ಬರದ ಸೀಮೆಗೆ ಶಿಂಗಟಾಲೂರು ಏತ ನೀರಾವರಿ ವರದಾನ

| Published : Sep 20 2025, 01:01 AM IST

ಸಾರಾಂಶ

ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ (ಹುಲಿಗುಡ್ಡ) ಯೋಜನೆಯಿಂದ ಮುಂಡರಗಿ, ಹಡಗಲಿ, ಕೊಪ್ಪಳ, ಗದಗ ಜಿಲ್ಲೆಯ ರೈತರಿಗೆ ವರದಾನವಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ (ಹುಲಿಗುಡ್ಡ) ಯೋಜನೆಯಿಂದ ಮುಂಡರಗಿ, ಹಡಗಲಿ, ಕೊಪ್ಪಳ, ಗದಗ ಜಿಲ್ಲೆಯ ರೈತರಿಗೆ ವರದಾನವಾಗಿದೆ.

ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿ 2013ರಲ್ಲಿ ಶಿಂಗಟಾಲೂರ ಯೋಜನೆ ನಾಡಿಗೆ ಸಮರ್ಪಣೆ ಮಾಡುತ್ತಿದ್ದಂತೆ ಬರದ ನಾಡಾಗಿರುವ ಗದಗ, ಮುಂಡರಗಿ, ಹೂವಿನಹಡಗಲಿ, ಕೊಪ್ಪಳ ಭಾಗದ ರೈತರಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿತು.

ಡಂಬಳದ ಬೃಹತ್ ಕೆರೆ, ಬಸಾಪೂರ ಕೆರೆ, ಹಿರೇವಡ್ಡಟ್ಟಿ ಕೆರೆ, ತಾಂಬರಗುಂಡಿ ಕೆರೆ, ಪೇಠಾಲೂರ ಕೆರೆ, ಜಂತ್ಲಿ-ಶಿರೂರ ಕೆರೆಗಳು ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಹರ್ಷ ತುಂಬಿದೆ.

ಮಳೆ ಕೊರತೆಯಿಂದ ಈ ಭಾಗದ ಹಳ್ಳ-ಕೊಳ್ಳಗಳು ಬತ್ತಿ ಬರದಾಗುತ್ತಿದ್ದವು. ರೈತ ಕುಟುಂಬಗಳು ಗೋವಾ, ಮಂಗಳೂರು, ಮಹಾರಾಷ್ಟ್ರಗಳಿಗೆ ದುಡಿಯಲು ಗುಳೆಹೋಗಿ ಹೊಟ್ಟ್ಎ ಹೊರೆಯುತ್ತಿದ್ದವು. ಕೆಲ ರೈತರು ಸಾಲದ ದವಡೆಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ ಈ ಯೋಜನೆಗೆ ಹಣಕಾಸು ನೆರವು ನೀಡಿ 1991ರಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಅನುಷ್ಠಾನ ಮಾಡಿಸಿದರು.

ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ ಹಾಗೂ ಶಾಸಕರಾದ ಜಿ.ಎಸ್. ಪಾಟೀಲರ ಮುತುವರ್ಜಿಯಿಂದ ಈ ಯೋಜನೆ ಪೂರ್ಣಗೊಂಡಿತು.

1991ರಲ್ಲಿ ಮುಂಡರಗಿ ಶಾಸಕರಾಗಿದ್ದ ಎಸ್.ಎಸ್. ಪಾಟೀಲರು ಹಾಗೂ ಸಚಿವರಾಗಿದ್ದ ಎಂ.ಪಿ. ಪ್ರಕಾಶ ಅವರು 6 ಟಿಎಂಸಿ ನೀರು ಬಳಕೆಗೆ ಮಂಜೂರಾತಿ ನೀಡಿ ಯೋಜನೆ ಆರಂಭಿಸಿದ್ದರು. ಎಚ್.ಕೆ. ಪಾಟೀಲರು ಕೆ.ಸಿ. ರೆಡ್ಡಿ ವರದಿಯನ್ನು ಧಿಕ್ಕರಿಸಿ 18 ಟಿಎಂಸಿ ನೀರು ಬಳಕೆಗೆ ಯೋಜನೆ ಸಿದ್ಧಪಡಿಸಿ ಮಂಜೂರಾತಿ ನೀಡಿದ್ದರು.

ರೈತರು ನೀರು ಬಳಸಿಕೊಂಡು ಈರುಳ್ಳಿ, ಗೋವಿನಜೋಳ, ಹತ್ತಿ, ಕಬ್ಬು, ಸೂರ್ಯಕಾಂತಿ ಬೆಳೆದು ತೋಟಗಾರಿಕೆ ಬೆಳೆಗಳಾದ ಪೇರಲ, ಬಾರೆ, ದಾಳಿಂಬೆ, ಬಾಳೆ ಸೇರಿದಂತೆ ನೀರಾವರಿ ಬೆಳೆಗಳನ್ನು ಬೆಳೆಯುವಲ್ಲಿ ಚೂಣಿಯಲ್ಲಿದ್ದಾರೆ.

ಕೆರೆ, ಹಳ್ಳ, ಸರೋವರಗಳಲ್ಲಿ ನೀರು ಧುಮುಕುತ್ತಿರುವುದರಿಂದ ಬತ್ತಿ ಹೋಗಿದ್ದ ಬೋರವೆಲ್‌ಗಳಲ್ಲಿ ನೀರು ಚಿಮ್ಮುತ್ತಿದ್ದರಿಂದ ಗೋವಿನಜೋಳ, ಸೂರ್ಯಕಾಂತಿ, ಈರುಳ್ಳಿ, ವಿವಿಧ ತರಕಾರಿ, ವಿವಿಧ ತಳಿಯ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

ಈ ಭಾಗದಲ್ಲಿ ಬರಗಾಲ, ರೈತರ ಆತ್ಮಹತ್ಯೆಯನ್ನು ತಡೆಯಬೇಕು ಎನ್ನುವ ಹಿನ್ನೆಲೆಯಲ್ಲಿ ರೈತ ಸಮೂಹವನ್ನು ಆರ್ಥಿಕವಾಗಿ ಮುಖ್ಯ ವಾಹಿನಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ ಅವರ ಸಹಕಾರದ ಮೇರೆಗೆ ನೂರಾರು ಕೋಟಿ ಅನುದಾನ ತಂದು ಕೆರೆಗಳನ್ನು ಭರ್ತಿ ಮಾಡಿ ಈ ಭಾಗವನ್ನು ನೀರಾವರಿ ಮಾಡಲು ಸಾಧ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ. ಪಾಟೀಲ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರ ಕಾಳಜಿಯಿಂದಾಗಿ ಶಿಂಗಟಾಲೂರ ಯೋಜನೆ ಪೂರ್ಣಗೊಂಡು ರೈತರ ಮುಖದಲ್ಲಿ ನಗು ಅರಳಿದೆ ಎಂದು ಯುವ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.