ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ಶಿರಾ ದೊಡ್ಡ ಕೆರೆಯತ್ತ ಹರಿಯುತ್ತಿದ್ದು, ದೊಡ್ಡ ಕೆರೆ ಭರ್ತಿಯಾಗಲು ಇನ್ನೂ ಕೇವಲ ೪.೫ ಅಡಿ ಬಾಕಿ ಇದೆ. ಕೆರೆ ತುಂಬಿದ ತಕ್ಷಣ ಮದಲೂರು ಕೆರೆಗೆ ನೀರು ಹರಿಯಲಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಪ್ರವಾಸಿ ಮಂದಿರದಲ್ಲಿ ೧೦ ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ಗೆ ಚಾಲನೆ ನೀಡಿ, ನಗರದ ೧ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನಂತರ ನಗರಸಭೆ ವತಿಯಿಂದ ಸುಮಾರು ೨ ಕೋಟಿ ರು.ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿಯೇ ಶಿರಾ ನಗರವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ನಗರದಲ್ಲಿ ಜನಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಪ್ರತಿ ಮನೆ ಮನೆಗೂ ನೀರೊದಗಿಸಲು ಕೇಂದ್ರ ಸರ್ಕಾರ ಪುರಸ್ಕೃತ ಜೆಜೆಎಂ ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆ ಎಂದರು. ನಗರೋತ್ಥಾನ ೩ನೇ ಹಂತದ ಅನುದಾನದಲ್ಲಿ ಸುಮಾರು ೧.೧೫ ಕೋಟಿ ವೆಚ್ಚದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ಜಲ ಸಂಗ್ರಹ, ಹಳೆ ಆಸ್ಪತ್ರೆ ಹಾಗೂ ಡಾ. ಬಿಆರ್ ಅಂಬೇಡ್ಕರ್ ಉದ್ಯಾನವನದ ಬಳಿ ೨೨ ಲಕ್ಷದಲ್ಲಿ ನಿರ್ಮಿಸಿರುವ ಎರಡು ಶೌಚಾಲಯಗಳು, ೮ ಲಕ್ಷ ರು. ವೆಚ್ಚದಲ್ಲಿ ಕಲ್ಲು ಕೋಟೆಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ, ೯ ಲಕ್ಷ ರು. ವೆಚ್ಚದ ಬುಕ್ಕಾಪಟ್ಟಣ ಸರ್ಕಲ್ ನಲ್ಲಿ ನಿರ್ಮಿಸಿರುವ ಎಲ್ಇಡಿ ಪ್ರದರ್ಶನ ಪರದೆ, ೧೧ ಲಕ್ಷ ರು. ವೆಚ್ಚದಲ್ಲಿ ಮನೆ ಮನೆ ಕಸ ಸಂಗ್ರಹಣೆ ಮಾಡುವ ವಾಹನ, ೧೨ ಲಕ್ಷ ರು. ವೆಚ್ಚದ ಹಸಿ ಕಸ ಮತ್ತು ಒಣ ಕಸ ವಿಂಗಡಿಸಲು ಎಲ್ಲಾ ವಾರ್ಡ್ ಸುಮಾರು ೧೪೫೦೦ ನಿವಾಸಿಗಳಿಗೆ ಡಸ್ಟ್ ಬಿನ್ ವಿತರಣೆ, ೮ ಲಕ್ಷ ರು. ವೆಚ್ಚದಲ್ಲಿ ೧೨೦ ಫಲಾನುಭವಿಗಳಿಗೆ ಅನಿಲ ಸಂಪರ್ಕ ವಿತರಣೆ ಹಾಗೂ ೨.೪ ಲಕ್ಷ ರು. ವೆಚ್ಚದಲ್ಲಿ ಪೌರಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಎಸ್. ಅಜಯ್ ಕುಮಾರ್, ನಗರಸಭೆ ಪೌರಾಯುಕ್ತ ರುದ್ರೇಶ್, ನಗರಸಭೆ ಸದಸ್ಯರುಗಳಾದ ರಂಗರಾಜು, ಆರ್ ರಾಮು, ಶಿವಶಂಕರಪ್ಪ, ಬುರಾನ್ ಮೊಹಮದ್, ಉಮಾ ವಿಜಯರಾಜ್, ಮುಖಂಡರುಗಳಾದ ಆರ್. ಉಗ್ರೇಶ್, ಮಜರ, ಫರ್ಮನ್, ವಿಜಯಕುಮಾರ್ ಭಾನುಪ್ರಕಾಶ್, ನಸ್ರುಲ್ಲಾ ಖಾನ್, ಅಬ್ದುಲ್ ಖಾನ್, ಪರಿಸರ ಎಂಜಿನಿಯರ್ ಪಲ್ಲವಿ, ಇಂಜಿನಿಯರ್ ಶಾರದ, ಸೇರಿದಂತೆ ಹಲವರು ಹಾಜರಿದ್ದರು.