ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಈಗಾಗಲೇ ಬರದಿಂದ ಕಂಗಾಲಾಗಿರುವ ರೈತರಿಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ (ಶಿಮುಲ್) ಹಾಲಿನ ದರದಲ್ಲಿ ದಿಢೀರನೇ ₹2 ಇಳಿಕೆ ಮಾಡಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ.ಡಿ.21ರಿಂದಲೇ ಈ ಆದೇಶ ಜಾರಿಯಾಗಿದ್ದು, ಬರಗಾಲದ ವೇಳೆ ಹಾಲು ಖರೀದಿ ದರ ಇಳಿಕೆ ನಿರ್ಧಾರವು, ಸಾವಿರಾರು ಹಾಲು ಉತ್ಪಾದಕರಿಗೆ ಹೊರೆಯಾಗಿ ಪರಿಣಮಿಸುವಂತಾಗಿದೆ. ಹಾಲಿನ ಉತ್ಪಾದನೆಗೂ, ಮಾರಾಟಕ್ಕೂ ತಾಳೆಯಾಗದ ಕಾರಣ ಒಕ್ಕೂಟ ನಷ್ಟದ ಹಾದಿಗೆ ಹೊರಳಿದೆ. ನಷ್ಟದ ಸುಳಿಗೆ ಸಲುಕಿರುವ ಶಿಮುಲ್ ಹಾನಿ ತಪ್ಪಿಸಲು ರೈತರಿಗೆ ಕೊಡುವ ಹಾಲಿನ ದರವನ್ನು ಲೀ.ಗೆ ₹2 ಇಳಿಸಿದೆ. ಕಳೆದ ಏಪ್ರಿಲ್‌ನಲ್ಲೂ ಶಿಮುಲ್ ಸುಮಾರು ₹26.89 ಕೋಟಿ ನಷ್ಟದಲ್ಲಿದೆ ಎಂದು ಶಿಮುಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರ ಕೊಟ್ಟಿದ್ದನ್ನು ಕಿತ್ತುಕೊಂಡ ಶಿಮುಲ್:ಜುಲೈನಲ್ಲಿ ಹಾಲಿನ ದರ ಪರಿಷ್ಕರಣೆ ಮಾಡಿದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ₹3 ಬೆಲೆ ಹೆಚ್ಚಳ ಮಾಡಿ, ಈ ಹಣವನ್ನು ರೈತರಿಗೆ ನೀಡುವಂತೆ ಸೂಚಿಸಿತ್ತು. ಸರ್ಕಾರ ಬೆಲೆ ಹೆಚ್ಚಳ ಮಾಡದಿದ್ದರಿಂದ ಒಂದೆಡೆ ರೈತರು ಬೆಲೆ ಹೆಚ್ಚಾಯಿತು ಎಂದು ಕೊಂಚ ನೆಮ್ಮದಿ ಕಂಡಿದ್ದರೆ, ಮತ್ತೊಂದೆಡೆ ನಾವು ನೀಡುತ್ತಿರುವ ಹೆಚ್ಚುವರಿ ಹಣ ರೈತರಿಗೆ ತಲುಪುತ್ತಿದೆ ಎಂಬ ಸಮಾಧಾನದಲ್ಲಿ ಗ್ರಾಹಕರು ಇದ್ದರು. ಆದರೆ, 5 ತಿಂಗಳಲ್ಲೇ ₹2 ದರ ಇಳಿಕೆ ಮೂಲಕ ಸರ್ಕಾರ ಕೊಟ್ಟಿದ್ದ ಹೆಚ್ಚಿನ ಬೆಲೆಯನ್ನು ಒಕ್ಕೂಟ ರೈತರಿಂದ ಕಸಿದುಕೊಂಡಂತಾಗಿದೆ.
ಮಾಹಿತಿ ನೀಡದೇ ದರ ಕಡಿತ:ಕಳೆದ ತಿಂಗಳಿನಲ್ಲಿ ರೈತರಿಂದ ಖರೀದಿಸುವ ಹಾಲಿಗೆ ಪ್ರತಿ ಲೀಟರ್‌ಗೆ ₹1.50 ಕಡಿತ ಮಾಡಿತ್ತು. ಈಗ ಮತ್ತೆ ₹2 ದರ ಕಡಿತ ಮಾಡಿದೆ. ದರ ಕಡಿತಕ್ಕೂ ಮುನ್ನ ಶಿಮುಲ್ ಹಾಲು ಉತ್ಪಾದಕರ ಅಹವಾಲು ಆಲಿಸುವ ಕಾರ್ಯ ನಡೆಸಿಲ್ಲ. ಡಿ.21 ರಂದು ಬೆಳಗ್ಗೆ ಹಾಲು ಖರೀದಿ ಕೇಂದ್ರದಲ್ಲಿ ದರ ಕಡಿತದ ಮಾಹಿತಿ ಪ್ರಕಟಣೆ ನಂತರವಷ್ಟೆ ವಿಷಯ ಗೊತ್ತಾಗಿದೆ ಎಂದು ಕೆಲ ರೈತರು ದೂರಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಣೆಯಾಗಿವೆ. ಈ ಭಾಗದಲ್ಲಿ ಹಿಂಗಾರು, ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಮೇವಿನ ಕೊರತೆ ಎದುರಾಗಿದೆ. ದುಬಾರಿ ಬೆಲೆ ತೆತ್ತು ಮೇವು ಖರೀದಿಸಿ ರಾಸು ಸಾಕುವ ಪರಿಸ್ಥಿತಿ ರೈತರಿಗೆ ಎದುರಾಗಿದೆ. ಇಂತಹ ಸಮಯದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಒಕ್ಕೂಟದ ಹಾಲಿನ ಬೆಲೆ ಕಡಿತ ಮಾಡಿರುವುದು ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.- - -
ಬಾಕ್ಸ್ 7 ಲಕ್ಷದಲ್ಲಿ ಕೇವಲ 3.20 ಲಕ್ಷ ಲೀ. ಮಾರಾಟ! ಒಕ್ಕೂಟಕ್ಕೆ ಪ್ರತಿನಿತ್ಯ ಸರಾಸರಿ 7 ಲಕ್ಷ ಲೀಟರ್‌ನಷ್ಟು ಹಾಲು ಸರಬರಾಜಾಗುತ್ತಿದೆ. ಇದರಲ್ಲಿ ಮಾರಾಟ ಆಗುತ್ತಿರುವುದು ಸರಿಸುಮಾರು 3.20 ಲಕ್ಷ ಲೀಟರ್ ಮಾತ್ರವಾಗಿದೆ. ಉಳಿದ ಹಾಲನ್ನು ಇತರೇ ಉಪ ಉತ್ಪನ್ನಗಳ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ಈ ಹಿಂದೆ ಹಾಲಿನ ಬೆಲೆ ಏರಿಕೆ ಆದಾಗ, ಹೆಚ್ಚಿನ ದರವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾಯಿಸಲಾಗುತ್ತಿದೆ. ಹಾಗೆಯೇ, ಕ್ಷೀರಭಾಗ್ಯ ಯೋಜನೆಯಡಿ ಶಾಲೆಗಳಿಗೆ ಸರಬರಾಜು ಮಾಡುತ್ತಿರುವ ಹಾಲಿನ ಪುಡಿಗೆ ಸರ್ಕಾರ ನೀಡುತ್ತಿರುವ ದರವು ಕೂಡ ಕಡಿಮೆಯಿದೆ. ಈ ಎಲ್ಲ ಕಾರಣಗಳಿಂದ ಪ್ರತಿ ತಿಂಗಳು ಕೋಟ್ಯಂತರ ರು. ನಷ್ಟವಾಗುತ್ತಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.- - - ಕೋಟ್
ಬರಗಾಲದಲ್ಲಿ ಹಾಲು ಮಾರಾಟ ಮಾಡಿ ಹಲವು ರೈತರು ಜೀವನ ನಡೆಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಾಲಿನ ದರ ಕಡಿತ ಮಾಡಿರುವುದು ಅಕ್ಷಮ್ಯ ಅಪರಾಧ. ಬರಗಾರದಲ್ಲಿ ರೈತರಿಗೆ ಹಾಲಿನ ದರ ಜಾಸ್ತಿ ಮಾಡಬೇಕಿತ್ತು. ಅದನ್ನು ಬಿಟ್ಟು ಕಡಿಮೆ ಮಾಡಿರುವುದು ಖಂಡನೀಯ. ಒಂದು ಕಡೆ ಡೈರಿಯಿಂದ ಕೊಡುವ ಫುಡ್‌ಗೆ ಬೆಲೆ ಜಾಸ್ತಿ ಮಾಡುತ್ತಾರೆ. ಇನ್ನೊಂದು ಕಡೆ ಖರೀದಿ ಹಾಲಿನ ದರ ಕಡಿಮೆ ಮಾಡುತ್ತಾರೆ. ಇದನ್ನು ಖಂಡಿಸಿ ಮುಂದಿನ ದಿನದಲ್ಲಿ ಹಾಲು ಉತ್ಪಾದಕರೊಂದಿಗೆ ಬೀದಿಗಿಳಿದು ಹೋರಾಟ ಮಾಡಲಾಗುವುದು- ಎಚ್.ಆರ್.ಬಸವರಾಜಪ್ಪ, ರಾಜ್ಯಾಧ್ಯಕ್ಷ, ರೈತ ಸಂಘ
- - - -24ಎಸ್‌ಎಂಜಿಕೆಪಿ03: ಎಚ್.ಆರ್.ಬಸವರಾಜಪ್ಪ