಾತ್ರೆ ಶೃಂಗೇರಿಯಿಂದ ಆರಂಭಿಸಿ 4ದಿನ ಕಳೆದಿದೆ. ಯಾತ್ರೆಯು ಶುಕ್ರವಾರ ತೀರ್ಥಹಳ್ಳಿಗೆ ತಲುಪಿದೆ. ಜಲಜಾಗೃತಿ ಪಾದಯಾತ್ರೆಗೆ ಪ್ರತಿ ಗ್ರಾಪಂ ಗಳು ಸೇರಿ ಯಾತ್ರೆ ಸಾಗಿದ ದಾರಿಯುದ್ದಕ್ಕು ಜನರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ನುಡಿದರು.

ಪಾದಯಾತ್ರೆ ಸಾಗಿದ ಎಲ್ಲಾ ಕಡೆ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ತೀರ್ಥಹಳ್ಳಿಯಲ್ಲಿ ನಡೆದ ಸಭೆಯಲ್ಲಿ 4 ಸಾವಿರ ಜನರು ಪಾಲ್ಗೊಂಡಿದ್ದರು. ಇಲ್ಲಿ ವಿಶೇಷವಾದ ಅನುಭವ ಈ ಯಾತ್ರೆ ಕಟ್ಟಿಕೊಟ್ಟಿದೆ. ಆರಂಭದಲ್ಲಿ ಕೆಲವು ಗೊಂದಲಗಳಿದ್ದವು. ಆದರೆ, ಸಹಸ್ರಾರು ಸಂಖ್ಯೆಯಲ್ಲಿ ಯಾತ್ರೆಗೆ ಉತ್ತೇಜನ ನೀಡಿದ್ದಾರೆ. ಯಾತ್ರೆಯೊಂದಿಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಜಲಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಎಂ.ಶಂಕರ್, ಎಸ್.ಶಿವಕುಮಾರ್, ಸುರೇಖಾ ಮುರುಳೀಧರ್ ಇದ್ದರು.

*ಇಂದು ಪ್ರಬುದ್ಧರ ಸಭೆ:

ಸಂಪನ್ಮೂಲ ವ್ಯಕ್ತಿಗಳಾಗಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಸಂಚಾಲಕ ಬಸವರಾಜ್ ಪಾಟೀಲ್ ವೀರಾಪುರ, ಜಿಲ್ಲಾ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ಮತ್ತು ಮುಖ್ಯ ಅತಿಥಿಯಾಗಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಭಾಗಿಯಾಗಲಿದ್ದಾರೆ ಎಂದರು.

*ತುಂಗಾ ಆರತಿ:

ಇಂದು ಸಂಜೆ 6:30ಕ್ಕೆ ನಡೆಯುವ ತುಂಗಾ ಆರತಿಯಲ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿ ಗಣ್ಯರು ಪಾಲ್ಗೊಳ್ಳುವರು ಎಂದರು.

ನಾಳೆ ಯುವ ಜಾಗೃತಿ-ಪ್ರಬುದ್ಧ ಸಭೆ

ನಗರದ ಕುವೆಂಪು ರಂಗಮಂದಿರದಲ್ಲಿ ನ.11 ರಂದು ಬೆಳಗ್ಗೆ 8 ಗಂಟೆಗೆ ಯುವ ಜಾಗೃತಿ ಕಾರ್ಯಕ್ರಮ ಆಯೋಜಿಲಾಗಿದೆ ಎಂದು ಚನ್ನಬಸಪ್ಪ ಹೇಳಿದರು. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ- ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.